ನ್ಯೂಸ್

ಮೋದಿ ಕೊಟ್ಟಿದ್ದು ಬರಿ ಹಣವಲ್ಲ, ಅದಕ್ಕಿಂತ ಹೆಚ್ಚು!

ಭಾರತಕ್ಕೆ ಅಪರೂಪದ ಅಂತಃಶಕ್ತಿಯೊಂದಿದೆ. ಕರೊನಾ ಅದನ್ನೀಗ ಬಡಿದೆಬ್ಬಿಸಿಬಿಟ್ಟಿದೆ. ಹೀಗೆಂದು ಮೋದಿ ಹೇಳುವಾಗ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು! ಅವರು ಸುಮ್ಮನೆ ಪ್ರೇರಣೆ ಕೊಡಲಿಲ್ಲ. ಸಮರ್ಥ ರಾಜಮಾರ್ಗವನ್ನೂ ಮುಂದಿಟ್ಟಿದ್ದಾರೆ. ನಾವೀಗ ಭಾರತದ ಆರ್ಥಿಕತೆ ಬಲುದೊಡ್ಡ ನೆಗೆತ ಕಾಣುವಂತೆ ರೂಪಿಸಬೇಕಿದೆ.

ಮೊನ್ನೆ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲೆಡೆ ಕೊನೆಯ ಹತ್ತು ನಿಮಿಷಗಳಲ್ಲಿ ಅವರು ಘೊಷಿಸಿದ ಪ್ಯಾಕೇಜ್​ನ ಚರ್ಚೆಯಾಗುತ್ತಿದೆಯೇ ಹೊರತು ಅದಕ್ಕೂ ಮುಂಚೆ 20 ನಿಮಿಷಗಳ ಕಾಲ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಅವರು ಅನಾವರಣಗೊಳಿಸಿದ್ದರ ಕುರಿತಂತೆ ಯಾರೂ ಮಾತನಾಡುತ್ತಲೇ ಇಲ್ಲ. ವಾಸ್ತವವಾಗಿ 20 ಲಕ್ಷ ಕೋಟಿಯ ಪ್ಯಾಕೇಜು ಗೌಣವಾದ ವಿಷಯ. ನಿಜವಾಗಿಯೂ ಮೋದಿ ತಮ್ಮ ಮಾತಿನ ಮೂಲಕ ಮಾಡಿದ್ದು ಮಲಗಿರುವ ಭಾರತದ ಆತ್ಮವನ್ನು ಜಾಗೃತಗೊಳಿಸುವ ಪ್ರಯತ್ನ. ಬಹುತೇಕ ಅವರ ಈ ಮಾತುಗಳು ಪಶ್ಚಿಮದ ಪ್ರವಾಸದಿಂದ ಮರಳಿ ಬಂದ ಸ್ವಾಮಿ ವಿವೇಕಾನಂದರು ಆಡಿದಂತೆಯೇ ಇತ್ತು. ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಪಶ್ಚಿಮದ ಜಗತ್ತನ್ನು ಸ್ವಾಮೀಜಿ ಅರ್ಥಮಾಡಿಕೊಂಡರಲ್ಲ, ಆನಂತರ ಭಾರತದ ಕುರಿತಂತೆ ಅವರ ದೃಷ್ಟಿಕೋನವೇ ಬದಲಾಯ್ತು. ಅದನ್ನವರು ಹೇಳಿಕೊಂಡಿದ್ದಾರೆ ಕೂಡ. ಅವರ ಮಾತು, ಕೃತಿಯಲ್ಲೆಲ್ಲ ನಿಧಾನವಾಗಿ ಅದು ವ್ಯಕ್ತಗೊಳ್ಳಲಾರಂಭಿಸಿತು. ಭಾರತಕ್ಕೆ ಆತ್ಮವಿಸ್ಮೃತಿಯಾಗಿದೆ. ಅದು ಮರಳಿ ತನ್ನ ವೈಭವವನ್ನು ಪಡೆದುಕೊಳ್ಳಬೇಕಾಗಿದೆ ಎಂಬ ಅವರ ಮಾತುಗಳು ಖಂಡಿತ ಪ್ರತಿಧ್ವನಿಯಾದಂತೆಯೇ ಇದ್ದವು!

ಭಾರತ ‘ಚಿನ್ನದ ಹಕ್ಕಿ’ ಎಂದೇ ಕರೆಯಲ್ಪಡುತ್ತಿತ್ತು. ಸರಿಯಾದ ದೃಷ್ಟಿಕೋನ ಇಟ್ಟುಕೊಂಡು ಇತಿಹಾಸ ಓದಿದ ಪ್ರತಿಯೊಬ್ಬನಿಗೂ ಇದರಲ್ಲಿ ಅಚ್ಚರಿಯೇನೂ ಕಾಣುವುದಿಲ್ಲ. ಜಗತ್ತೆಲ್ಲ ಕಣ್ಣು ಬಿಡುವ ಮೊದಲೇ ವೇದ-ಉಪನಿಷತ್ತುಗಳ ಶ್ರೇಷ್ಠ ಕಾಲಘಟ್ಟವನ್ನು ನೋಡಿದ್ದ ಭಾರತಕ್ಕೆ ಆಧ್ಯಾತ್ಮಿಕ ಪರಂಪರೆಯಂತೂ ಜೋರಾಗಿಯೇ ಇತ್ತು. ಹಾಗಂತ ಇದು ಕಣ್ಮುಚ್ಚಿಕೊಂಡು ಸದಾ ತಪಸ್ಸು ಮಾಡುತ್ತ ಕೂರುವ ನಿಷ್ಕ್ರಿಯ ಅಧ್ಯಾತ್ಮ ಆಗಿರಲಿಲ್ಲ. ಅಲ್ಲಿ ಚುರುಕುತನದಿಂದ ಕೂಡಿದ, ಬದುಕನ್ನು ಪ್ರೀತಿಸುವ ಉತ್ಸಾಹದ ಚಿಲುಮೆಯಿತ್ತು. ಹೀಗಾಗಿಯೇ ಸಾಹಿತ್ಯ, ಕಲೆಗಳಲ್ಲದೆ ಆರ್ಥಿಕ ದೃಷ್ಟಿಯಿಂದಲೂ ಭಾರತ ಅಗಾಧವಾಗಿ ಬೆಳೆದಿತ್ತು. ಒಂದು ಹಂತದಲ್ಲಂತೂ ನಮ್ಮನ್ನು ಮಣಿಸುವ ಜನರೇ ಇಲ್ಲ ಎಂಬಷ್ಟು ಮೈಮರೆತು ಕುಳಿತುಬಿಟ್ಟಿದ್ದೆವು. ಆಗಲೇ ಗ್ರೀಕರು, ಶಕರು, ಹೂಣರ ಆಕ್ರಮಣವಾದದ್ದು. ಆರಂಭಿಕ ಸೋಲು ಉಂಡಿದ್ದು ನಿಜವಾದರೂ ಸೋಲನ್ನೇ ಮಣಿಸಿ ಗೆಲುವನ್ನು ದಕ್ಕಿಸಿಕೊಂಡು ರಾಷ್ಟ್ರದ ಆತ್ಮಜಾಗೃತಿ ಮಾಡಲು ಭಾರತಕ್ಕೆ ತಡವಾಗಲಿಲ್ಲ. ಇದಕ್ಕೆ ವಿಪರೀತವಾಗಿ ವಾಯವ್ಯ ಭಾಗದಿಂದ ಮುಸಲರ ದಾಳಿಯಾದಾಗ ಆರಂಭದಲ್ಲಿ ಅವರನ್ನು ಸೋಲಿಸಿ ಆನಂತರ ನಮ್ಮದ್ದೇ ತಪ್ಪಿನಿಂದಾಗಿ ನಾವು ತಲೆಬಾಗಬೇಕಾಗಿ ಬಂತು. ಹಾಗಂತ ಅದು ಏನು ಶಾಶ್ವತವಾಗಿ ಉಳಿಯಲಿಲ್ಲ. ಧೂರ್ತ ಪಠಾಣ, ತುರ್ಕ, ಆಫ್ಘನ್, ಅರಬ್, ಮೊಘಲ್ ಪಡೆಗಳು ಇಲ್ಲಿ ಮಣ್ಣುಮುಕ್ಕಿದವು. ಭಾರತ ಮಾತ್ರ ಎದೆಸೆಟೆಸಿ ನಿಂತು ಅವರನ್ನು ಪೂರ್ಣವಾಗಿ ಜೀರ್ಣಿಸಿಕೊಂಡುಬಿಟ್ಟಿತು. ಬಹುಶಃ ಆ ಕಾಲಘಟ್ಟದಲ್ಲಿ ಮುಸಲ್ಮಾನರ ಆಕ್ರಮಣವಾಗದೇ ಹೋಗಿದ್ದರೆ ನಮ್ಮ ಆತ್ಮಜಾಗೃತಿ ಆಗಿಯೇ ಇರುತ್ತಿರಲಿಲ್ಲ!

ಆನಂತರ ಕ್ರಿಶ್ಚಿಯನ್ನರ ಆಕ್ರಮಣ. ಮತ, ಕತ್ತಿ ಮತ್ತು ತಕ್ಕಡಿ ಎಲ್ಲವನ್ನೂ ಜೊತೆಯಲ್ಲೇ ಹಿಡಿದುಕೊಂಡು ಬಂದ ಈ ಕ್ರಿಶ್ಚಿಯನ್ನರು ಮೋಸದಿಂದ ನಮ್ಮನ್ನು ಇರಿದರು. ನಮ್ಮೆಲ್ಲ ಉದ್ಯೋಗಗಳನ್ನೂ ನಾಶಗೈದರು. ಭಾರತವನ್ನು ಕನಿಷ್ಠಪ್ರಜ್ಞೆಯ ರಾಷ್ಟ್ರ ಎಂದು ಜಗತ್ತಿನ ಮುಂದೆ ಬಿಂಬಿಸುತ್ತಲೇ ನಮ್ಮ ಅನಾಗರಿಕತೆಯನ್ನು ತೊಡೆದು ಇಲ್ಲಿನ ಜನರನ್ನು ಏಸುಪ್ರವಾಹದಲ್ಲಿ ಮೀಯಿಸಲು ತಮ್ಮ ಜನರ ಸಹಕಾರ ಪಡೆದುಕೊಂಡೇ ಆಳ್ವಿಕೆಗೆ ನಿಂತರು. ಅವರ ಆಳ್ವಿಕೆಯ ಎರಡೂವರೆ ಮೂರು ಶತಮಾನಗಳು ಭಾರತದ ಪಾಲಿಗೆ ಕರಾಳ ದಿನಗಳು. ಸುಮ್ಮನೆ ಉದಾಹರಣೆ ಕೊಡಬೇಕೆಂದರೆ 17-18ನೇ ಶತಮಾನದ ವೇಳೆಗೆ ಬಂಗಾಳದ ಬಟ್ಟೆ ಈಜಿಪ್ತ್, ಟರ್ಕಿ, ಪರ್ಷಿಯಾಗಳಲ್ಲದೆ ಜಾವಾ, ಚೀನಾ, ಜಪಾನ್​ಗಳಿಗೂ ರಫ್ತಾಗುತ್ತಿದ್ದವು. ನಮ್ಮ ಪೂರೈಕೆ ಸರಪಣಿ ಎಷ್ಟು ಚೆನ್ನಾಗಿತ್ತೆಂದರೆ ಬಂಗಾಳವೊಂದೇ ಅಂದಿನ ದಿನಗಳಲ್ಲಿ ಪ್ರತಿ ವರ್ಷ ಒಂದೂವರೆ ಕೋಟಿ ರೂಪಾಯಿಗಳಷ್ಟು ವಾರ್ಷಿಕ ವಹಿವಾಟು ನಡೆಸುತ್ತಿತ್ತು. ಯುರೋಪ್ ಒಂದಕ್ಕೆ ಸುಮಾರು 60 ಲಕ್ಷ ರೂಪಾಯಿಗಳಷ್ಟು ಮೌಲ್ಯದ ಬಟ್ಟೆ ಕಳಿಸುತ್ತಿದ್ದೆವು. ಬ್ರಿಟಿಷರು ಬರಿಯ ವ್ಯಾಪಾರಿಗಳಷ್ಟೇ ಆಗಿರುವಾಗ ಬಂಗಾಳದ ಸಿಲ್ಕ್ ಉತ್ಪಾದನೆ ಜಗತ್ತಿನ ಶೇಕಡ 33ರಷ್ಟಿತ್ತು! ಬ್ರಿಟಿಷರು ಇಲ್ಲಿನ ರಾಜರಾಗುತ್ತಿದ್ದಂತೆ ಇದು ಕುಸಿಯಲಾರಂಭಿಸಿತು. ಬಂಗಾಳದ ಬಟ್ಟೆಯನ್ನು ಪೌಂಡ್​ಗಳ ಬದಲು ರೂಪಾಯಿಗಳಲ್ಲೇ ಕೊಳ್ಳಲಾರಂಭಿಸಿದರು. ವಿದೇಶದಿಂದ ಯಾರೂ ಕೊಳ್ಳದಂತೆ ಪ್ರತಿಬಂಧ ಹಾಕಿದರು. ಭಾರತದಲ್ಲೂ ಯಾರೂ ಪ್ರತಿಸ್ಪರ್ಧಿಗಳು ಹುಟ್ಟದಂತೆ ನೋಡಿಕೊಂಡರು. ಕೊನೆಗೆ ಇಲ್ಲಿಂದ ಕಚ್ಚಾಮಾಲನ್ನು ತಮ್ಮ ದೇಶಕ್ಕೆ ಒಯ್ದು ಸಿದ್ಧವಸ್ತುಗಳನ್ನು ಅತಿ ಹೆಚ್ಚಿನ ಬೆಲೆಯಲ್ಲಿ ನಮಗೆ ಮಾರಿದರು. ನೋಡ-ನೋಡುತ್ತಲೇ ಭಾರತದ ನೇಕಾರರು ದಿವಾಳಿಯಾದರು. ನೇಯ್ಗೆಯ ಕಾರ್ಖಾನೆಗಳು ಮುಚ್ಚಿಹೋದವು. ಬಹುಶಃ ಕಾರ್ಖಾನೆಗಳನ್ನು ನಾಶಮಾಡುವ ಮೊದಲ ಅಭಿಯಾನ ಶುರುವಾಗಿದ್ದು ಅಲ್ಲಿಂದಲೇ. ಒಂದೊಂದಾಗಿ ಕಾರ್ಖಾನೆಗಳು ಮುಚ್ಚಿದವಲ್ಲದೆ ಅವಕ್ಕೆ ಕಚ್ಚಾವಸ್ತುಗಳನ್ನು ಪೂರೈಸುತ್ತಿದ್ದ ಕೃಷಿ ಪೂರ್ತಿ ನಾಶವಾಯ್ತು. ಜೊತೆಗೆ ನಮ್ಮಿಂದ ಅಪಾರ ಪ್ರಮಾಣದ ತೆರಿಗೆಯನ್ನು ಬ್ರಿಟಿಷರು ಲೂಟಿ ಮಾಡಲಾರಂಭಿಸಿದರು. ‘ಚಿನ್ನದ ಹಕ್ಕಿ’ ಭಾರತ ಈಗ ‘ದರಿದ್ರ ಭಾರತ’ವೆಂಬ ಶಾಪಕ್ಕೆ ಗುರಿಯಾಯ್ತು!

ಇನ್ನು ಭಾರತ ಮೇಲೇಳುವುದು ಸಾಧ್ಯವೇ ಇಲ್ಲ ಎಂದಾಗ ಇದನ್ನು ಮರುನಿರ್ವಣ ಮಾಡಲು ಸಾಧ್ಯವಾಗಿದ್ದು ಹೇಗೆ ಗೊತ್ತಾ? ದಾದಾಭಾಯ್ ನವರೋಜಿ, ಗೋಖಲೆ, ರಾನಡೆ, ತಿಲಕ್ ಮೊದಲಾದವರ ಕಲ್ಪನೆಯ ಮೂಸೆಯಿಂದ ಅರಳಿಬಂದ ಸ್ವದೇಶಿ ಚಳವಳಿಯಿಂದ. ದಾದಾಭಾಯ್ ನವರೋಜಿ ಬ್ರಿಟಿಷರು ಭಾರತದಿಂದ ಲೂಟಿ ಮಾಡಿರಬಹುದಾದ ಹಣದ ಕುರಿತಂತೆ ‘ಡ್ರೖೆನ್ ಥಿಯರಿ’ ಮುಂದಿಟ್ಟ ಮೇಲಂತೂ ಪ್ರತಿಯೊಬ್ಬರೂ ಉತ್ಸಾಹಿತರಾಗಿ ಈ ಚಳವಳಿಯಲ್ಲಿ ಭಾಗವಹಿಸಿದರು. 1905ರಲ್ಲಿ ಬಂಗಾಳದ ವಿಭಜನೆಯಾದಾಗ ಸ್ವದೇಶಿ ಚಳವಳಿಯ ಕೂಗು ಮುಗಿಲುಮುಟ್ಟಿತು. ಬ್ರಿಟಿಷರಿಗೆ ಇದು ಯಾವ ಪರಿ ಹೊಡೆತ ಕೊಟ್ಟಿತೆಂದರೆ 1911ರಲ್ಲಿ ಅವರು ಬಂಗಾಳದ ವಿಭಜನೆಯನ್ನು ಮರಳಿ ಪಡೆಯಬೇಕಾಯ್ತು. ಗಾಂಧೀಜಿ ಈ ಸ್ವದೇಶಿ ಚಳವಳಿಯಿಂದ ಸಾಕಷ್ಟು ಪಾಠ ಕಲಿತು ಅದನ್ನು ಅಸ್ತ್ರವನ್ನಾಗಿ ಬಳಸಿಕೊಂಡರು. ಇಲ್ಲಿ ಸ್ವದೇಶಿ ಚಳವಳಿ ಜೋರಾಗಿ ನಡೆಯುತ್ತಿದ್ದಾಗ ಇಂಗ್ಲೆಂಡಿನ ಮ್ಯಾಂಚೆಸ್ಟರ್​ನಲ್ಲಿ ಇರುವ ಬಟ್ಟೆ ತಯಾರಿಕೆಯ ಕಂಪನಿಗಳು ಮುಚ್ಚಿಹೋಗಿದ್ದವು ಎಂಬುದು ಇಂದಿಗೂ ಅಚ್ಚರಿಯ ಸಂಗತಿ! ಗಾಂಧೀಜಿ ದುಂಡುಮೇಜಿನ ಸಭೆಗೆ ಹೋಗಿದ್ದಾಗ ಆ ಗಿರಣಿಗಳ ಕಾರ್ವಿುಕರು ‘ದಯವಿಟ್ಟು ಆಂದೋಲನ ಮರಳಿ ಪಡೆಯಿರಿ’ ಎಂದು ಗೋಗರೆದಿದ್ದರಂತೆ.

ಭಾರತ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಸಂದರ್ಭ ಬರುವವರೆಗೂ ತನ್ನ ಪೂರ್ಣಶಕ್ತಿಯನ್ನು ಹೊರಹಾಕುವುದಿಲ್ಲ. ಇದನ್ನೇ ವಿವೇಕಾನಂದರು ‘ಆತ್ಮವಿಸ್ಮೃತಿ’ ಎಂದು ಜರಿದಿದ್ದು. ಈಗ ಕರೊನಾ ಮಹಾಮಾರಿ ಅಂಥದ್ದೊಂದು ಸ್ಥಿತಿಯನ್ನು ನಮ್ಮೆದುರಿಗೆ ತಂದಿದೆ. ಅದೃಷ್ಟವಶಾತ್ ಮೋದಿಯಂಥ ಸಮರ್ಥ ನಾಯಕರು ದೇಶವನ್ನು ಆಳುತ್ತಿದ್ದಾರೆ. ಯುರೋಪಿನ ಅನೇಕ ರಾಷ್ಟ್ರಗಳು ಅದಾಗಲೇ ಈ ಮಹಾಮಾರಿಯನ್ನು ಎದುರಿಸಲಾಗದೆ ಕೈಚೆಲ್ಲಿ ಕುಳಿತುಬಿಟ್ಟಿವೆ. ಅಮೆರಿಕ ತನ್ನ ‘ದೊಡ್ಡಣ್ಣ’ನೆಂಬ ಅಭಿದಾನ ಉಳಿಸಿಕೊಳ್ಳಲಿಕ್ಕಾಗಿ ಮನಸ್ಸಿಗೆ ತೋಚಿದ್ದನ್ನೆಲ್ಲ ಮಾಡುತ್ತಿದೆ. ಚೀನಾ ಈಗ ಬಾಗಿದರೆ ಗುದ್ದಿಯೇ ಬಿಡುತ್ತಾರೆ ಎಂಬ ಹೆದರಿಕೆಯಿಂದ ತಪ್ಪು-ತಪ್ಪು ಹೆಜ್ಜೆಗಳನ್ನು ಇಡಲಾರಂಭಿಸಿದೆ. ಇಂಥ ಹೊತ್ತಿನಲ್ಲಿ ಸಮರ್ಥ ನಿರ್ಣಯಗಳನ್ನು ಕೈಗೊಳ್ಳುವುದು ನಿಜಕ್ಕೂ ಅಗತ್ಯವಾಗಿತ್ತು. ವ್ಯಕ್ತಿಯೊಬ್ಬ ಸ್ವಾವಲಂಬಿಯಾಗದೆ ಹೋದರೆ ಅವನಿಗೆ ಕಿಮ್ಮತ್ತಿಲ್ಲ. ‘ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀ’ ಉದ್ಯೋಗಿಯಾದ ಪುರುಷಸಿಂಹನನ್ನೇ ಲಕ್ಷ್ಮಿಯೂ ಆಲಿಂಗಿಸುವುದು ಎಂಬ ಮಾತನ್ನು ಆ ಕಾರಣಕ್ಕೇ ಹೇಳಿರೋದು. ಆತ್ಮಬಲವನ್ನು ಗುರುತಿಸಿಕೊಂಡು ಆತ್ಮವಿಶ್ವಾಸದಿಂದ ಆತ್ಮನಿರ್ಭರತೆಯತ್ತ ಹೆಜ್ಜೆ ಇಡುವುದು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಸಾರ್ಥಕತೆ. ಇನ್ನು ಇಂಥ ವ್ಯಕ್ತಿಗಳ ಒಟ್ಟು ಸಂಕಲಿತ ಮೊತ್ತವಾದ ರಾಷ್ಟ್ರದ ಕಥೆಯೇನು ಹೇಳಿ? ಅದೂ ಕೂಡ ಸ್ವಾವಲಂಬಿಯಾಗಿ ಇತರರ ಮೇಲೆ ಅವಲಂಬಿತವಾಗದ ಶ್ರೇಷ್ಠ ಬದುಕನ್ನು ತನ್ನದಾಗಿಸಿಕೊಳ್ಳಬೇಕು. ಆದರೆ ಇದು ಸ್ವಾರ್ಥಕೇಂದ್ರಿತವಾಗಿ ಇರಬಾರದು ಎಂಬುದನ್ನು ಮರೆಯುವಂತಿಲ್ಲ. ಚೀನಾ ಆತ್ಮನಿರ್ಭರವೇ. ಆದರೆ ಜಗತ್ತೆಲ್ಲ ಕಣ್ಣೀರಿನಲ್ಲಿ ಕೈತೊಳೆಯಲಿ ಎಂದು ಭಾವಿಸುವ ಆ ರಾಷ್ಟ್ರದ ಕಲ್ಪನೆಯನ್ನು ಯಾರೂ ಸಮರ್ಥಿಸಲಾರರು. ಆದರೆ ನಾವು ಹಾಗಲ್ಲ. ಜಗತ್ತಿನ ಸುಖ-ಶಾಂತಿಯನ್ನು ಬಯಸಿ ಸದಾ ಸಹಯೋಗಕ್ಕೆ ಕೈಚಾಚುತ್ತೇವೆ. ಅದು ವೈ2ಕೆ ಹೊತ್ತಿನಲ್ಲಿ ಜಗತ್ತಿಗೆ ಹೆಗಲಾದದ್ದರಿಂದ ಹಿಡಿದು ಭೂತಾಪಮಾನ ಹೆಚ್ಚಳವನ್ನು ನಿಯಂತ್ರಿಸುವಲ್ಲಿ ನೇತೃತ್ವ ವಹಿಸಿದುದರವರೆಗೂ ನಾವೆಂದೂ ಹಿಂದೆ ನಿಂತಿಲ್ಲ. ಜಗತ್ತಿನ ಆರೋಗ್ಯಕ್ಕಾಗಿ ‘ಅಂತಾರಾಷ್ಟ್ರೀಯ ಯೋಗದಿನ’ವನ್ನು ಪ್ರಸ್ತುತಪಡಿಸಿದಷ್ಟೇ ಅಗತ್ಯವಿದ್ದಾಗ ಔಷಧಗಳನ್ನು ತಯಾರಿಸಿ ರಫ್ತೂ ಕೂಡ ಮಾಡುತ್ತಿದ್ದೇವೆ. ಜಗತ್ತು ಭಾರತವನ್ನು ಗೌರವದ ಕಂಗಳಿಂದ ನೋಡುವುದು ಈ ಕಾರಣಕ್ಕಾಗಿಯೇ. ತಾನು ತೊಂದರೆಯಲ್ಲಿ ಇರುವಾಗಲೂ ಇತರರ ಸಹಕಾರಕ್ಕೆ ಸದಾ ಮುನ್ನುಗ್ಗುವ ಜನ ಭಾರತೀಯರು! ಪಶ್ಚಿಮದ ರಾಷ್ಟ್ರಗಳಲ್ಲಿ ಎಲ್ಲ ಕೆಲಸವನ್ನು ಸರ್ಕಾರವೇ ಮಾಡಬೇಕು ಎಂಬ ಭಾವನೆ ಇರುವಾಗ ಈ ನಾಡಿನಲ್ಲಿ ಮಾತ್ರ ಲಾಕ್​ಡೌನಿನ ಹೊತ್ತಿನಲ್ಲಿ ಪ್ರತಿಯೊಬ್ಬ ಹಸಿದವನಿಗೂ ಊಟ ತಲುಪಿಸುವ ಕಾಯಕವನ್ನು ಜನರೇ ಹೊತ್ತಿದ್ದರು. 50 ದಿನಗಳ ಕಾಲ ದೇಶ ಸ್ತಬ್ಧವಾಗಿ ಹೋದಾಗಲೂ ಬೀದಿಗಳಲ್ಲಿ ವಸ್ತುಗಳನ್ನು ಮಾರುವ, ರೈಲ್ವೇ ಪ್ಲಾಟ್​ಫಾಮರ್್​ಗಳಲ್ಲಿ ನೀರು, ತಿಂಡಿ ಮಾರುವ ಬಡವರೂ ಹತಾಶರಾಗದೆ ಬದುಕುವ ಛಲ ತೋರಿದರು. ಆ ಛಲ, ಉತ್ಸಾಹಗಳ ಪರಿಣಾಮವಾಗಿಯೇ- ಒಂದು ಪಿಪಿಇ ಕಿಟ್​ಗಳನ್ನೂ ತಯಾರಿಸದ್ದಿದ್ದ ಭಾರತ ಇಂದು ದಿನಕ್ಕೆ 2 ಲಕ್ಷದಷ್ಟು ಕಿಟ್​ಗಳನ್ನು ತಯಾರಿಸುತ್ತಿದೆ. 2 ಲಕ್ಷ ಎನ್-95 ಮುಖಗವಸುಗಳು ಇಂದು ನಿರ್ವಣಗೊಳ್ಳುತ್ತಿವೆ.

ಭಾರತಕ್ಕೆ ಅಪರೂಪದ ಅಂತಃಶಕ್ತಿಯೊಂದಿದೆ. ಕರೊನಾ ಅದನ್ನೀಗ ಬಡಿದೆಬ್ಬಿಸಿಬಿಟ್ಟಿದೆ. ಹೀಗೆಂದು ಮೋದಿ ಹೇಳುವಾಗ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು! ಅವರು ಸುಮ್ಮನೆ ಪ್ರೇರಣೆ ಕೊಡಲಿಲ್ಲ. ಸಮರ್ಥ ರಾಜಮಾರ್ಗವನ್ನೂ ಮುಂದಿಟ್ಟಿದ್ದಾರೆ. ನಾವೀಗ ಭಾರತದ ಆರ್ಥಿಕತೆ ಬಲುದೊಡ್ಡ ನೆಗೆತ ಕಾಣುವಂತೆ ರೂಪಿಸಬೇಕಿದೆ. ಮೂಲಭೂತ ಸೌಕರ್ಯಗಳಲ್ಲಿ ನಾವೀಗ ಹೊಸದೊಂದು ಮೈಲಿಗಲ್ಲು ಸ್ಥಾಪಿಸಬೇಕಿದೆ. ತಂತ್ರಜ್ಞಾನವನ್ನು ಬಳಸಿ ಹೊಸ ವ್ಯವಸ್ಥೆಯನ್ನು ರೂಪಿಸಬೇಕಿದೆ. ನಮ್ಮ ಜನಸಂಖ್ಯೆಯೇ ಶಕ್ತಿ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಸಮಯ ಬಂದಿದೆ. ಇನ್ನು ಕೊನೆಯದಾಗಿ ಜನರ ಬೇಡಿಕೆಯನ್ನು ಪೂರೈಕೆ ಮಾಡುವ ಜನರೊಂದಿಗೆ ಜೋಡಿಸಿ ಸಮರ್ಥವಾದ ಪೂರೈಕೆಯ ವ್ಯವಸ್ಥೆಯನ್ನು ನಿರ್ವಿುಸುವ ಹೊತ್ತು ಬಂದಿದೆ. ಈ ಐದು ಸ್ತಂಭಗಳ ಮೇಲೆ ಆತ್ಮನಿರ್ಭರ ಭಾರತ ರೂಪುಗೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಹಾಗಂತ ಇದು ಹೊಸದಾಗಿ ಹೇಳುತ್ತಿರುವುದೇನೂ ಅಲ್ಲ. ಪ್ರತಿಯೊಂದು ಸ್ತಂಭವೂ ಅದಾಗಲೇ ಬಲವಾಗಿ ನಿರ್ವಣಗೊಳ್ಳುತ್ತಿದೆ. ವ್ಯವಸ್ಥೆ ಹೇಗೆ ಡಿಜಿಟಲೀಕರಣಗೊಂಡಿದೆ ಎಂದರೆ ಎಲ್ಲ ಲಾಕ್​ಡೌನಿನ ಸ್ಥಿತಿಯಲ್ಲಿದ್ದರೂ ಜನಧನ್, ಆಧಾರ್ ಮತ್ತು ಮೊಬೈಲ್​ಗಳನ್ನು ಬಳಸಿ ಫಲಾನುಭವಿಗಳಿಗೆ ಹಣ ತಲುಪುವ ವ್ಯವಸ್ಥೆ ನಡೆದಿದೆ. ಇದು ನಿಜಕ್ಕೂ ಭಾರತದ ಕುರಿತಂತೆ ಊಹಿಸಲಿಕ್ಕೆ ಸಾಧ್ಯವೇ ಇಲ್ಲದಂತಹ ಸಂಗತಿ!

ಮೋದಿ ಬಲುಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಈಗ ನಮ್ಮ ಜವಾಬ್ದಾರಿ. ರಾಷ್ಟ್ರಕ್ಕಾಗಿ ಹೋರಾಡುವ ಹೊತ್ತು ಈಗ ಖಂಡಿತ ಬಂದಿದೆ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ನಾವಿರಲಿಲ್ಲ ಎಂಬ ನೋವು ಈಗ ಬೇಕಿಲ್ಲ. ಸ್ವಾತಂತ್ರ್ಯದ ನಂತರ ಭಾರತ ನಿರ್ವಣದ ಬಲುದೊಡ್ಡ ಅವಕಾಶ ಒದಗಿಬಂದಿದೆ. ಪ್ರಧಾನಮಂತ್ರಿಯವರು ಹೇಳಿದಂತೆ ಸ್ಥಳೀಯ ವಸ್ತುಗಳನ್ನು ಕೊಳ್ಳುವ ಮತ್ತು ಬೇಡಿಕೆ-ಪೂರೈಕೆಗಳಿಗೆ ವ್ಯವಸ್ಥೆ ರೂಪಿಸುವ ಹೊಣೆ ಹೊತ್ತುಕೊಳ್ಳೋಣ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರಲ್ಲ ‘ಬಡ, ಬೆಸ್ತನ ಜೋಪಡಿಗಳಿಂದ ಹೊಸ ಭಾರತ ಮೈದೋರಲಿ’ ಅಂತ. ಆ ಹೊತ್ತು ಈಗ ಬಂದಿದೆ. ಅವರೇ ಹೇಳಿದಂತೆ ತಾಯಿ ಭಾರತಿ ಕಾಳಿಯಂತೆ, ದುರ್ಗೆಯಂತೆ ಮೈಕೊಡವಿಕೊಂಡು ಎದ್ದುನಿಲ್ಲುತ್ತಿದ್ದಾಳೆ. ಬನ್ನಿ ಆಕೆ ಸಿಂಹಾಸನಸ್ಥಳಾಗುವುದನ್ನು ಕಣ್ತುಂಬಿಕೊಳ್ಳೋಣ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)