ನ್ಯೂಸ್

ದುಬೈಗೆ ತಲುಪಿತು ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ವರ್ಲ್ಡ್​ ಟ್ರೇಡ್ ಸೆಂಟರ್​ನಲ್ಲೂ ಜಾಗೃತಿ

Webdesk - Ravikanth

ಯುಎಇ: ಮಣ್ಣು ರಕ್ಷಣೆ ಸಲುವಾಗಿ ಜಾಗತಿಕವಾಗಿ ಜಾಗೃತಿ ಮೂಡಿಸಲು ಈಶ ಫೌಂಡೇಷನ್​ನ ಸದ್ಗುರು ಹಮ್ಮಿಕೊಂಡಿರುವ ಅಭಿಯಾನ ದುಬೈಗೆ ತಲುಪಿದೆ. ನೂರು ದಿನಗಳೊಳಗೆ 27 ರಾಷ್ಟ್ರಗಳಲ್ಲಿ 30 ಸಾವಿರ ಕಿ.ಮೀ. ದೂರವನ್ನು ಬೈಕ್​ನಲ್ಲಿ ಏಕಾಂಗಿ ಆಗಿ ಸಂಚರಿಸಿ ಜಾಗೃತಿ ಮೂಡಿಸಲು ಮುಂದಾಗಿರುವ ಅವರು ಈಗಾಗಲೇ ದುಬೈ ತಲುಪಿದ್ದಾರೆ.

ದುಬೈನಲ್ಲಿ ತಮ್ಮ ಕೊನೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸದ್ಗುರು, ನೀವು ಮರಳಿಗೆ ಜೈವಿಕ ಪದಾರ್ಥವನ್ನು ಕೂಡಿಸಿದರೆ ಅದು ಮಣ್ಣಾಗುತ್ತದೆ. ನೀವು ಜೈವಿಕ ಪದಾರ್ಥವನ್ನೆಲ್ಲ ತೆಗೆದುಬಿಟ್ಟರೆ ಮಣ್ಣು ಮರಳಾಗುತ್ತದೆ. ಯುಎಇ. ಮಾಡುತ್ತಿರುವುದು ಇದನ್ನೇ. ಜೈವಿಕ ಪದಾರ್ಥವನ್ನು ಕೂಡಿಸಿ ಮರಳನ್ನು ಮಣ್ಣನಾಗಿಸುವುದು. ಇದು ಪಡೆದುಕೊಂಡಿರುವ ದಿಕ್ಕು ಪ್ರಶಂಸನೀಯ ಎಂದು ಯುಎಇಯನ್ನು ಕೊಂಡಾಡಿದರು.

ದುಬೈ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಕಿಕ್ಕಿರಿದು ತುಂಬಿದ 10 ಸಾವಿರಕ್ಕೂ ಹೆಚ್ಚಿನ ಜನರಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಸದ್ಗುರು, ನಮ್ಮಲ್ಲಿ ಪ್ರತಿಯೊಬ್ಬರೂ ಬೇಕಂತಲೋ ಇಲ್ಲದೆಯೋ ಪರಿಸರ ಮತ್ತು ಮಣ್ಣಿನ ಹಾನಿ ಮಾಡುವುದರಲ್ಲಿ ಕೊಡುಗೆ ನೀಡಿದ್ದೇವೆ. ಹಾಗಾಗಿ ಮಣ್ಣಿನ ಮತ್ತು ಸಮಗ್ರವಾಗಿ ಪೃಥ್ವಿಯ ಆರೋಗ್ಯವನ್ನು ಪುನರ್ಸ್ಥಾಪಿಸುವ ಏಕೈಕ ಮಾರ್ಗವೆಂದರೆ ನಾವೆಲ್ಲ ಪರಿಹಾರದ ಅಖಂಡ ಭಾಗವಾಗಿ ನಮ್ಮ ಪ್ರಯತ್ನ, ಸಹಕಾರಗಳನ್ನು ಹೆಚ್ಚಿಸಬೇಕು ಹಾಗೂ ಹಂಚಿಕೊಳ್ಳಬೇಕು ಎಂದು ಜ್ಞಾಪಿಸಿದರು.

ಸಹಿಷ್ಣುತೆ ಮತ್ತು ಸಹಬಾಳ್ವೆಯ ಮಂತ್ರಿಯಾಗಿರುವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ತಮ್ಮ ದೇಶದ ಪ್ರಮುಖ ಪರಿಸರವಾದಿಗಳನ್ನು ನೆನೆಯುತ್ತ ಆಧ್ಯಾತ್ಮಿಕ ಮೌಲ್ಯಗಳು ಮತ್ತು ಪರಿಸರದೊಂದಿಗಿನ ಪ್ರಬಲ ಸಂಬಂಧದ ಬಗ್ಗೆ ಮಾತನಾಡಿದರು. #ಮಣ್ಣುಉಳಿಸಿ ಪ್ರವಾಸದಲ್ಲಿ ಯುಎಇಯನ್ನು ಸೇರಿಸಿಕೊಂಡಿದ್ದಕ್ಕೆ ಅವರು ಸದ್ಗುರು ಅವರಿಗೆ ಸ್ನೇಹಪರವಾಗಿ ಕೃತಜ್ಞತೆ ಸಲ್ಲಿಸಿದರು. ಯುಎಇ.ಗೆ ಭಾರತದ ರಾಯಭಾರಿಯಾಗಿರುವ ಸಂಜಯ್ ಸುಧೀರ್ ಅವರು ಮಣ್ಣು ಉಳಿಸಿ ಪ್ರವಾಸವು ಭೂಮಿ ತಾಯಿಯೊಂದಿಗಿನ ನಮ್ಮ ಸಂಬಂಧವನ್ನು ಪುನರ್ಸ್ಥಾಪಿಸುವುದರಲ್ಲಿನ ಬಗ್ಗೆ ತಮ್ಮ ವಿಶ್ವಾಸವನ್ನು ತುಂಬು ಹೃದಯದಿಂದ ಹಂಚಿಕೊಂಡರು.

ಹವಾಮಾನ ಬದಲಾವಣೆ ಮತ್ತು ಪರಿಸರದ ಮಂತ್ರಿಯಾದ ಮರ್ಯಮ್ ಬಿಂಟ್ ಮೊಹಮ್ಮದ್ ಅಲ್ ಮುಹೈರಿ ಅವರು ಪರಿಸರವನ್ನು ಸಂರಕ್ಷಿಸುವ ಹಾಗೂ ಆಹಾರ ಭದ್ರತೆಯನ್ನು ಹೆಚ್ಚಿಸುವ ನಮ್ಮ ಸಾಮರ್ಥ್ಯವು, ನಮ್ಮ ಸಮಾಜದ ಎಲ್ಲ ಭಾಗಗಳೂ ಎಷ್ಟರ ಮಟ್ಟಿಗೆ ಈ ಕೆಲಸದಲ್ಲಿ ಭಾಗಿಯಾಗುತ್ತವೆ ಎಂಬುದರಲ್ಲಿದೆ. ಆದ್ದರಿಂದ ನಾವೆಲ್ಲರೂ ಭಾಗಿಯಾಗಿ, ಮಣ್ಣಿನ ಬಗೆಗಿನ ಮುಂದುವರೆಸಬಲ್ಲ ನಡವಳಿಕೆ ಮತ್ತು ಅಭ್ಯಾಸಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸಿ, ಮುಂದುವರೆಸಬಲ್ಲ ಭವಿಷ್ಯ ಹಾಗೂ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಮಣ್ಣು ಸತ್ವಹೀನವಾಗುತ್ತಿರುವುದನ್ನು ತ್ವರಿತವಾಗಿ ಹಿಂದಿರುಗಿಸಲು, ಮಾ.21ರಂದು ಸದ್ಗುರು ಏಕಾಂಗಿಯಾಗಿ ದ್ವಿಚಕ್ರ ವಾಹನದ ಮೇಲೆ ಯೂರೋಪ್, ಮಧ್ಯ ಪ್ರಾಚ್ಯ ಮತ್ತು ಭಾರತದ ಮೂಲಕ ಹಾದು ಪ್ರವಾಸ ಕೈಗೆತ್ತಿಕೊಂಡರು. 65ರ ಪ್ರಾಯದ ಯೋಗಿಯು ಮಣ್ಣಿನ ಅಳಿವಿನ ಬಗೆಗಿನ ಕಾರ್ಯನೀತಿ ಬದಲಾವಣೆಯ ಪ್ರಜ್ಞೆ ಮೂಡಿಸಲು ಮತ್ತು ಕಾನೂನು ಮಾಡಲು ಈ ಪ್ರವಾಸವನ್ನು ಕೈಗೊಂಡಿದ್ದಾರೆ.

ತಮ್ಮ ಈ ಪ್ರವಾಸದಲ್ಲಿ ಮೇ 18ರಂದು ದುಬೈ ತಲುಪಿದ ಸದ್ಗುರು, ಜುಬೈಲ್ ಮ್ಯಾಂಗ್ರೋವ್ವ್ ಪಾರ್ಕ್ ಮತ್ತು ಎಮಿರೇಟ್ಸ್ ಬಯೋ ಫಾರ್ಮ್​ಗೆ ಭೇಟಿ ನೀಡಿ ಆ ದೇಶದ ಮಣ್ಣನ್ನು ಸಂರಕ್ಷಿಸುವ ಪ್ರಯತ್ನಗಳನ್ನು ತಿಳಿದುಕೊಂಡರು. ಅಲ್ಲದೆ ಇಂಟರ್​​ನ್ಯಾಷನಲ್​ ಸೆಂಟರ್ ಫಾರ್ ಬಯೋಸಲೈನ್ ಅಗ್ರಿಕಲ್ಚರ್ (ಐ.ಸಿ.ಬಿ.ಎ.) ಜತೆ ಮಣ್ಣು ಉಳಿಸುವ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಸದ್ಗುರು ಗ್ಲೋಬಲ್ ಸಿಟಿಜನ್ ಫೋರಮ್ಅನ್ನು ಉದ್ದೇಶಿಸಿ ಕೂಡ ಮಾತನಾಡಿದರು. ಮಣ್ಣನ್ನು ಒಂದು ಪರಿಸರ-ವೈಜ್ಞಾನಿಕ ವಿಷಯವಾಗಿ ಪ್ರತ್ಯೇಕಿಸಬೇಕು ಅಲ್ಲದೆ, ನೀವು ಬದುಕಿನ ಬುನಾದಿಯನ್ನು ತೆಗೆದುಬಿಟ್ಟರೆ, ಬೇರೆ ಯಾವ ವಿಷಯದ ಮಾತನಾಡಲಿಕ್ಕಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಜಗತ್ತಿನಲ್ಲಿ ಮಣ್ಣು ಸಂರಕ್ಷಿಸುವ ಸಂವಾದವು ಎತ್ತರದ ಸ್ವರ ತಲುಪಬೇಕು ಎಂದು ಒತ್ತಾಯ ಮಾಡಿದರಲ್ಲದೆ ಈ ಸಂದೇಶವನ್ನು ವರ್ಧಿಸುವುದರಲ್ಲಿ ಪ್ರಪಂಚದ ಉದ್ಯಮದ ನಾಯಕರ ಬಹು ದೊಡ್ಡ ಪಾತ್ರವಿದೆ ಎಂದು ಸದ್ಗುರು ಸೂಚಿಸಿದರು.

ಮಣ್ಣು ಉಳಿಸಿ ಅಭಿಯಾನಕ್ಕೆ ವಿವಿಧ ಜಾಗತಿಕ ಸಂಸ್ಥೆಗಳಾದ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕೊಂಬಾಟ್ ಡೆಸೆರ್ಟಿಫಿಕೇಷನ್ (ಯು.ಎನ್.ಸಿ.ಸಿ.ಡಿ.); ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ (ಯು.ಎನ್.ಇ.ಪಿ.); ಫೇಥ್​ ಫಾರ್ ಅರ್ಥ್, ಒಂದು ಯು.ಎನ್.ಇ.ಪಿ.ನ ಮೊದಲ ಹೆಜ್ಜೆ; ವರ್ಲ್ಡ್ ಫುಡ್ ಪ್ರೋಗ್ರಾಮ್ (ಡಬ್ಲ್ಯೂ.ಎಫ್.ಪಿ.); ಮತ್ತು ಕೆರಿಬ್ಬಿಯನ್ ಕಮ್ಯೂನಿಟಿ (CARICOM) ಬೆಂಬಲ ವ್ಯಕ್ತಪಡಿಸಿವೆ.

ಸದ್ಗುರು ಅವರ ಈ ಅಭಿಯಾನ ಈಗಾಗಲೇ 2 ಶತಕೋಟಿಗಿಂತ ಹೆಚ್ಚು ಜನರನ್ನು ತಲುಪಿದ್ದು, 72 ದೇಶಗಳು ಮಣ್ಣು ಉಳಿಸಲು ಒಪ್ಪಿಕೊಂಡಿವೆ. 7 ಕೆರಿಬಿಯನ್ ರಾಷ್ಟ್ರಗಳು, ಅಜರ್ಬೈಜಾನ್, ರೊಮೇನಿಯಾ ಮತ್ತು ಯು.ಎ.ಇ. ಸೇರಿ ಹಲವು ರಾಷ್ಟ್ರಗಳು ಮಣ್ಣನ್ನು ಸಂರಕ್ಷಿಸುವ ಕಾರ್ಯನೀತಿಯ ಕಾನೂನು ತರಲು ಒಪ್ಪಂದದ ನಿವೇದನಾಪತ್ರಗಳನ್ನು (MoU) "ಸೇವ್ ಸಾಯಿಲ್" ನೊಂದಿಗೆ ಸಹಿ ಮಾಡಿವೆ. ಕಾಮನ್ವೆಲ್ತ್​​ನ 54 ರಾಷ್ಟ್ರಗಳು, ಯುರೋಪಿಯನ್ ಯೂನಿಯನ್, ಯುರೋಪಿನಾದ್ಯಂತ ಹಲವು ಸಂಸ್ಥೆಗಳು ಹಾಗೂ ಮುಸ್ಲಿಂ ವರ್ಲ್ಡ್ ಲೀಗ್ ಕೂಡ ಮಣ್ಣು ಉಳಿಸಿ ಅಭಿಯಾನದ ಬೆಂಬಲಕ್ಕೆ ಮುಂದೆ ಬಂದಿವೆ.