ನ್ಯೂಸ್

ಪಾನ್​ ಮಸಾಲಾ ಪರ ಪ್ರಚಾರ; ನಟ ಸಲ್ಮಾನ್​ ಖಾನ್​ ವಿರುದ್ಧ ದೂರು ದಾಖಲು Bollywood

ರಾಜಸ್ಥಾನ: ಬಾಲಿವುಡ್​ (Bollywood) ನಟ ಸಲ್ಮಾನ್​ ಖಾನ್​ ರಾಯಭಾರಿಯಾಗಿರುವ ಪಾನ್​ ಮಸಾಲಾ ಜಾಹಿರಾತು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿವೆ ಎಂದು ಆರೋಪಿಸಿ ರಾಜಸ್ಥಾನ ಹೈಕೋರ್ಟ್ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ದೂರಿನಲ್ಲೇನಿದೆ?

ಬಿಜೆಪಿಯ ಹಿರಿಯ ನಾಯಕ ಮತ್ತು ರಾಜಸ್ಥಾನ ಹೈಕೋರ್ಟ್ ವಕೀಲ ಇಂದರ್ ಮೋಹನ್ ಸಿಂಗ್ ಹನಿ ಸಲ್ಲಿಸಿರುವ ದೂರಿನಲ್ಲಿ ರಾಜಶ್ರೀ ಪಾನ್ ಮಸಾಲಾ ತಯಾರಿಸುವ ಕಂಪನಿ ಮತ್ತು ಅದರ ರಾಯಭಾರಿ ಆಗಿ ಕಾರ್ಯನಿರ್ವಹಿಸಿದ ನಟ ಸಲ್ಮಾನ್ ಖಾನ್ ಈ ಉತ್ಪನ್ನದಲ್ಲಿ ಕೇಸರಿ ಮಿಶ್ರಿತ ಏಲಕ್ಕಿ ಮತ್ತು ಕೇಸರಿ ಮಿಶ್ರಿತ ಪಾನ್ ಮಸಾಲಾ ಇದೆ ಎಂದು ಪ್ರಚಾರ ಮಾಡುವ ಮೂಲಕ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಇಂತಹ ಜಾಹಿರಾತುಗಳನ್ನು ನಿಷೇಧಿಸಬೇಕೆಂದು ದೂರು ದಾಖಲಿಸಿದ್ದರು. ಈ ಆಧಾರದ ಮೇಲೆ ಕೋಟಾ ಗ್ರಾಹಕ ನ್ಯಾಯಾಲಯವು ನಟನಿಗೆ ನೋಟೀಸ್ ಜಾರಿ ಮಾಡಿದ್ದು, ಈ ಕುರಿತು ಸ್ಪಷ್ಟನೆ ನೀಡಬೇಕೆಂದು ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರು ಈ ಹಕ್ಕುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, ಪ್ರತಿ ಕಿಲೋಗ್ರಾಂಗೆ ಸುಮಾರು 4 ಲಕ್ಷ ಬೆಲೆಬಾಳುವಂತಹ ಕೇಸರಿ, ಕೇವಲ 5 ರೂ. ಬೆಲೆಯ ಉತ್ಪನ್ನದಲ್ಲಿ ಬಳಸಲು ಸಾಧ್ಯವಿಲ್ಲ. ಇಂತಹ ಜಾಹಿರಾತುಗಳು ಯುವ ಜನರನ್ನು ಪಾನ್​ ಮಸಾಲ ಸೇವಿಸುವಂತೆ ಪ್ರಚೋದನರ ನೀಡುತ್ತಿವೆ. ಈ ಕಾರಣಗಳಿಂದಲೇ ಕ್ಯಾನ್ಸರ್​​ ಪ್ರಕರಣಗಳು ಹೆಚ್ಚುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಚಾರದ ಕುರಿತು ವಕೀಲ ಇಂದರ್ ಮೋಹನ್ ಸಿಂಗ್ ಹನಿ ಮಾತನಾಡಿದ್ದು, ರಾಜಶ್ರೀ ಪಾನ್ ಮಸಾಲ ಕಂಪನಿಯ ಬ್ರಾಂಡ್​ ರಾಯಭಾರಿಯಾಗಿರುವ ನಟ ಸಲ್ಮಾನ್​ ಖಾನ್ ಈ ಉತ್ಪನ್ನವು ಕೇಸರಿ ಪದಾರ್ಥವನ್ನು ಹೊಂದಿದೆ ಮತ್ತು ಇದು ಯುವಕರನ್ನು ಸೇವಿಸಲು ಪ್ರೋತ್ಸಾಹಿಸುತ್ತದೆ. ಹಾಗಾಗಿ ನಾವು ಇದರ ವಿರುದ್ಧ ಕೋಟಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ನಟನಿಗೆ ವಿಚಾರಣೆಗೆ ನೋಟೀಸ್​ ನೀಡಿದ್ದಾರೆ ಎಂದು ANI ವರದಿ ಮಾಡಿದೆ.

ಇತರ ದೇಶಗಳಲ್ಲಿನ ಸೆಲೆಬ್ರೆಟಿಗಳು ಅಥವಾ ಚಲನಚಿತ್ರ ತಾರೆಯರು ತಂಪು ಪಾನೀಯಗಳ ಪ್ರಚಾರ ಮಾಡುವುದಿಲ್ಲ ಬದಲಾಗಿ ಅವರು ತಂಬಾಕು ಮತ್ತು ಪಾನ್​ ಮಸಾಲಾವನ್ನು ಪ್ರಚಾರ ಮಾಡುತ್ತಾರೆ. ಇದು ಬಾಯಿ ಕ್ಯಾನ್ಸರ್​ಗೆ ಕಾರಣವಾಗಿದೆ. ಹಾಗಾಗಿ ಯುವಕರಿಗೆ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಒತ್ತಾಯಿಸಿದ್ದಾರೆ.

ಕೋಟಾ ಗ್ರಾಹಕ ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ನವೆಂಬರ್​​ 27, 2025 ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ. ಸದ್ಯ ತಯಾರಿಕಾ ಕಂಪನಿ ಮತ್ತು ಬಾಲಿವುಡ್ ನಟ ಇಬ್ಬರಿಂದಲೂ ಪ್ರತಿಕ್ರಿಯೆಗಳನ್ನು ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)