ಮುಂಬೈ: ಭಾರತೀಯ ಬ್ಯಾಂಕುಗಳ ಸಂಘವು 11ನೇ ಬೈಪರ್ಟೈಟ್ ವೇತನ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ಅನ್ವಯ ಉದ್ಯೋಗಿಗಳ ವೇತನ ಶೇ.15 ಹೆಚ್ಚಳವಾಗಲಿದೆ. ಈ ಒಪ್ಪಂದವು ಸಾರ್ವಜನಿಕ ವಲಯದ ಬ್ಯಾಂಕುಗಳು, ಕೆಲವು ಹಳೆಯ ಖಾಸಗಿ ಬ್ಯಾಂಕುಗಳು ಮತ್ತು ಕೆಲವು ವಿದೇಶಿ ಬ್ಯಾಂಕುಗಳಿಗೆ ಅನ್ವಯಿಸುತ್ತದೆ.
ಬೈಪರ್ಟೈಟ್ ಒಪ್ಪಂದವು, ಬ್ಯಾಂಕ್ ಉದ್ಯೋಗಿಗಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ವೇತನದ ಕುರಿತು ಮರು ಮಾತುಕತೆ ನಡೆಸುವ ವೇದಿಕೆಯಾಗಿದೆ. ಜೀವ ವಿಮಾ ನಿಗಮ ಮತ್ತು ಇತರ ಸಾರ್ವಜನಿಕ ವಲಯದ ವಿಮಾ ಕಂಪನಿಗಳು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ನಂತಹ ಸಾರ್ವಜನಿಕ ಹಣಕಾಸು ಸಂಸ್ಥೆಗಳು ಸೇರಿದಂತೆ ಇತರ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಬ್ಯಾಂಕ್ ವೇತನ ಒಪ್ಪಂದವು ಮಹತ್ವದ್ದಾಗಿದೆ. ಬ್ಯಾಂಕ್ ಒಕ್ಕೂಟಗಳೊಂದಿಗೆ ಸಹಿ ಮಾಡಿದ ವೇತನ ಒಪ್ಪಂದದ ಆಧಾರದ ಮೇಲೆ ಈ ಸಂಸ್ಥೆಗಳ ನೌಕರರಿಗೆ ವೇತನ ಮಾಪನವನ್ನು ಸರ್ಕಾರ ಪರಿಷ್ಕರಿಸುತ್ತದೆ. ಹೊಸ ಒಪ್ಪಂದದ ಅನ್ವಯ ಬ್ಯಾಂಕುಗಳು ಪ್ರತಿ ವರ್ಷ ಹೆಚ್ಚುವರಿ -ಠಿ; 7,898 ಕೋಟಿ ವ್ಯಯಿಸಬೇಕಾಗುತ್ತದೆ.
ಸ್ಪರ್ಧಾತ್ಮಕ ಪ್ರಜ್ಞೆ ಬೆಳೆಸಲು ಮತ್ತು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ (ಪಿಎಲ್ಐ) ಯೋಜನೆಯ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಿಂದ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂದು ಭಾರತೀಯ ಬ್ಯಾಂಕುಗಳ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಪಿಎಲ್ಐ ಯೋಜನೆ ಬ್ಯಾಂಕಿನ ನಿರ್ವಹಣಾ ಲಾಭ/ನಿವ್ವಳ ಲಾಭವನ್ನು ಆಧರಿಸಿರುತ್ತದೆ. ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳಿಗೆ ಇದು ಐಚ್ಛಿಕವಾಗಿರಲಿದೆ.