ತಿರುಪತಿ: ತುಂಬಾ ಕನಸು ಹೊತ್ತುಕೊಂಡು ಪತಿಯ ಮನೆಗೆ ಆಗಮಿಸಿದ ವಧುವಿಗೆ ಪಾಪಿ ಪತಿರಾಯ ನರಕ ದರ್ಶನ ಮಾಡಿಸಿರುವ ಅಮಾನವೀಯ ಘಟನೆ ತಿರುಪತಿಯಲ್ಲಿ ಬೆಳಕಿಗೆ ಬಂದಿದೆ. ಇದುವರೆಗೂ ಕೇವಲ ಚಲನಚಿತ್ರಗಳಲ್ಲಿ ನೋಡಿದಂತಹ ಅತ್ಯಂತ ಕ್ರೂರ ಪತಿಯ ಪಾತ್ರ ಈ ಸ್ಟೋರಿಯಲ್ಲಿ ನಿಜವಾಗಿದೆ.
ತನ್ನ ಪತ್ನಿಯನ್ನು ಕಾಲ್ ಗರ್ಲ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿರುವ ಪಾಪಿ ಪತಿ, ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಪತಿಯ ಫೋಟೋಗಳನ್ನು ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ.
ಘಟನೆಯ ವಿವರಣೆಗೆ ಬರುವುದಾದರೆ, ತಿರುಪತಿ ಉಪನಗರ ತಿಮ್ಮಿನಾಯುಡು ಪಾಳೆಂನ ಎಸ್ಜಿಎಸ್ ಕಾಲೇಜಿನಲ್ಲಿ ಕಿರಿಯ ಸಹಾಯಕನಾಗಿ ಕೆಲಸ ಮಾಡುತ್ತಿರುವ ರೋಹಿತ್ ಕುಮಾರ್, ರೇವಂತ್ ಹೆಸರಿನಲ್ಲಿ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಕಳೆದ ಆಗಸ್ಟ್ನಲ್ಲಿ ಮದುವೆಯಾಗಿದ್ದ. ಕೆಲವು ದಿನಗಳ ಬಳಿಕ ತನ್ನ ನಿಜ ಹೆಸರು ಮತ್ತು ವಿಳಾಸವನ್ನು ಹೇಳಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ.
ಮದುವೆಯಾದಾಗಿನಿಂದ ಕಿರುಕುಳ ನೀಡುತ್ತಿದ್ದ ರೋಹಿತ್, 10 ಲಕ್ಷ ರೂ. ನಗದು, ಚಿನ್ನಾಭರಣ ಸೇರಿದಂತೆ ಹೆಚ್ಚುವರಿಗೆ ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆದರೆ, ಇದಕ್ಕೆ ಒಪ್ಪದಿದ್ದಾಗ ಪತ್ನಿಯನ್ನು ಮನೆಯಿಂದ ಆಚೆಗೆ ನೂಕಿದ್ದ. ಅಲ್ಲದೆ, ವರದಕ್ಷಿಣೆ ತರದಿದ್ದರೆ ಪೋರ್ನ್ ವೆಬ್ಸೈಟ್ಗೆ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: ಅಮ್ಮನನ್ನು ಕೊಂದು, ಅಂಗಳದಲ್ಲಿ ಬೆಂಕಿ ಹಚ್ಚಿ ಮಂತ್ರ ಪಠಿಸಿದ ಮಗ! ಕೊಲೆಗೆ ಕಾರಣ ಕೇಳಿ ಶಾಕ್ ಆದ ಸಹೋದರಿ
ಕೇವಲ ಬೆದರಿಕೆ ಮಾತ್ರವಲ್ಲದೆ, ನಿಜವಾಗಿಯೂ ಆತ ಕಾಲ್ ಗರ್ಲ್ ಎಂದು ಹೇಳಿ ಫೋಟೋಗಳನ್ನು ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿದೆ. ಮಗಳ ಬಗ್ಗೆ ತಿಳಿದ ಆಕೆಯ ಪಾಲಕರು ರೋಹಿತ್ ಮನೆಗೆ ಧಾವಿಸುತ್ತಾರೆ. ಇದೊಂದು ಕೌಟುಂಬಿಕ ಸಮಸ್ಯೆ ಎಂದು ಅರಿಯುವ ಪೊಲೀಸರು ಎರಡು ಕುಟುಂಬವನ್ನು ಕೂರಿಸಿ ಸಂಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ, ರೋಹಿತ್ ಸಂತ್ರಸ್ತೆಯ ಪಾಲಕರನ್ನೇ ಹಿಗ್ಗಾಮುಗ್ಗ ಬೈಯುತ್ತಾನೆ. ಇದೀಗ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. (ಏಜೆನ್ಸೀಸ್)