ನ್ಯೂಸ್

‘ಯತ್ನಾಳ್‌ರ ಸಿಡಿ ಬಿಡುಗಡೆಗೆ ಕ್ಷಣಗಣನೆ’- ಜಾಲತಾಣದ ತುಂಬ ಹರಿದಾಡ್ತಿದೆ ಪೋಸ್ಟ್‌: ದೂರು ದಾಖಲು

suchetana

ವಿಜಯಪುರ: 'ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣ ಗಣನೆ, ಭರ್ಜರಿ ಯಶಸ್ಸು ಕಾಣಲಿ' ಎಂಬ ಬರಹ ಹಾಗೂ ಶಾಸಕ ಯತ್ನಾಳ ಅವರ ಭಾವಚಿತ್ರ ಇರುವ ಅಶ್ಲೀಲ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ನಮ್ಮ ಕಾಂಗ್ರೆಸ್ ಇನಸ್ಟಾಗ್ರಾಮ್‌ನಲ್ಲಿ ಈ ಫೋಸ್ಟ್ ಹಾಕಲಾಗಿದ್ದು, ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್‌ ಮಿಷನ್ 2023 ಎಂಬ ಫೇಸ್​ಬುಕ್​ ಅಕೌಂಟ್​ನಲ್ಲಿಯೂ ಫೋಟೊ ಹರಿದಾಡುತ್ತಿದೆ. ಬಿಜೆಪಿ ನಾಯಕನ ಸಿಡಿ‌ ಬಿಡುಗಡೆಗೆ ಕ್ಷಣಗಣನೆ ಎಂಬ‌ ಟ್ಯಾಗ್​ಲೈನ್ ಹಾಕಲಾಗಿದೆ.

ಈ ಸಂಬಂಧ ವಿಜಯಪುರದ ಸೈಬರ್ ( ಸಿಇಎನ್) ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಯತ್ನಾಳ ಅವರ ಆಪ್ತ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಜಾಧವ್ ಅವರು ದೂರು ದಾಖಲು ಮಾಡಿದ್ದಾರೆ.

ಶಾಸಕ ಯತ್ನಾಳ ಅವರ ಭಾವಚಿತ್ರ ಹಾಗೂ ಅಶ್ಲೀಲ ಬರಹ ಹರಿದಾಡುತ್ತಿದೆ. ಈ ಮೂಲಕ ಶಾಸಕರಿಗೆ ಅವಮಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ದಾಖಲು ಮಾಡಲಾಗಿದೆ.