ನ್ಯೂಸ್

ಮಗನಿಗೆ ಹೇರ್‌ಕಟ್ ಮಾಡಿದ ಸಚಿನ್ ತೆಂಡುಲ್ಕರ್

ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಬ್ಯಾಟ್‌ನಲ್ಲಿ ಚೆಂಡನ್ನು ಬೌನ್ಸಿಂಗ್ ಮಾಡಿ, ಸಹ-ಆಟಗಾರರಿಗೆ ಚಾಲೆಂಜ್ ಹಾಕಿದ್ದರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್. ಲಾಕ್‌ಡೌನ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುವ ಸಚಿನ್, ಮಗನಿಗೆ ಹೇರ್‌ಕಟ್ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಮಗ ಅರ್ಜುನ್‌ಗೆ ಹೇರ್ ಮಾಡುತ್ತಿರುವ ವಿಡಿಯೋವನ್ನು ಸಚಿನ್ ಇನ್‌ಸ್ಟಾಗ್ರಾಂಗೆ ಹಾಕಿದ ಎರಡು ಗಂಟೆಗಳ ಅಂತರದಲ್ಲೇ, 12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಮುಂಬೈನಲ್ಲಿ ಮಹಾಮಾರಿ ಕೋವಿಡ್-19 ಅಬ್ಬರ ಮೀತಿ ಮೀರಿದೆ. ಮನೆಯಲ್ಲೇ ಲಾಕ್ ಆಗಿರುವ ಸಚಿನ್ ತೆಂಡುಲ್ಕರ್ ಸಾಮಾಜಿಕ ಚಟುವಟಿಕೆಗಳನ್ನು ಮಾತ್ರ ನಿಲ್ಲಿಸಿಲ್ಲ. ಈಗಾಗಲೇ ಹಲವು ಎನ್‌ಜಿಒಗಳಿಗೆ ನೆರವಾಗಿರುವ ಸಚಿನ್, ಲಾಕ್‌ಡೌನ್‌ನಲ್ಲಿ ಕಾಲ ಕಳೆಯಲು ಇನ್‌ಸ್ಟಾಗ್ರಾಂ ಮೊರೆ ಹೋಗುತ್ತಿದ್ದಾರೆ. ಮನೆಯಿಂದ ಹೊರಬರಲಾಗದೇ ಇದ್ದುದ್ದರಿಂದ 19 ವರ್ಷದ ಮಗ ಹಾಗೂ ಕ್ರಿಕೆಟಿಗ ಅರ್ಜುನ್‌ಗೆ ತಾವೇ ಖುದ್ದು ಹೇರ್‌ಕಟ್ ಮಾಡಿದ್ದಾರೆ.

‘ಒಬ್ಬ ತಂದೆಯಾಗಿ ಎಲ್ಲವನ್ನು ಮಾಡಬೇಕಾಗುತ್ತದೆ. ಮಕ್ಕಳೊಂದಿಗೆ ಆಟ, ಜಿಮ್ ಅಭ್ಯಾಸ. ಇದೀಗ ಹೇರ್‌ಕಟ್ ಮಾಡುವುದನ್ನು ಕಲಿತೆ. ಹೇರ್‌ಕಟ್ ಮಾಡಿದ ಬಳಿಕ ಮಗ ುಲ್ ಹ್ಯಾಂಡ್‌ಸಮ್ ಆಗಿದ್ದಾನೆ’ ಎಂದು ಸಚಿನ್ ಬರೆದುಕೊಂಡಿದ್ದಾರೆ. ನನಗೆ ಸಹಾಯಕಿಯಾಗಿದ್ದ ಮಗಳು ಸಾರಾ ತೆಂಡುಲ್ಕರ್‌ಗೆ ಧನ್ಯವಾದಗಳು ಎಂದಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಂತ್ರಿಕನಾಗಿ ಮೆರೆದಾಡಿದ ಅವರು ಮಗನಿಗೆ ತಕ್ಕ ತಂದೆಯಾಗುವಲ್ಲೂ ಯಶಸ್ವಿಯಾಗಿದ್ದಾರೆ.