ರೋಗಿಗೆ ಪ್ರೀತಿ-ಮಮತೆ, ಆಸರೆ ಜತೆಗೆ ಸಾಂತ್ವನ ನೀಡಿ ಉಪಚರಿಸುವ ತಾಯಿಯೇ ನರ್ಸ್/ ದಾದಿ. ಇಂಥ ಉದಾತ್ತ ವೃತ್ತಿ ಒಂದು ಕಾಲದಲ್ಲಿ ಕಡೆಗಣಿಸಲ್ಪಟ್ಟಿತ್ತು. ಈ ವೃತ್ತಿ ತಿರಸ್ಕಾರಕ್ಕೆ ಒಳಗಾಗಿದ್ದಂಥ ಸಮಯದಲ್ಲಿ ನರ್ಸಿಂಗ್ಗೆ ಗೌರವ-ಘನತೆ ತಂದು ಕೊಟ್ಟವರು ಫ್ಲಾರೆನ್ಸ್ ನೈಟಿಂಗೇಲ್. ಇಟಲಿಯ ಶ್ರೀಮಂತ ಕುಟುಂಬದಲ್ಲಿ 1820, ಮೇ 12ರಂದು ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟುಹಬ್ಬ ಸ್ಮರಣಾರ್ಥ ‘ವಿಶ್ವ ದಾದಿಯರ ದಿನ’ ಆಚರಿಸಲಾಗುತ್ತದೆ. ಇಂದು ಅವರ 200ನೇ ಹುಟ್ಟುಹಬ್ಬ ಕೂಡ. ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ‘ವಿಜಯವಾಣಿ’ ಕರೆನೀಡಿದ ಆಹ್ವಾನಕ್ಕೆ ಸ್ಪಂದಿಸಿದ ಸಾವಿರಾರು ಓದುಗರು, ತಮ್ಮ ಬದುಕಿನ ಯಾತನೆಯ ದಿನಗಳಲ್ಲಿ ಶುಶ್ರೂಷೆ ನೀಡಿ ಮರುಜನ್ಮ ಕಲ್ಪಿಸಿದ ‘ವಿಶೇಷ ದಾದಿ’ಯರ ಮಾಹಿತಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಕೆಲವನ್ನು ಪ್ರಕಟಿಸಲಾಗಿದೆ.
ಅಕ್ಕ ಏನೂ ಆಗಲ್ಲ, ನಾನಿದ್ದೇನೆ...
ಕೆಲವು ಶುಶ್ರೂಷಕಿಯರು ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುತ್ತಾರೆ. ಅಂಥವರಲ್ಲಿ ಕೊಟ್ಟೂರು ಸರ್ಕಾರಿ ಆಸ್ಪತ್ರೆಯ ದಾದಿ ಲೀಲಾವತಿ ಕೂಡ ಒಬ್ಬರು. ಹೆರಿಗೆ ತುಂಬ ಕಷ್ಟ ಎಂದು ಡಾಕ್ಟರ್ ಹೇಳಿದಾಗ, ತಕ್ಷಣ ಗಂಡ-ಮಕ್ಕಳು ಕಣ್ಮುಂದೆ ಬಂದ್ರು. ದೊಡ್ಡಾಸ್ಪತ್ರೆಗೆ ಹೋಗಬೇಕೆಂದಾಗ ಕಣ್ಣಿಗೆ ಕಾರ್ಗತ್ತಲು ಕವಿದಂತಾಯಿತು, ಕಾರಣ ಹಣ. ಕಂಗಳು ತೇವಗೊಂಡವು, ಬೇಡವೆಂದರೂ ದುಖ ಉಮ್ಮಳಿಸತೊಡಗಿತು. ನಸುಗತ್ತಲೆಯ ಹೆರಿಗೆ ಕೋಣೆಯಲ್ಲಿ ತಣ್ಣನೆಯ ಕೈಯೊಂದು ಹಣೆಯನ್ನು ಕೋಮಲವಾಗಿ ರ್ಸ³ಸಿತು. ‘ಅಕ್ಕ ಏನೂ ಆಗಲ್ಲ, ನಾನಿದ್ದೇನೆ.. ನಿನ್ನ ಮಗುವನ್ನು ಉಳಿಸುತ್ತೇನೆ’ ಎಂದು ದೇವರು ವರಕೊಟ್ಟಂತೆ ಹೇಳಿದಳು. ಅದೇನು ಪವಾಡವೋ ಇಂದಿಗೂ ಅರ್ಥವಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಸುಸೂತ್ರವಾಗಿ ಹೆರಿಗೆ ಆಯಿತು. ಜೀವ ಉಳಿಸಿಬಿಟ್ಲಲ್ಲ್ಲ ಎಂದು ನರ್ಸ್ ಲೀಲಾವತಿಯ ಕೈಹಿಡಿದಾಗ ಕಂಬನಿಯ ಕಟ್ಟೆಯೇ ಒಡೆಯಿತು. ‘ಅಳಬೇಡಿ.. ಇದು ನನ್ನ ಕರ್ತವ್ಯ ಅಷ್ಟೇ.. ರೋಗಿಗಳು ನಮಗೆ ದೇವರಿದ್ದಂತೆ..’ ಎಂದಾಗ ಮತ್ತೆ ಕಣ್ಣುಗಳು ಹನಿಗೂಡಿದವು. ಡಿಸ್ಚಾರ್ಜ್ ಆಗುವಾಗ ಆಕೆಗೆ ಹಣ ಕೊಟ್ಟೆ, ನಯವಾಗಿ ತಿರಸ್ಕರಿಸಿದಳು. ಮತ್ತೆ ಒತ್ತಾಯಿಸಿ ಹಣ ಕೊಟ್ಟಾಗ, ಹತ್ತು ನಿಮಿಷ ಬಿಟ್ಟು ಬರ್ತೀನಿ ಎಂದಳು. ಆಮೇಲೆ ಬಂದಾಗ ಕೈಯಲ್ಲಿ ನೋಟ್ ಬುಕ್ ಇತ್ತು. ಅದರಲ್ಲಿ ನಮ್ಮದು 120ನೇ ಹೆಸರು. ‘ಅಕ್ಕ ನಿಮ್ಮಂಥವರು ಕೊಟ್ಟ ಹಣ 15 ಸಾವಿರ ರೂ. ಆಗಿದೆ. ನಿಮ್ಮ ಹೆಸರಿನಲ್ಲಿ ಕೊಟ್ಟೂರೇಶ್ವರ ದೇವರಲ್ಲಿ ನಿಮಗೆಲ್ಲ ಒಳ್ಳೆಯದಾಗಲಿ ಎಂದು ಪೂಜೆ ಮಾಡಿಸುತ್ತೇನೆ. ಉಳಿದ ಹಣ ಹುಂಡಿಗೆ ಹಾಕುತ್ತೇನೆ. ನಾನು ಡ್ಯೂಟಿಗೆ ಸೇರಿದಾಗಿನಿಂದ ಇದನ್ನು ಪಾಲಿಸಿಕೊಂಡು ಬಂದಿದ್ದೇನೆ. ನನಗೆ ಸಂಬಳ ಬರುತ್ತೆ, ಲಂಚ ಯಾಕೆ? ನಿಮ್ಮಂಥವರ ಹಾರೈಕೆ ಸಾಕು’ ಎಂದಾಗ ನನಗೆ ಮಾತೇ ಬರಲಿಲ್ಲ. ಅವರೀಗ ಕೊಟ್ಟೂರು ಆಸ್ಪತ್ರೆಯಲ್ಲಿಲ್ಲ, ವರ್ಗವಾಗಿದ್ದಾರೆ, ಎಲ್ಲಿದ್ದಾರೆಂಬ ಮಾಹಿತಿ ಇಲ್ಲ.
| ಡಿ.ಸುಮಾ ಕೊಟ್ಟೂರು, ಬಳ್ಳಾರಿ
ಅವರು ಮಾನವರೂಪದ ದೇವರು
2019ರ ಆ.18ರಂದು ನಾವೆಲ್ಲ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ದವಸ-ಧಾನ್ಯ ನೀಡಿ ಮರಳುತ್ತಿದ್ದಾಗ, ‘ನಿಮ್ಮಾಕೆಗೆ ಪ್ರಸೂತಿ ನೋವು, ನಾವು ದಾವಣಗೆರೆಗೆ ಹೋಗುತ್ತಿದ್ದೇವೆ’ ಎಂದು ಮನೆಯಿಂದ ಕರೆ ಬಂದಿತ್ತು. ಮನೆಗೆ ಮರಳುವ ಮಾರ್ಗದಲ್ಲಿ ರಾತ್ರಿ 11ರ ಸುಮಾರಿಗೆ ಹೆಣ್ಣು ಮಗುವಿನ ತಂದೆಯಾದ ಸುದ್ದಿ ಕೇಳಿ, ಮದುವೆಯಾದ 12 ವರ್ಷಗಳ ಬಳಿಕ ತಂದೆಯಾಗುವ ಭಾಗ್ಯ ಲಭಿಸಿತಲ್ಲ ಎಂದು ಮಹದಾನಂದವಾಗಿತ್ತು. ಸ್ವಲ್ಪಹೊತ್ತಲ್ಲೇ ಮತ್ತೆ ಕರೆ ಮಾಡಿ, ‘ನಿಮ್ಮ ಮಗಳಿಗೆ ಉಸಿರಾಟದ ತೊಂದರೆ ಇದೆ, ದಾವಣಗೆರೆ ಸಿಟಿ ಸೆಂಟ್ರಲ್ ಹಾಸ್ಪಿಟಲ್ಗೆ ಶಿಫ್ಟ್ ಮಾಡಿ ವೆಂಟಿಲೇಷನ್ನಲ್ಲಿ ಇಟ್ಟಿದ್ದಾರೆ’ ಎಂದರು. ಆ ಆಸ್ಪತ್ರೆಯ ಡಾ.ರಾಘವೇಂದ್ರ ದೊಡ್ಡಮನಿ ಮತ್ತವರ ತಂಡದವರು ನನಗೆ ಧೈರ್ಯ ತುಂಬಿ ಮಗಳಿಗೆ ಚಿಕಿತ್ಸೆ ನೀಡಿದ್ದರು. ಅಂದು ಹಗಲಿರುಳೆನ್ನದೆ ಸಮರ್ಪಣಾ ಭಾವದಿಂದ ಕೆಲಸ ಮಾಡಿದ ಹಿರಿಯ ದಾದಿ ಚಂದ್ರಮ್ಮ ಮತ್ತು ತಂಡದವರ ಸಾಂತ್ವನ, ಉಪಚಾರದಿಂದ ದಿನೇದಿನೆ ನನಗೆ ಸಮಾಧಾನ ಎನಿಸಿದ್ದಲ್ಲದೆ ಮಗುವಲ್ಲೂ ಚೇತರಿಕೆ ಕಂಡು ಬಂದಿತ್ತು. ‘ಮಗು ಉಳಿಯುವುದು ಅನುಮಾನ, ತಂದೆ-ತಾಯಿಗೆ ಧೈರ್ಯ ಹೇಳಿ’ ಎಂದು ಒಮ್ಮೆ ವೈದ್ಯರೇ ತಿಳಿಸಿದ್ದ ವಿಷಯ ಗೊತ್ತಾಗಿ ಬರಸಿಡಿಲು ಬಡಿದಂತಾಗಿದ್ದರೂ ಅಲ್ಲಿನ ದಾದಿಯರ ತಂಡ ನನ್ನ ಮಗುವಿನ ಪಾಲಿನ ದೇವರಂತೆ ಶುಶ್ರೂಷೆ ಮಾಡಿದ್ದು ಕಣ್ಣಿಗೆ ಕಟ್ಟಿದಂತಿವೆ. ನನ್ನ ಮಗುವಿಗೆ ಮರುಜನ್ಮ ನೀಡಿದ ಚಂದ್ರಮ್ಮ ಸಿಸ್ಟರ್ ಮತ್ತು ತಂಡದವರು ನನ್ನ ಪಾಲಿಗೆ ಮಾನವ ರೂಪದ ದೇವರೆಂದರೂ ತಪ್ಪೆನಿಸದು.
ಡಿ.ಆರ್. ರಂಗಸ್ವಾಮಿ ಶಿಕ್ಷಕ, ದಾಗಿನಕಟ್ಟೆ, ಚನ್ನಗಿರಿ
ಸಾಮಾಜಿಕ ಕಳಕಳಿಯ ‘ಸೌಮ್ಯಾ’
ಹೆಸರಿನಷ್ಟೇ ಸೌಮ್ಯವಾಗಿ ವರ್ತಿಸುವ ನರ್ಸ್ ಕೆ.ಆರ್.ಸೌಮ್ಯಾ, ನಮ್ಮ ಊರಿನ ಜನರಿಗೆ ಮಾರ್ಗದರ್ಶಿ. ಕರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಿರುವುದಷ್ಟೇ ಅಲ್ಲದೆ, ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಬಂದವರ ತಪಾಸಣೆಯಲ್ಲೂ ವೈದ್ಯರು ಹಾಗೂ ಮೇಲ್ವಿಚಾರಕರೊಂದಿಗೆ ಶ್ರಮಿಸುತ್ತಿದ್ದಾರೆ. ಗರ್ಭಿಣಿ, ಬಾಣಂತಿ ಆರೈಕೆ, ಲಸಿಕಾ ಕಾರ್ಯಕ್ರಮ, ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತ ಕಾರ್ಯಕ್ರಮಗಳಲ್ಲೂ ಇವರ ಸೇವೆ ಅನನ್ಯ. ನಮ್ಮ ಗ್ರಾಮಕ್ಕಷ್ಟೇ ಸೀಮಿತವಾಗದ ಇವರು, ಕೆ.ಆರ್.ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜನರಿಗೂ ಅಚ್ಚುಮೆಚ್ಚು. ಸೌಮ್ಯಾರ ಸೇವಾ ಕಾಳಜಿಗೆ ನಮ್ಮ ಧನ್ಯವಾದ.
| ಕೆ.ಆರ್.ಸಾಗರ ಗ್ರಾಮಸ್ಥರು ಮಂಡ್ಯ ಜಿಲ್ಲೆ
ಇನ್ನಷ್ಟು ಕಾಲ ಆರೋಗ್ಯವಾಗಿರಲಿ
ಚಿಕ್ಕಂದಿನಿಂದಲೂ ಅಷ್ಟೇ.. ಯಾವುದೇ ಸಣ್ಣ ಕಾಯಿಲೆ ಬಂದರೂ ನಾನು ಪುತ್ತೂರಿನ ಆದರ್ಶ ಆಸ್ಪತ್ರೆಯ ಸರಳಜೀವಿ ವೈದ್ಯ ಡಾ.ಶ್ಯಾಮ್ ಭಟ್ ಅವರನ್ನು ಭೇಟಿ ಮಾಡುತ್ತಿದ್ದೆ. ಅಲ್ಲೇ ಸುಮಾರು 12-13 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ರೇಖಾ ಬಲ್ನಾಡು, ನನ್ನ ಪಾಲಿನ ಆರೋಗ್ಯ ರಕ್ಷಕಿ. ಅವರು ನಗು ಮುಖ, ಮೃದು ಮಾತು, ಆತಿ್ಮೕಯತೆಯ ಸರಳ ಜೀವಿ. ಹೆಚ್ಚಿನ ರೋಗಗಳು ಉಪಚರಿಸುವವರ ಮಾತಿನಿಂದ, ಅವರು ನಡೆದುಕೊಳ್ಳುವ ರೀತಿಯಿಂದ ಕಡಿಮೆಯಾಗುತ್ತದೆ ಎಂದು ವೈದ್ಯವಿಜ್ಞಾನ ಹೇಳುತ್ತದೆ. ಒಮ್ಮೊಮ್ಮೆ ಅದು ನಿಜ ಅನಿಸುತ್ತದೆ. ರೇಖಾ ಸಿಸ್ಟರ್ ಇನ್ನಷ್ಟು ಕಾಲ ಅವರ ಆರೋಗ್ಯದೊಂದಿಗೆ ಇತರರ ಆರೋಗ್ಯವನ್ನೂ ಕಾಪಾಡಲಿ ಎಂದು ಆಶಿಸುತ್ತೇನೆ.
| ಹರೀಶ್ ಮಂಜೊಟ್ಟಿ ಬಂಟ್ವಾಳ
ನಾ ಕಂಡ ದಾದಿ ‘ಕಲಾ ಡಾಕ್ಟರ್’
18 ವರ್ಷಗಳ ಹಿಂದೆ ನನ್ನ ಕಂಪನಿ ಕೆಲಸದ ಮೇಲೆ ಮಂಗಳೂರಿನ ಒಂದು ಆಸ್ಪತ್ರೆಯ ದಾದಿಯನ್ನು ಭೇಟಿಯಾಗಿದ್ದೆ. ಆಗ ಅವರು ವಾರ್ಡಿನಲ್ಲಿರುವ ರೋಗಿಗಳ ತಪಾಸಣೆ ಮಾಡುತ್ತಿದ್ದರು. ಅವರ ಸೇವಾ ಭಾವನೆ, ರೋಗಿಗಳ ಮೇಲೆ ತೋರುತ್ತಿದ್ದ ಪ್ರೀತಿ ಕಂಡು ಅಲ್ಲಿರುವರೆಲ್ಲ ‘ಕಲಾ ಡಾಕ್ಟರ್’ ಎಂತಲೇ ಕರೆಯುತ್ತಿದ್ದರು. ರೋಗಿಗಳ ಪಾಲಿಗೆ ಆಸ್ಪತ್ರೆಯ ವೈದ್ಯರಂತೆ ಅವರೂ ಒಬ್ಬ ವೈದ್ಯರಾಗಿಬಿಟ್ಟಿದ್ದರು. ಮುಂದೆ ಅವರು ರಾಯಚೂರಿನ ಒಂದು ಖಾಸಗಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಸೇರಿಕೊಂಡರು. ಹದಿನೆಂಟು ವರ್ಷಗಳ ಹಿಂದೆ ನಾನು ನೋಡಿದ್ದ ಅವರ ಸೇವಾಗುಣಗಳು ಇಂದಿಗೂ ಅವರಲ್ಲಿ ಉಳಿದಿವೆ. ಒಬ್ಬ ದಾದಿಯಾಗಿ ವೃತ್ತಿಜೀವನ ಆರಂಭಿಸಿದ ಕಲಾ ಅವರು ಇಂದು ರಾಯಚೂರಿನ ಪ್ರಸಿದ್ಧ ಮೆಡಿಕಲ್ ಕಾಲೇಜಿನ ನರ್ಸಿಂಗ್ ಮೇಲ್ವಿಚಾರಕರಾಗಿದ್ದಾರೆ. ದಾದಿಯರ ದಿನದಂದು ಎಲ್ಲ ದಾದಿಯರಿಗೆ ಹಾಗೂ ವಿಶೇಷವಾಗಿ ನಾ ಕಂಡ ‘ಕಲಾ ಡಾಕ್ಟರ್’ ಅವರಿಗೆ ನನ್ನದೊಂದು ಸಲಾಂ.
| ಶ್ರೀನಿವಾಸ್ ಷರಾಫ್, ರಾಧಾಕೃಷ್ಣ ನಗರ, ಹುಬ್ಬಳ್ಳಿ