ಚಿಕ್ಕಬಳ್ಳಾಪುರ: ಆದಿಯೋಗಿಯ ಬೃಹತ್ ಆಕರ್ಷಕ ವಿಗ್ರಹವನ್ನು ನೋಡಬೇಕೆಂದರೆ ಈಗ ಕೊಯಮತ್ತೂರು ಸಮೀಪದ ಈಶ ಯೋಗ ಕೇಂದ್ರಕ್ಕೇ ಹೋಗಬೇಕು. ಆದರೆ ಇನ್ನು ಕೆಲವೇ ದಿನಗಳು ಕಳೆದರೆ ಆದಿಯೋಗಿಯ ದರ್ಶನಕ್ಕೆ ಅಷ್ಟು ದೂರ ಹೋಗಬೇಕಾಗಿಲ್ಲ. ಇಲ್ಲೇ ನಮ್ಮ ರಾಜ್ಯದ ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿಯನ್ನು ಕಣ್ತುಂಬಿಕೊಳ್ಳಬಹುದು.
ಹೌದು, ಆದಿಯೋಗಿಯ ಪ್ರತಿರೂಪವನ್ನು ಈಶ ಫೌಂಡೇಷನ್ ಚಿಕ್ಕಬಳ್ಳಾಪುರ ಜಿಲ್ಲೆಯ ಜಾಲರಿ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸುತ್ತಿದೆ. ಕೊಯಮತ್ತೂರಿನಲ್ಲಿರುವ ಆದಿಯೋಗಿಯ ಬೃಹತ್ ಪ್ರತಿಮೆಯೇ ಇಲ್ಲಿಯೂ ಯಥಾವತ್ತಾಗಿ ರೂಪುಗೊಳ್ಳಲಿದೆ.
ಇದಕ್ಕೆ ಪೂರಕವಾಗಿ, ನಾಗಮಂಟಪ ಪ್ರತಿಷ್ಠಾಪನಾ ಪೂಜೆ ಚಿಕ್ಕಬಳ್ಳಾಪುರ ಹೊರವಲಯದ ಜಾಲರಿ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆಯಿತು. ಭವ್ಯ ಕಾರ‌್ಯಕ್ರಮದಲ್ಲಿ ಸದ್ಗುರು ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ. ಕೆ. ಸುಧಾಕರ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ನಾಗ ಮಂಟಪ ಪೂಜೆಯನ್ನು ಸ್ವತಃ ಸದ್ಗುರು ಅವರೇ ನಡೆಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ನಾಗದೇವರಿಗೆ ಪೂಜೆ ಸಲ್ಲಿಸಿದರು. ನಂತರ ನಡೆದ ಕಾರ‌್ಯಕ್ರಮದಲ್ಲಿ ಶಿವ ಮತ್ತು ನಾಗ ಮಹಿಮೆಯ ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.