ಕೋಲ್ಕತಾ: ಪಶ್ಚಿಮ ಬಂಗಾಳದ ಕನಿಷ್ಠ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು , ಬಿಜೆಪಿಗೆ ಬರಲಿದ್ದಾರೆ ಎಂಬ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಕೆಲ ದಿನಗಳ ಹಿಂದೆ ಹೇಳಿಕೆ ಕೋಲ್ಕತಾದ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವುದು ಹಳೆಯ ಮಾತಾಯ್ತು.
ಆದರೆ ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದ ಸೌಗತ್ ರಾಯ್ ಫುಲ್ ಗರಂ ಆಗಿಬಿಟ್ಟಿದ್ದಾರೆ. ಇದೊಂದು ಬಿಜೆಪಿ ಪ್ರಚಾರದ ಕಲೆ. ಇದು ಸುಳ್ಳು ಸುದ್ದಿ ಎಂದಿರುವ ರಾಯ್, ಒಂದು ವೇಳೆ ನಾನೇನಾದರೂ ರಾಜಕೀಯ ಬಿಡಲೇಬೇಕಾಗಿ ಬಂದರೆ ಅದನ್ನು ಬಿಡುತ್ತೇನೆ. ಆದರೆ ಒಂದು ವೇಳೆ ಈ ಪಕ್ಷ ಬಿಟ್ಟರೆ ಬೇಕಿದ್ದರೆ ಹೋಗಿ ಸಾಯುತ್ತೇನೆಯೇ ವಿನಾ ಬಿಜೆಪಿಯನ್ನು ಸೇರುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಸ್ಥಿತಿ ಗಂಭೀರ
ಅರ್ಜುನ್ ಸಿಂಗ್ ಈ ರೀತಿ ಸುಳ್ಳು ಸುದ್ದಿ ಹರಡಿಸುವುದಲ್ಲಿ ನಿಸ್ಸೀಮರು. ನಾನು ರಾಜಕೀಯ ತೊರೆದು ಸಾಯಲು ಸಿದ್ಧ ಆದರೆ, ಎಂದಿಗೂ ಬಿಜೆಪಿಗೆ ಸೇರುವುದಿಲ್ಲ, ಆ ಪಕ್ಷದ ಜತೆ ಕೈಕೂಡ ಜೋಡಿಸುವುದಿಲ್ಲ. ಅಷ್ಟಕ್ಕೂ ನಾನೇನೂ ಮಾರಾಟವಾಗುವ ಸರಕು ಅಲ್ಲ ಎಂದು ಕಿಡಿ ಕಾರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್ನ ಹಿರಿಯ ಮುಖಂಡ ಸುಗಾತ ರಾಯ್ ಹಾಗೂ ಇತರೆ ನಾಲ್ಕು ಜನ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಅಂತ ಸಂಸದ ಅರ್ಜುನ್ ಸಿಂಗ್ ಹೇಳಿದ್ದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ತೃಣ ಮೂಲ ಕಾಂಗ್ರೆಸ್ನ ಐವರು ಸಂಸದರು ಯಾವುದೇ ಸಂದರ್ಭದಲ್ಲೂ ಪಕ್ಷ ತೊರೆದು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದಿದ್ದು ಭಾರಿ ಸುದ್ದಿಯಾಗಿದೆ.