More

    ಟಿಡಿಎಸ್​ ಕಡಿತ ಯಾರಿಗೆ? ಎಂಎಸ್​ಎಂಇಗಳಿಗೇಕೆ ಅಷ್ಟು ಹಣ ಮೀಸಲು?-ತಜ್ಞರ ಉತ್ತರ…

    ಟಿಡಿಎಸ್​ ಕಡಿತ ಯಾರಿಗೆ? ಎಂಎಸ್​ಎಂಇಗಳಿಗೇಕೆ ಅಷ್ಟು ಹಣ ಮೀಸಲು?-ತಜ್ಞರ ಉತ್ತರ...
    ನಿತ್ಯಾನಂದ ಎನ್​., ಲೆಕ್ಕ ಪರಿಶೋಧಕರು

    ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊವಿಡ್​-19ರ ಬಿಕ್ಕಟ್ಟಿನ ನಿರ್ವಹಣೆಗಾಗಿ ನಿನ್ನೆ 20 ಲಕ್ಷ ಕೋಟಿ ರೂಪಾಯಿಯನ್ನು ಘೋಷಣೆ ಮಾಡಿದ್ದರು.

    ಈ ಪ್ಯಾಕೇಜ್​​ನಲ್ಲಿ ಯಾವಯಾವ ವರ್ಗಕ್ಕೆ, ಕೈಗಾರಿಕೋದ್ಯಮಗಳಿಗೆ ಏನು ಸಿಗಲಿದೆ ಎಂಬುದನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಪ್ಯಾಕೇಜ್​ನ ಮೊದಲ ಭಾಗವನ್ನು ಹಂಚಿಕೆ ಮಾಡಿರುವ ನಿರ್ಮಲಾ ಸೀತಾರಾಮನ್​ ಇಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಕ್ಕೆ ತೆಗೆದುಕೊಳ್ಳಲಾಗುವ ಆರು ಹೊಸ ಕ್ರಮಗಳನ್ನು ತಿಳಿಸಿದ್ದಾರೆ. ಹಾಗೇ ಟಿಡಿಎಸ್​ ಕಡಿತ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನೆರವಿನ ಬಗ್ಗೆ ತಿಳಿಸಿದ್ದಾರೆ.

    ಇಂದು ನಿರ್ಮಲಾ ಸೀತಾರಾಮನ್​ ಘೋಷಣೆ ಮಾಡಿದ ಅಂಶಗಳು, ಯಾರಿಗೆಷ್ಟು ಅನುಕೂಲ..ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಬುನಾದಿಯಾಗಲಿದೆಯಾ ಎಂಬ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ ನಿತ್ಯಾನಂದ ಎನ್​. ಅವರು ವಿಜಯವಾಣಿ ವೆಬ್​ಸೈಟ್​ (www.vijayavani.net) ಜತೆ ಮಾತನಾಡಿದ್ದಾರೆ. ಕೆಲವು ಗೊಂದಲಗಳಿಗೆ ಉತ್ತರಿಸಿದ್ದಾರೆ.

    ಟಿಡಿಎಸ್​ ಕಡಿತದ ಬಗ್ಗೆ ಗೊಂದಲ ಬೇಡ

    ಟಿಡಿಎಸ್​, ಟಿಸಿಎಸ್​​ನಲ್ಲಿ ಶೇ.25ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ. ಆದರೆ ಈ ಟಿಡಿಎಸ್​ನಲ್ಲಿ ಕಡಿತ ಆಗುವುದು ವೇತನವರ್ಗಕ್ಕೆ ಅಲ್ಲ. ಇದು ಅನ್ವಯ ಆಗುವುದು ವೇತನವರ್ಗವಲ್ಲದ ಇತರರಿಗೆ.

    ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತ, ಪ್ರತಿ ತಿಂಗಳು ವೇತನ ಪಡೆಯುವವರಿಗೆ ಟಿಡಿಎಸ್​ನಲ್ಲಿ ಯಾವುದೇ ಕಡಿತ ಆಗುವುದಿಲ್ಲ. ಒಬ್ಬ ನಾನ್​ ಸ್ಯಾಲರೀಡ್​ ವ್ಯಕ್ತಿಗೆ ಒಂದು ಸಂಸ್ಥೆ ಇಷ್ಟು ದಿನ 10,000 ರೂ.ಕೊಟ್ಟು ಅದರಲ್ಲಿ 1000 ರೂ.ಟಿಡಿಎಸ್​ ಕಟ್​ ಮಾಡುತ್ತಿದ್ದರೆ, ಇನ್ನು ಮುಂದೆ 750ರೂ. ಕಡಿತಗೊಳಿಸಬೇಕಾಗುತ್ತದೆ. ಉಳಿದ 250 ರೂ. ಆ ವ್ಯಕ್ತಿಯ ಕೈಯಲ್ಲಿ ಉಳಿಯುತ್ತದೆ. ಇದರಿಂದ ಖಂಡಿತ ಅನುಕೂಲ ಆಗುತ್ತದೆ. ಹಾಗಾಗಿ ನಿಗದಿತ ವೇತನ ಪಡೆಯದ ವರ್ಗಗಳಾದ, ಗುತ್ತಿಗೆ, ಬಾಡಿಗೆದಾರರು, ಡಿವಿಡೆಂಡ್​ಗಳು, ಪೂರೈಕೆದಾರರು, ಬ್ರೋಕರೇಜ್ ​ಸೇರಿ ಮತ್ತಿತರರಿಗೆ ಇಷ್ಟು ದಿನಕ್ಕಿಂತ ಶೇ.25ರಷ್ಟು ಹೆಚ್ಚಿನ ಉಳಿತಾಯ ಮಾಡುವಂತಾಗುತ್ತದೆ ಎಂದು ನಿತ್ಯಾನಂದ ಎನ್​. ಅವರು ತಿಳಿಸಿದ್ದಾರೆ.

    ಹಾಗೇ ವೇತನವರ್ಗಕ್ಕೆ ಮುಂದೆ ಖಂಡಿತ ಏನಾದರೂ ಅನುಕೂಲ ಸಿಕ್ಕೇಸಿಗುತ್ತದೆ. 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ನ ಮೊದಲ ಕಂತನ್ನಷ್ಟೇ ಸದ್ಯ ಹೇಳಿದ್ದಾರೆ. ಇನ್ನು ಮುಂದಿನ ಹಂತದಲ್ಲಿ ವೇತನವರ್ಗ, ಮಧ್ಯಮವರ್ಗದವರಿಗೆ, ಮೀನುಗಾರರಿಗೆ ಕೂಡ ಅನುಕೂಲವಾಗುವಂತೆ ಘೋಷಣೆ ಮಾಡುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಹೊರನೋಟಕ್ಕೆ ಪ್ಯಾಕೇಜ್​ನಲ್ಲಿ ಎಲ್ಲ ದುಡ್ಡುಗಳನ್ನೂ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳಿಗೆ, ರಿಯಲ್​ ಎಸ್ಟೇಟ್​ಗಳಿಗೆ, ಕಾಂಟ್ರಾಕ್ಟರ್​​ಗಳಿಗೆ ಕೊಡುತ್ತಿದ್ದಾರೆ, ಬಡವರು, ಮಧ್ಯಮವರ್ಗವನ್ನು ನೋಡಲಿಲ್ಲ ಎಂದು ಅನ್ನಿಸಬಹುದು. ಆದರೆ ರಿಯಲ್​ ಎಸ್ಟೇಟ್​ ವಲಯ ಮತ್ತು ಮೌಲ ಸೌಕರ್ಯ ನಿರ್ಮಾಣ ಗುತ್ತಿಗೆದಾರರಿಂದಾಗಿ ಅದೆಷ್ಟೋ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಈ ದೇಶದಲ್ಲಿ ಅತಿ ಹೆಚ್ಚು ನೌಕರರು, ಕೆಲಸಗಾರರು ಇರುವುದು ರಿಯಲ್​ ಎಸ್ಟೇಟ್​ ವಲಯ, ಕಾಂಟ್ರಾಕ್ಟ್​ ಮತ್ತು ಎಂಎಸ್​ಎಂಇ ವಲಯದಲ್ಲಿ. ಹಾಗಾಗಿ ಅಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿ, ಅವರಿಗೆ ಸಹಾಯ ಮಾಡುವುದರಿಂದ ಇನ್ನಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಅದರಲ್ಲೂ ವಲಸೆ ಕಾರ್ಮಿಕರು, ದಿನಗೂಲಿ ನೌಕರರಂತಹ ಬಡ ಜನರಿಗೇ ತುಂಬ ಸಹಾಯವಾಗುತ್ತದೆ. ಇದರಿಂದ ಸಹಜವಾಗಿ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ ಎಂದು ಹೇಳಿದರು.

    ಖಂಡಿತ ಆಶಯ ಇದೆ
    ಇವತ್ತಿನ ಪ್ಯಾಕೇಜ್​ ನೋಡಿದರೆ ಖಂಡಿತ ಸ್ವಾವಲಂಬಿ ಭಾರತ ನಿರ್ಮಾಣವಾಗುತ್ತದೆ ಎಂದು ಆಶಯ ಇದೆ. ಇವತ್ತು ಏನು ಕೊಟ್ಟಿದ್ದಾರೋ ಅದರ ಬಗ್ಗೆ ಸಂತೋಷ ಇರಲಿ. ಯಾವ್ಯಾವ ವಲಯಕ್ಕೆ ಇಂದು ಸರ್ಕಾರ ಹಣ ಕೊಟ್ಟಿದೆಯೋ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ಆಯಾ ವಲಯದ ಉದ್ಯಮಿಗಳದ್ದು. ಸರ್ಕಾರವೂ ಕೂಡ ಆದಷ್ಟು ಬೇಗ, ಯೋಗ್ಯರಿಗೆ ಇದನ್ನು ತಲುಪಿಸಬೇಕು ಎಂದು ಹೇಳಿದ್ದಾರೆ.

    NBFCಗಳಿಗೇಕೆ ನೆರವು ಏಕೆ?
    ಅನೇಕರಿಗೆ ಬ್ಯಾಂಕ್​ಗಳು ಕೈಗೆಟಕುವುದಿಲ್ಲ ಅಂಥವರಿಗೆ ಈ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಹಾಯ ಮಾಡುತ್ತವೆ. ಇಂದು ರಿಯಲ್​ ಎಸ್ಟೇಟ್​, ಕಂಟ್ರಾಕ್ಟರ್​ಗಳಿಗೆ ಆರ್ಥಿಕ ನೆರವು ಘೋಷಿಸಲಾಗಿದೆ. ಅಂಥವರಿಗೆ ಹಣಕಾಸು ಸಹಾಯ ಸಿಗುವುದು ಈ ಎನ್​ಬಿಎಫ್​ಸಿ, ಎಚ್​ಎಫ್​ಸಿಗಳಂತಹ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ. ಹಾಗಾಗಿ ಇವುಗಳಿಗೂ ಪ್ಯಾಕೇಜ್​ನಲ್ಲಿ ಹಣ ಮೀಸಲಿಡಲಾಗಿದೆ ಎಂದು ನಿತ್ಯಾನಂದ ಅವರು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts