ನ್ಯೂಸ್

ಟಿಕ್‌ಟಾಕ್‌ನಲ್ಲಿ ಅಸಭ್ಯ ಡಾನ್ಸ್: ಯುವತಿಯರಿಗೆ 2 ವರ್ಷ ಜೈಲು 15 ಲಕ್ಷ ದಂಡ!

ಕೈರೋ: ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಚೀನಾ ಮೂಲದ ಟಿಕ್‌ಟಾಕ್‌ ಆ್ಯಪ್‌ ನಿಷೇಧ ಮಾಡಿ ತಿಂಗಳೇ ಕಳೆದಿವೆ. ಆದರೆ ಈ ಮೊದಲು ಟಿಕ್‌ಟಾಕ್‌ ಮೂಲಕ ನೃತ್ಯ ಮಾಡಿ ಫೇಮಸ್‌ ಆದವರೂ ಇದ್ದಾರೆ, ಅದೇ ರೀತಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಟಿಕ್‌ಟಾಕ್‌ ವ್ಯಸನಕ್ಕೆ ದಾಸರಾಗಿ ಅರೆಹುಚ್ಚರಾದವರೂ ಇದ್ದಾರೆ.

ಟಿಕ್‌ಟಾಕ್‌ನಲ್ಲಿ ಅಶ್ಲೀಲ, ಅಸಭ್ಯ ಎನಿಸುವ ನೃತ್ಯ, ಸಂಭಾಷಣೆ ಮಾಡಿ ಛೀಮಾರಿ ಹಾಕಿಸಿಕೊಂಡವರು ಭಾರತದಲ್ಲಿ ಇದ್ದಾರೆಯೇ ವಿನಾ, ಜೈಲು ಶಿಕ್ಷೆಯಾಗುವಂಥ ಘಟನೆ ಮಾತ್ರ ನಡೆಯಲಿಲ್ಲ ಎನ್ನುವುದು ಈ ಆ್ಯಪ್‌ ಅಭಿಮಾನಿಗಳ ಪುಣ್ಯ.

ಆದರೆ ಅಪ್ಪಟ ಅಷ್ಟೇ ಕಟು ಸಂಪ್ರದಾಯವಾದಿ ದೇಶ ಎನಿಸಿಕೊಂಡಿರುವ ಈಜಿಪ್ಟ್‌ನಲ್ಲಿ ಟಿಕ್‌ ಟಾಕ್‌ ಆ್ಯಪ್‌ ಬ್ಯಾನ್‌ ಆಗಿಲ್ಲ. ಆದರೆ ಅಸಭ್ಯವಾಗಿ ನೃತ್ಯ ಮಾಡಿ, ಟಿಕ್‌ಟಾಕ್‌ ವಿಡಿಯೋ ಮಾಡಿರುವ ಇಬ್ಬರು ಯುವತಿಯರಿಗೆ ಮಾತ್ರ ಇದೀಗ ಭಾರಿ ಬೆಲೆ ತೆತ್ತಿದ್ದಾರೆ.

20 ವರ್ಷದ ವಿದ್ಯಾರ್ಥಿ ಹನೀನ್ ಹೊಸಮ್ ಮತ್ತು 22 ವರ್ಷದ ಮಾವಾಡಾ ಎಲಾಧ್ಮ್ ಎಂಬ ಯುವತಿಯರು ಮಾಡಿದ ಡಾನ್ಸ್‌ ವೈರಲ್‌ ಆಗಿತ್ತು. ಈ ಡಾನ್ಸ್‌ ನೋಡಿದವರು ಯುವತಿಯರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು. ಈಜಿಪ್ಟ್‌ ಕೋರ್ಟ್‌ ಎರಡು ವರ್ಷಗಳ ಕಾರಾಗೃಹ ಶಿಕ್ಷೆಯ ಜತೆಗೆ 300,000 ಈಜಿಪ್ಟ್ ಪೌಂಡ್ (ಸುಮಾರು 15 ಲಕ್ಷ ರೂಪಾಯಿ) ದಂಡ ವಿಧಿಸಿದೆ!

15 ಸೆಕೆಂಡುಗಳ ಕ್ಲಿಪ್‌ಗಳಲ್ಲಿ, ಮೇಕಪ್‌ ಮಾಡಿಕೊಂಡಿರುವ ಈ ಯುವತಿಯರು ಕಾರುಗಳಲ್ಲಿ ಪೋಸ್ ನೀಡಿದ್ದಾರೆ, ಅಡುಗೆಮನೆಗಳಲ್ಲಿ ನೃತ್ಯ ಮಾಡಿದ್ದಾರೆ.