ನ್ಯೂಸ್

VIDEO: ಆಗಸದಲ್ಲಿ ಖುಷಿಯಿಂದ ಹಾರುತ್ತಿದ್ದ ಮಹಿಳೆಯರು ಧೊಪ್‌ ಎಂದು ಬಿದ್ದರು- ಭಯಾನಕ ವಿಡಿಯೋ ವೈರಲ್‌

ಮುಂಬೈ: ಸಾಹಸಮಯ ಆಟಗಳು ಕೆಲವು ಸಂದರ್ಭಗಳಲ್ಲಿ ಪ್ರಾಣಕ್ಕೂ ಕುತ್ತಾಗುವುದಿದೆ. ಇಂಥ ಕೆಲವು ಘಟನೆಗಳು ಇದಾಗಲೇ ವರದಿಯಾಗಿದ್ದು, ದಕ್ಷಿಣ ಮುಂಬೈನ ಅಲಿಬಾಗ್​ ಬೀಚ್​​ ಬಳಿ ಈಗ ಇಂಥದ್ದೇ ಇನ್ನೊಂದು ಘಟನೆ ನಡೆದಿದೆ.

ಪ್ಯಾರಾಸೈಲಿಂಗ್‌ ಮಾಡುವ ಸಂದರ್ಭದಲ್ಲಿ ಮಹಿಳೆಯರು ಹಗ್ಗ ತುಂಡಾದ ಹಿನ್ನೆಲೆಯಲ್ಲಿ ಬಿದ್ದಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ದಿಯುವಿನಲ್ಲಿ ದಂಪತಿ ಇದೇ ರೀತಿ ಹಗ್ಗ ತುಂಡಾಗಿ ಬಿದ್ದಿದ್ದರು. ಈ ಘಟನೆ ಬೆನ್ನಲ್ಲೇ ಪ್ಯಾರಾಸೈಲಿಂಗ್‌ನ ಮತ್ತೊಂದು ಅವಘಡ ಸಂಭವಿಸಿದೆ.

ದಕ್ಷಿಣ ಮುಂಬೈನ ಅಲಿಬಾಗ್​ ಬೀಚ್​​ ಬಳಿ ಪ್ಯಾರಾಸೈಲಿಂಗ್​ ವೇಳೆ ಮುಂಬೈನ ಸಾಕಿ ನಾಕಾ ನಿವಾಸಿಗಳಾದ ಇಬ್ಬರು ಮಹಿಳೆಯರು 100 ಮೀಟರ್​​ ಎತ್ತರದಿಂದ ಸಮುದ್ರಕ್ಕೆ ಬಿದ್ದಿದ್ದು, ಇದರ ವಿಡಿಯೋ ವೈರಲ್‌ ಆಗಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಾಮಾನ್ಯವಾಗಿ ಪ್ಯಾರಾಸೈಲಿಂಗ್‌ನಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಲೈಫ್​ ಜಾಕೆಟ್​ಹಾಕಿಕೊಳ್ಳಲಾಗುತ್ತದೆ. ಪ್ಯಾರಾಚೂಟ್​ ಹಗ್ಗವನ್ನು ಕೆಳಗೆ ದೋಣಿಗೆ ಕಟ್ಟಿಡಲಾಗುತ್ತದೆ. ಒಂದು ತುದಿಯನ್ನು ಸುರಕ್ಷತಾ ಸಿಬ್ಬಂದಿ ಹಿಡಿದುಕೊಂಡಿರುತ್ತಾರೆ. ಇಲ್ಲಿಯೂ ಅದೇ ರೀತಿ ಆಗಿದೆ. ಆದರೆ ಮಹಿಳೆಯರು ಮೇಲಕ್ಕೆ ಹಾರುತ್ತಿದ್ದಂತೆಯೇ ದೋಣಿಗೆ ಕಟ್ಟಲಾಗಿದ್ದ ಹಗ್ಗ ಹರಿದು, ಅವರಿಬ್ಬರೂ 100 ಮೀಟರ್​ ಎತ್ತರದಿಂದ ಸಮುದ್ರಕ್ಕೆ ಬಿದ್ದಿದ್ದಾರೆ. ಬೋಟ್​​ನಲ್ಲಿದ್ದವರು ಕೂಡಲೇ ಹೋಗಿ ಅವರನ್ನು ರಕ್ಷಿಸಿದ್ದಾರೆ.

ಈ ಭಯಾನಕ ವಿಡಿಯೋ ಇಲ್ಲಿದೆ ನೋಡಿ: