ನ್ಯೂಸ್

ಚುಚ್ಚುವ ವೇಳೆ ಆದ ಎಡವಟ್ಟು; ಸರಿಪಡಿಸಲು ಹೋಗಿ ಬಲಗಿವಿ ಕಳೆದುಕೊಂಡ ಮಹಿಳೆ

Webdesk - Manjunatha B

ಗುರುಗ್ರಾಮ: ಕಿವಿ ಚುಚ್ಚುವ ವೇಳೆ ಆದ ಎಡವಟ್ಟನ್ನು ಸರಿಪಡಿಸಲು ಹೋಗಿ ಸಲೂನ್​ ಮಾಲೀಕರೊಬ್ಬರು ಗ್ರಾಹಕರ ಜೀವಕ್ಕೆ ಕುತ್ತು ತಂದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿರುವ ನ್ಯೂ ಕಾಲೋನಿಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಸಂತ್ರಸ್ತೆ ಪೂಜಾ ನೀಡಿದ ದುರಿನ ಮೇರೆಗೆ ಗುರುಗ್ರಾಮ ಪೊಲೀಸರು ಸಲೂನ್​ ಮಾಲಕಿ ಜ್ಯೋತಿ ನರುಲಾರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಹಿನ್ನಲೆ?

ಸಂತ್ರಸ್ತೆ ಪೂಜಾ ಕಳೆದ ವರ್ಷ ಜೂನ್​ ತಿಂಗಳಲ್ಲಿ ಆರೋಪಿ ನಡೆಸುತ್ತಿದ್ದ ಸಲೂನ್​ಗೆ ಹೋಗಿ ಕಿವಿ ಚುಚ್ಚಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಅವರ ಬಲಗಿವಿಯ ಕೆಳಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಸಲೂನ್​ ಮುಖ್ಯಸ್ಥೆ ಜ್ಯೋತಿ ನರುಲಾ ಅರವನ್ನು ಸಂಪರ್ಕಿಸಿ ಸರಿಪಡಿಸುವಂತೆ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಆರೋಪಿ ನೀಡಿದ ಚಿಕಿತ್ಸೆಯಿಂದ ಸಮಸ್ಯೆ ಹೆಚ್ಚಾಗುತ್ತ ಹೋದಾಗ ಸಂತ್ರಸ್ತೆ ವೈದ್ಯರನ್ನು ಸಂಪರ್ಕಿಸಿದಾಗ ಬಲಗಿವಿಯ ಪಿನ್ನಾ ಸಂಪೂರ್ಣವಾಗಿ ಹಾಳಾಗಿರುವ ಕಾರಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಿದ್ಧಾರೆ. ಬಳಿಕ ದೂರುದಾರರಾದ ಪೂಜಾ ಸಲೂನ್​ ಮುಖ್ಯಸ್ಥೆಯನ್ನು ಸಂಪರ್ಕಿಸಿದಾಗ 1.5 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಒಪ್ಪಿಕೊಂಡಿದ್ದಾರೆ.

ದೂರು ದಾಖಲಿಸಿಕೊಳ್ಳಲು ನಕಾರ

ಶಸ್ತ್ರಚಿಕಿತ್ಸೆಯ ದಿನ ಹತ್ತಿರವಾಗುತ್ತಿದ್ದಂತೆ ಆರೋಪಿ ಸಂತ್ರಸ್ತೆಗೆ ಹಣ ಕೊಡದೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ಧಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ಸ್ವೀಕರಿಸಲಿಲ್ಲ. ಬಳಿಕ ಹರಿಯಾಣ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಪ್ರಕರಣ ದಾಖಲಿಸಿಕೊಳ್ಳುವಂತೆ ಹೇಳಿದ್ದರು ಯಾವುದೇ ಪ್ರಯೋಜನವಾಗಲಿಲ್ಲ.

ಸಂತ್ರಸ್ತೆ ಮೇ ತಿಂಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.