ನ್ಯೂಸ್

ಕುಡುಕರು, ರೌಡಿಗಳಿಗೂ ಹುಡುಗೀರು ಬೀಳ್ತಾರೆ, ನಾನು ಸೌಮ್ಯ ಇದದ್ದೇ ತಪ್ಪಾ?: ಶಾಸಕನೆದುರು ಯುವಕನ ಅಳಲು!

ಚಂದ್ರಪುರ(ಮಹಾರಾಷ್ಟ್ರ): ನಾನು ತುಂಬಾ ಒಳ್ಳೆಯ ಹುಡುಗ. ಪ್ರತಿದಿನ ಕೆಲಸಕ್ಕಾಗಿ ಹತ್ತಾರು ಕಿಲೋ ಮೀಟರ‌ ಗಡಚಂದೂರಿನಿಂದ ರಾಜೂರಕ್ಕೆ ಪ್ರಯಾಣಿಸುತ್ತೇನೆ. ಆದರೆ ಇದುವರೆಗೆ ಒಂದೇ ಒಂದು ಹುಡುಗಿ ನನ್ನತ್ತ ಆಕರ್ಷಿತಳಾಗಿಲ್ಲ. ನನಗೆ ತುಂಬಾ ನೋವಾಗಿದೆ. ಎಂಥೆಂಥವರಿಗೋ, ಕುಡುಕರು, ರೌಡಿಗಳಿಗೂ ಹುಡುಗೀರು ಬೀಳ್ತಾರೆ, ನನ್ನಂಥವನಿಗೆ ಯಾರೂ ಸಿಕ್ತಿಲ್ಲ, ಏನು ಮಾಡೋದು ಸಾರ್‌...

ಹೀಗೆಂದು ಮಹಾರಾಷ್ಟ್ರ ಚಂದ್ರಪುರದ ಯುವಕನೊಬ್ಬ ಚಂದ್ರಪುರ ತಾಲೂಕಿನ ಶಾಸಕ ಸುಭಾಷ್ ಧೋತೆ ಅವರಿಗೆ ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾನೆ. ಚಂದ್ರಪುರ ತಾಲೂಕಿನಾದ್ಯಂತ ಹಲವಾರು ಹುಡುಗಿಯರಿದ್ದಾರೆ. ಆದರೆ, ನನಗೆ ಯಾವುದೇ ಗೆಳತಿಯರಿಲ್ಲ, ನನ್ನನ್ನು ಒಬ್ಬರೂ ನೋಡುತ್ತಿಲ್ಲ, ಒಬ್ಬರೂ ಅಟ್ರಾಕ್ಟ್‌ ಆಗ್ತಿಲ್ಲ ಎನ್ನೋದೇ ಚಿಂತೆಯಾಗಿದೆ. ಇದು ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ನಾನು ಸಿಂಪಲ್‌ ಆಗಿದ್ದೇ ತಪ್ಪಾ? ನನಗ್ಯಾಕೆ ಗೆಳತಿಯರು ಸಿಗುತ್ತಿಲ್ಲ ಎಂದು ಆತ ಪ್ರಶ್ನಿಸಿದ್ದಾನೆ.

ಈ ಪತ್ರ ನೋಡಿದ ಶಾಸಕ ಸುಭಾಷ್ ಧೋತೆ ಯುವಕನಿಗೆ ನೇರವಾಗಿ ಭೇಟಿಯಾಗುವಂತೆ ವಿಡಿಯೋವೊಂದರಲ್ಲಿ ತಿಳಿಸಿದ್ದಾರೆ. ಅವನನ್ನು ನೇರವಾಗಿ ಭೇಟಿಯಾಗಿ ಆತನ ಸಮಸ್ಯೆ ಏನು ಎಂಬುದನ್ನು ತಿಳಿದುಕೊಂಡು ನಂತರ ಸೂಕ್ತ ಪರಿಹಾರ ಹುಡುಕುತ್ತೇನೆ ಎಂದು ಧೋತೆ ಹೇಳಿದ್ದಾರೆ.

ಈ ಪತ್ರ ವೈರಲ್‌ ಆಗುತ್ತಿದ್ದಂತೆಯೇ ಇದನ್ನು ಯುವಕ ಪ್ರಚಾರಕ್ಕಾಗಿ ಬರೆದಿದ್ದಾನೆ ಎನ್ನುವ ಮಾತೇ ಕೇಳಿಬರುತ್ತಿದೆ. ಇದರ ಹೊರತಾಗಿಯೂ ಶಾಸಕರು ಯುವಕನನ್ನು ಭೇಟಿಯಾಗುವ ಇಂಗಿತ ವ್ಯಕ್ತ‍ಪಡಿಸಿದ್ದಾರೆ.