ಮುಂಬೈ: ಏಪ್ರಿಲ್ 14ರಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ ನಡೆಸಿತ್ತು. ನಟನ ಕಾರಿನ ಮೇಲೂ ಅಟ್ಯಾಕ್ ಮಾಡಿದ್ದ ಬಿಷ್ಣೋಯ್ ಗ್ಯಾಂಗ್‌ನ ನಾಲ್ವರನ್ನು ನವಿ ಮುಂಬೈ ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆಗೆ ಒಳಪಡಿಸಿದ್ದರು. ಈ ಕುರಿತು ಮುಂಬೈ ಪೊಲೀಸರು ವಿಶೇಷ ತನಿಖೆ ಕೈಗೊಂಡಿದ್ದು, ಸಲ್ಮಾನ್ ಮತ್ತು ಅವರ ಕುಟುಂಬಕ್ಕೆ ಬಿಗಿ ಭದ್ರತೆ ಒದಗಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಗೆ ಪ್ರತಿಕ್ರಿಯಿಸಿರುವ ನಟ ಸಲ್ಮಾನ್ ಖಾನ್, ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹಚರರು ನನ್ನ ಮೇಲೆ ನಡೆಸಲಾದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿತ್ತು. ಈ ದಾಳಿ ನನ್ನ ಮತ್ತು ನನ್ನ ಕುಟುಂಬಸ್ಥರನ್ನು ಸರ್ವನಾಶ ಮಾಡುವ ಉದ್ದೇಶದಿಂದ ಮಾಡಲಾಗಿದೆ ಎಂದಿದ್ದಾರೆ.
ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿಸಲು ಸಾಕಷ್ಟು ಪ್ರಾಥಮಿಕ ಸಾಕ್ಷ್ಯಾಧಾರಗಳು ದಾಖಲಾಗಿರುವುದನ್ನು ಗಮನಿಸಿದ ವಿಶೇಷ ಎಂಸಿಒಸಿಎ ನ್ಯಾಯಾಲಯವು, ಈ ತಿಂಗಳ ಆರಂಭದಲ್ಲಿ ಸಲ್ಲಿಸಲಾದ ಆರೋಪ ಪಟ್ಟಿಯನ್ನು ಸೋಮವಾರ (ಜು.22) ಪರಿಗಣಿಸಿದೆ. ಜೂನ್ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ನೀಡಿದ ಈ ಹೇಳಿಕೆ ಚಾರ್ಚ್ಶೀಟ್ನಲ್ಲಿಯೂ ಉಲ್ಲೇಖವಾಗಿದೆ. ನನ್ನ ಮೇಲಿನ ದಾಳಿಗೆ ಇದೇ ಮೊದಲ ಪ್ರಯತ್ನವಲ್ಲ. ಇಂತಹ ಅನೇಕ ಅಟ್ಯಾಕ್ಗಳು ಈ ಹಿಂದೆಯೇ ನನ್ನ ಹಾಗೂ ನನ್ನವರ ಮೇಲೆ ನಡೆದಿದೆ. ಅವರಿಗೆ ನಮ್ಮ ಕುಟುಂಬಸ್ಥರೇ ಟಾರ್ಗೆಟ್. ಸೋಷಿಯಲ್ ಮೀಡಿಯಾದಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಇದು ‘ಪ್ರೇತ ವಿವಾಹ’ ಅಪಘಾತದಲ್ಲಿ ಪ್ರಿಯಕರ ಸಾವು… ಗೆಳೆಯನ ಆತ್ಮವನ್ನೇ ಮದ್ವೆ ಆಗುವ ನಿರ್ಧಾರಕ್ಕೆ ಬಂದ ಯುವತಿ
ಇಂತಹ ಘಟನೆ ನಡೆಯಬಹುದು ಎಂಬ ಮುನ್ನೆಚ್ಚರಿಕೆಯಿಂದ ನನ್ನ ಕುಟುಂಬದವರಿಗೆ ಮೊದಲೇ ಹೇಳಿದ್ದೇನೆ, ಆದಷ್ಟು ಎಚ್ಚರದಿಂದ ಇರಿ, ಯಾವ ಸಮಯದಲ್ಲಿ ಬೇಕಾದ್ರೂ ದಾಳಿ ಸಂಭವಿಸಬಹುದು ಎಂದು. ನನ್ನವರನ್ನು ಉಳಿಸಿಕೊಳ್ಳುವುದು ನನಗೆ ಮುಖ್ಯ ಎಂದಿದ್ದಾರೆ ಸಲ್ಮಾನ್. ಸದ್ಯ ನಟನಿಗೆ ಮುಂಬೈ ಪೊಲೀಸರು ವೈ-ಪ್ಲಸ್ ಭದ್ರತೆ ನೀಡಿದ್ದು, ಶಸ್ತ್ರಾಸ್ತ್ರ ತರಬೇತಿ ಪಡೆದ ಪೊಲೀಸರು, ಬಾಡಿಗಾರ್ಡ್ಸ್ ಮತ್ತು ರಕ್ಷಣೆಗಾಗಿ ಖಾಸಗಿ ಭದ್ರತೆಯನ್ನು ಒದಗಿಸಿದೆ,(ಏಜೆನ್ಸೀಸ್).