ಬೆಂಗಳೂರು: ‘ರಾಮಾಚಾರಿ’ ಧಾರಾವಾಹಿಗಳು ‘ಬಾನಿಗೊಂದು ತಾರೆ’ ಎಂಬ ವಿಡಿಯೋ ಸಾಂಗ್ ಸೇರಿ ‘ಆ 90 ದಿನಗಳು’ ಚಿತ್ರದಲ್ಲಿ ನಟಿಸಿರುವ ಖ್ಯಾತಿ ರಾಧಾ ಭಗವತಿಗೆ ಸಲ್ಲುತ್ತದೆ. ಇದೀಗ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಅವರು ಆಯ್ಕೆಯಾಗಿದ್ದಾರೆ. ಚಿತ್ರದ ಹೆಸರು ‘ವಸಂತಕಾಲದ ಹೂಗಳು’.
ಪ್ರಮೋದ್ ಶೆಟ್ಟಿ ಅಭಿನಯದ ‘ಒಂದು ಶಿಕಾರಿಯ ಕಥೆ’ ನಿರ್ದೇಶಕ ಸಚಿನ್ ಶೆಟ್ಟಿ ರಚಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಮೊದಲ ಚಿತ್ರದಲ್ಲಿ ಸಸ್ಪೆನ್ಸ್ ಕಥೆ ಹೇಳಿದ್ದ ಸಚಿನ್ ಈಗ ‘ವಸಂತಕಾಲದ ಹೂಗಳು’ ಚಿತ್ರದಲ್ಲಿ ಸಂಪೂರ್ಣವಾಗಿ ಬೇರೆಯದೇ ಜಾನರ್‌ನತ್ತ ಮುಖ ಮಾಡಿದ್ದು, ಟೀನೇಜ್ ಲವ್‌ಸ್ಟೋರಿ ಹೇಳಲಿದ್ದಾರೆ. ಚಿತ್ರಕ್ಕೆ ಸಚಿನ್ ರಾಠೋಡ್ ನಾಯಕನಾಗಿದ್ದು, ಅವರಿಗೆ ರಾಧಾ ಭಗವತಿ ನಾಯಕಿಯಾಗಿದ್ದಾರೆ. ಜತೆಗೆ ರಮೇಶ್ ರೈ, ಗುರುರಾಜ್ ಶೆಟ್ಟಿ, ಪವನ್, ನಂದೀಶ್ ತಾರಾಗಣದಲ್ಲಿದ್ದಾರೆ. ನಿರ್ಮಾಪಕರೆಲ್ಲರೂ ಬಿಜಾಪುರದವರಾಗಿದ್ದು, ಅದೇ ಜಿಲ್ಲೆಯ ಕನಮಡಿ ಎಂಬ ಗ್ರಾಮದಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ.
ಕರಾವಳಿಯ ನಿರ್ದೇಶಕರ ತಮ್ಮ ಕಥೆಯನ್ನು ಉತ್ತರ ಕರ್ನಾಟಕದ ಪರಿಸರದ ಹಿನ್ನೆಲೆಯಲ್ಲಿ ಹೇಳಲು ಹೊರಟಿರುವುದು ವಿಶೇಷ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಚಿತ್ರಕ್ಕೆ ಶಿವಶಂಕರ್ ನೂರಂಬಡ ಛಾಯಾಗ್ರಹಣ, ಕೆಂಪರಾಜು ಸಂಕಲನ ಹಾಗೂ ಭರತ್ ಜನಾರ್ಧನ್ ಸಂಗೀತವಿರಲಿದೆ.