ನ್ಯೂಸ್

ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗ್ತಿದೆ! ರಾಜ್ಯದ ಆರ್ಥಿಕ ಬಿಕ್ಕಟ್ಟು ಒಪ್ಪಿಕೊಂಡ ತೆಲಂಗಾಣ ಸಿಎಂ | Revanth Reddy

Revanth Reddy : ತೆಲಂಗಾಣ ರಾಜ್ಯವು ಭಾರಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದಾಗಿ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಅವರು ಸೋಮವಾರ (ಮಾ.17) ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡರು.

ಸರ್ಕಾರದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಪ್ರತಿ ತಿಂಗಳ ಮೊದಲ ದಿನದಂದು ಸರ್ಕಾರಿ ನೌಕರರಿಗೆ ಸಂಬಳ ಪಾವತಿಸುವುದು ತುಂಬಾ ಕಷ್ಟಕರವಾಗಿದೆ. ನೌಕರರು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದು ರೇವಂತ್​ ರೆಡ್ಡಿ ಒತ್ತಾಯಿಸಿದರು. ಅಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಮನವಿ ಮಾಡಿದ ರೇವಂತ್​ ರೆಡ್ಡಿ, ಈ ಸರ್ಕಾರ ನಿಮ್ಮದು. ನಾನು ನಿಮಗೆ ಎಲ್ಲಾ ಖಾತೆಗಳನ್ನು ಬಹಿರಂಗಪಡಿಸುತ್ತೇನೆ. ಬಳಿಕ ಏನು ನೀಡಬೇಕೆಂದು ಅಥವಾ ಯಾವುದನ್ನು ತಡೆಹಿಡಿಯಬೇಕೆಂದು ನೀವೇ ನಿರ್ಧರಿಸಿ ಎಂದರು.

ನಿಮ್ಮ ತುಟ್ಟಿ ಭತ್ಯೆ (ಡಿಎ) ಬೇಡಿಕೆ ನ್ಯಾಯಸಮ್ಮತವಾಗಿದೆ. ಆದರೆ, ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಒತ್ತಾಯಿಸಬೇಡಿ ಎಂದು ಸರ್ಕಾರಿ ನೌಕರರಲ್ಲಿ ನಾನು ವಿನಂತಿಸುತ್ತೇನೆ ಎಂದು ಹೇಳಿದರು.

ದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್​ಕ್ಲೇವ್​-2025 ರಲ್ಲಿ ಪಾಲ್ಗೊಂಡು, ನನ್ನ ಬಳಿ ಬಂಡವಾಳ ವೆಚ್ಚಕ್ಕೆ ಹಣವಿಲ್ಲ ಎಂದು ರೆಡ್ಡಿ ಪ್ರಾಮಾಣಿಕವಾಗಿ ಘೋಷಿಸಿದ ಕೇವಲ ಒಂದು ವಾರದ ಬೆನ್ನಲ್ಲೇ ತಮ್ಮ ವಿಧಾನ ಪರಿಷತ್ತಿನಲ್ಲಿ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ರೆಡ್ಡಿ ಪ್ರಸ್ತಾಪ ಮಾಡಿದ್ದಾರೆ.

ಇಂಡಿಯಾ ಟುಡೆ ಸಮಾವೇಶದಲ್ಲಿ ಮಾತನಾಡಿದ ರೆಡ್ಡಿ ಅವರು, ತೆಲಂಗಾಣ ಸರ್ಕಾರವು 7 ಲಕ್ಷ ಕೋಟಿ ಸಾಲದಲ್ಲಿದೆ ಎಂದು ವಿವರಿಸಿದರು. ತಿಂಗಳಿಗೆ ನಮ್ಮ ಸರ್ಕಾರ 18,500 ಕೋಟಿ ರೂ. ಗಳಿಸುತ್ತಿದ್ದರೂ, ಪುನರಾವರ್ತಿತ ವೆಚ್ಚಗಳಿಗೆ ಗಣನೀಯ ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ನಾವು ತಿಂಗಳಿಗೆ 6,500 ಕೋಟಿ ರೂಪಾಯಿಯನ್ನು ಸಂಬಳ ಮತ್ತು ಪಿಂಚಣಿಗಳಿಗೆ ಪಾವತಿಸಬೇಕಾಗಿದೆ. ನಾನು ತಿಂಗಳಿಗೆ 6,500 ಕೋಟಿ ರೂಪಾಯಿಯನ್ನು ಸಾಲ ಮತ್ತು ಬಡ್ಡಿಯನ್ನು ಸಹ ಪಾವತಿಸಬೇಕಾಗಿದೆ. ಅಂದರೆ ಪ್ರತಿ ತಿಂಗಳು 10 ನೇ ತಾರೀಖಿನ ಮೊದಲೇ 13,000 ಕೋಟಿ ರೂಪಾಯಿ ಖಜಾನೆಯಿಂದ ಹೋರ ಹೋಗುತ್ತವೆ. ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ನನ್ನ ಬಳಿ ಕೇವಲ 5,000 ಕೋಟಿ ರೂ.ಗಳು ಮಾತ್ರ ಉಳಿದಿವೆ. ಬಂಡವಾಳ ವೆಚ್ಚಕ್ಕೆ ನನ್ನ ಬಳಿ ಹಣವಿಲ್ಲ ಎಂದು ರೇವಂತ್​ ರೆಡ್ಡಿ ಹೇಳಿದರು.

ರೇವಂತ್​ ರೆಡ್ಡಿ ನೇತೃತ್ವದ ತೆಲಂಗಾಣದ ಕಾಂಗ್ರೆಸ್​ ಸರ್ಕಾರದ ಮೇಲೆ ಗ್ಯಾರಂಟಿ ಯೋಜನೆಗಳ ಹೊರೆಯೂ ಇದೆ. ಉಚಿತ ಬಸ್​ ಪ್ರಯಾಣ ಮತ್ತು ಮಹಿಳೆಯರು ತಿಂಗಳ ಹಣ ಪಾವತಿ ಸೇರಿದಂತೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ಗ್ಯಾರಂಟಿ ಯೋಜನೆಗಳು ಕೂಡ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಿಕ್ಕಟ್ಟಿಗೆ ಕಾರಣ ಎನ್ನಲಾಗುತ್ತಿದೆ. (ಏಜೆನ್ಸೀಸ್​)