Government Employees : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ ಸುಲಭದ ಮಾತಲ್ಲ. ಜವಾನನ ಕೆಲಸಕ್ಕೂ ಕೂಡ ಇಂಜಿಯರ್ ಓದಿದವರು ಅರ್ಜಿ ಸಲ್ಲಿಸುತ್ತಾರೆ. 100 ಹುದ್ದೆ ಇದ್ದರೆ ಅದಕ್ಕೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಇಷ್ಟೊಂದು ಸ್ಪರ್ಧೆ ಇರುವಾಗ ಸರ್ಕಾರಿ ಕೆಲಸ ಗಿಟ್ಟಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಹೀಗಿರುವಾಗ ಒಂದೇ ಕುಟುಂಬದ ನಾಲ್ವರಿಗೆ ಸರ್ಕಾರಿ ಕೆಲಸ ಸಿಗುವುದೆಂದರೆ ನಿಜಕ್ಕೂ ಅಚ್ಚರಿಯೇ ಸರಿ. ಇಂತಹ ಘಟನೆಗಳು ತುಂಬಾ ಅಪರೂಪವಾಗಿ ಕಾಣಸಿಗುತ್ತವೆ. ಆಂಧ್ರ ಪ್ರದೇಶದ ಕುಟುಂಬವೊಂದರಲ್ಲಿ ನಾಲ್ವರು ಸಹೋದರಿಯರು ಸರ್ಕಾರಿ ಕೆಲಸ ಗಿಟ್ಟಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಅಂದಹಾಗೆ, ಹೆಣ್ಣು ಮಗಳು ಕುಟುಂಬಕ್ಕೆ ಹೊರೆ ಎನ್ನುವ ಕಾಲ ಇದೀಗ ದೂರವಾಗುತ್ತಿದೆ. ಈ ಹಿಂದೆ ಹೆಣ್ಣು ಮಗು ಹುಟ್ಟಿದರೆ ಶಾಪ ಎನ್ನುತ್ತಿದ್ದರು. ಕುಟುಂಬಕ್ಕೆ ಹೊರೆಯೆಂದು ಪರಿಗಣಿಸುತ್ತಿದ್ದರು. ಎಷ್ಟೋ ಮಂದಿ ಹುಟ್ಟಿದ ಹೆಣ್ಣು ಮಕ್ಕಳನ್ನು ಕೊಂದಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹುಟ್ಟಿನಿಂದ ಹಿಡಿದು ಬೆಳೆಸಿ ಮದುವೆ ಮಾಡುವವರೆಗೂ ಹೆಣ್ಣು ಹೊರೆ ಎಂದುಕೊಳ್ಳುತ್ತಿದ್ದರು. ಇಂದಿಗೂ ಕೆಲವರಲ್ಲಿ ಈ ಭಾವನೆ ಹಾಗೇ ಇದೆ. ಆದರೆ, ಆಂಧ್ರಪ್ರದೇಶದ ಈ ಮಹಾತಾಯಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಏಕೆಂದರೆ, ತಮ್ಮ ನಾಲ್ಕು ಹೆಣ್ಣು ಮಕ್ಕಳನ್ನು ಸರ್ಕಾರಿ ಉದ್ಯೋಗಿಗಳನ್ನಾಗಿ ಮಾಡಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಈ ಮಹಾತಾಯಿ ಮಾಡುತ್ತಿರುವುದು ಕೃಷಿ ಕೆಲಸ. ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಸಾಕಷ್ಟು ಶ್ರಮಿಸಿದ್ದಾರೆ. ಇದೀಗ ತನ್ನ ಮಕ್ಕಳು ಸರ್ಕಾರಿ ಕೆಲಸ ಗಿಟ್ಟಿಸಿರುವುದಿಂದ ಆ ತಾಯಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಚಿತ್ತೂರು ಜಿಲ್ಲೆಯ ಪುಂಗನೂರು ಮಂಡಲದ ಮುನಿ ವೆಂಕಟಪ್ಪ ಮತ್ತು ಗೌರಮ್ಮ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಅವರದು ಸಾಮಾನ್ಯ ಕೃಷಿ ಕುಟುಂಬ. ಜೀವನ ನಡೆಸಲು ಕೃಷಿಯನ್ನೇ ಅವಲಂಬಿಸಿದ್ದರು ಕೂಡ ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಸರಿಯಾದ ಆದಾಯ ಒದಗಿಸದ ಕೃಷಿಯನ್ನೇ ನಂಬಿದ್ದ ದಂಪತಿ, ಯಾವುದರಲ್ಲೂ ರಾಜಿ ಮಾಡಿಕೊಳ್ಳದೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಬಯಸಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. 2007 ರಲ್ಲಿ, ಕುಟುಂಬದ ಆಧಾರಸ್ತಂಭವಾಗಿದ್ದ ಮುನಿ ವೆಂಕಟಪ್ಪ ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. ಆಗಿನ್ನೂ ಮಕ್ಕಳು ಚಿಕ್ಕವರಾಗಿದ್ದರು. ಈ ಘಟನೆಯಿಂದ ತಾಯಿ ಗೌರಮ್ಮ ಹತಾಶೆಯ ಸ್ಥಿತಿಗೆ ಹೋದರು. ಆದರೆ, ತಮ್ಮ ಮಕ್ಕಳಿಗಾಗಿ ಗಂಡನ ಸಾವಿನ ಆಘಾತದಿಂದ ಬೇಗನೆ ಚೇತರಿಸಿಕೊಂಡರು ಮತ್ತು ತನ್ನ ನಾಲ್ವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಧೈರ್ಯವನ್ನು ಒಟ್ಟುಗೂಡಿಸಿದರು.
ತಮ್ಮ ತಾಯಿಯ ಕಷ್ಟವನ್ನು ಬಹಳ ಹತ್ತಿರದಿಂದ ನೋಡಿದ ನಾಲ್ವರು ಹೆಣ್ಣುಮಕ್ಕಳಾದ ವೀಣಾಕುಮಾರಿ, ವಾಣಿ, ವನಜಾಕ್ಷಿ ಹಾಗೂ ಸಿರಿಶಾ ಸಾಧ್ಯವಾದಾಗಲೆಲ್ಲಾ ತಾಯಿಗೆ ಸಹಾಯ ಮಾಡುತ್ತಾ ತಮ್ಮ ಅಧ್ಯಯನದತ್ತ ಗಮನಹರಿಸಿದರು. ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ಸಹೋದರಿಯರು ಸರ್ಕಾರಿ ಉದ್ಯೋಗವನ್ನು ಪಡೆಯುವ ಗುರಿಯನ್ನು ಹೊಂದಿದ್ದರು. ತಮ್ಮ ಕಷ್ಟಗಳನ್ನು ಲೆಕ್ಕಿಸದೆ, ಅವರು ಬ್ಯಾಂಕ್ ಉದ್ಯೋಗಗಳು, ಪೊಲೀಸ್, ಶಿಕ್ಷಕಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದರು. ಕೊನೆಗೆ ಅವರ ಕಠಿಣ ಪರಿಶ್ರಮಕ್ಕೆ ಫಲ ಕೂಡ ಸಿಕ್ಕಿತು.
ಸಹೋದರಿಯರಲ್ಲಿ ಹಿರಿಯ ಮಗಳು ವೀಣಾಕುಮಾರಿ 2014 ರಲ್ಲಿ ಕಾನ್‌ಸ್ಟೆಬಲ್ ಕೆಲಸ ಪಡೆದರು. ಎರಡನೇ ಮಗಳು ವಾಣಿ 2016 ರ ಡಿಎಸ್‌ಸಿಯಲ್ಲಿ ಎಸ್‌ಜಿಟಿ ಆಗಿ ಕೆಲಸ ಪಡೆದರು. ಎರಡು ವರ್ಷಗಳೊಳಗೆ ಇಬ್ಬರು ಹೆಣ್ಣುಮಕ್ಕಳಿಗೆ ಸರ್ಕಾರಿ ಉದ್ಯೋಗಗಳು ಸಿಕ್ಕಾಗ ತಾಯಿಯ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಅಲ್ಲದೆ, ಸರ್ಕಾರಿ ಕೆಲಸದಲ್ಲಿದ್ದ ಹುಡುಗರಿಗೆ ಮದುವೆ ಮಾಡಿಕೊಟ್ಟರು. ಇತರ ಇಬ್ಬರು ಹೆಣ್ಣುಮಕ್ಕಳು ಸಹ ತನ್ನ ತಾಯಿಯ ಕನಸುಗಳನ್ನು ನನಸಾಗಿಸಿದರು ಮತ್ತು ಸರ್ಕಾರಿ ಉದ್ಯೋಗಗಳನ್ನು ಪಡೆದರು. ಕಳೆದ ತಿಂಗಳು ಬಿಡುಗಡೆಯಾದ ಪೊಲೀಸ್ ಉದ್ಯೋಗ ಫಲಿತಾಂಶಗಳಲ್ಲಿ, ಮೂರನೇ ಮಗಳು ವನಜಾಕ್ಷಿ ಕಾನ್‌ಸ್ಟೆಬಲ್ ಆಗಿ ಆಯ್ಕೆಯಾದರು ಮತ್ತು ಇತ್ತೀಚೆಗೆ ಬಿಡುಗಡೆಯಾದ ಎಪಿ ಮೆಗಾ ಡಿಎಸ್‌ಸಿ ಫಲಿತಾಂಶಗಳಲ್ಲಿ, ನಾಲ್ಕನೇ ಮಗಳು ಸಿರಿಶಾ ಮಾಧ್ಯಮಿಕ ದರ್ಜೆಯ ಶಿಕ್ಷಕಿಯಾಗಿ ಆಯ್ಕೆಯಾದರು.
ಎಲ್ಲ ನಾಲ್ವರು ಮಕ್ಕಳು ಸರ್ಕಾರಿ ಕೆಲಸದಲ್ಲಿರುವುದರಿಂದ ಆ ತಾಯಿಯ ಆನಂದವನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ಒಂದು ಕಡೆ ಗಂಡ ಸತ್ತರೂ ಆ ಬಗ್ಗೆ ಹೆಚ್ಚು ದುಃಖಿಸದೇ ಬಂದಂತೆ ಬದುಕು ಸ್ವೀಕರಿಸು ಎಂಬಂತೆ ಗೌರಮ್ಮ ತನ್ನ ಮಕ್ಕಳಿಗಾಗಿ ಜೀವನ ಮುಡಿಪಾಗಿಟ್ಟರು ಮತ್ತು ಒಳ್ಳೆಯ ಶಿಕ್ಷಣ ಕೊಡಿಸಿದರು. ಇದೀಗ ಅವರೆಲ್ಲರನ್ನೂ ಸರ್ಕಾರಿ ನೌಕರರನ್ನಾಗಿ ಮಾಡಿ, ಎಲ್ಲರಿಗೂ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲ, ಆ ನಾಲ್ವರು ಹೆಣ್ಣುಮಕ್ಕಳು ಕೂಡ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ. (ಏಜೆನ್ಸೀಸ್)