ನವದೆಹಲಿ: ಇಲ್ಲಿಯವರೆಗೆ ಯಾರು ಬೇಕಾದರೂ ನ್ಯೂಸ್ ವೆಬ್ಪೋರ್ಟಲ್ ತೆರೆದು ತಮಗೆ ಬಂದ ಸುದ್ದಿಗಳನ್ನು ಅಪ್ಲೋಡ್ ಮಾಡಲು ಅವಕಾಶವಿತ್ತು. ಆದ್ದರಿಂದ ಆನ್ಲೈನ್ ಸುದ್ದಿ ವೆಬ್ಸೈಟ್ಗಳ ಸಂಖ್ಯೆ ಮಿತಿಮೀರುತ್ತಲೇ ಸಾಗಿದೆ. ಆದರೆ ಇನ್ನುಮುಂದೆ ಹಾಗಾಗುವುದಿಲ್ಲ.
ಇನ್ನು ಯಾವುದೇ ರೀತಿಯ ನ್ಯೂಸ್ ವೆಬ್ಪೋರ್ಟಲ್ ತೆರೆಯಲು ನೋಂದಣಿ ಕಡ್ಡಾಯವಾಗಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯವು ಮಹತ್ವದ ಆದೇಶವನ್ನು ಹೊರಡಿಸಿದೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಅಧಿಕೃತ ಮಾನ್ಯತೆ ನೀಡಿರುವ ಸಚಿವಾಲಯವು ನೋಂದಣಿಯಾಗದ ನ್ಯೂಸ್ ವೆಬ್ಪೋರ್ಟಲ್ಗಳಿಗೆ ಕಡಿವಾಣ ಹಾಕಲಿದೆ.
ಇದನ್ನೂ ಓದಿ: ಪಟಾಕಿ ಬ್ಯಾನ್- ಸುಪ್ರೀಂಕೋರ್ಟ್ ಹೇಳಿದ್ದೇನು?
ಇದಕ್ಕೆ ಕಾರಣ, ಸುಳ್ಳು ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಹೇರಳವಾಗಿ ಪ್ರಸಾರ ಆಗುತ್ತಿರುವುದು. ತಮಗೆ ಆಗದವರ ವಿರುದ್ಧ ಸುಳ್ಳು ಸುದ್ದಿ ಹರಡಿಬಿಡುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಅನಾಹುತಗಳಾಗುತ್ತಿರುವುದು ಬೆಳಕಿಗೆ ಬಂದಿದೆ. ಮಾತ್ರವಲ್ಲದೇ ಚುನಾವಣೆಗಳ ಸಮಯದಲ್ಲಿ ತಮ್ಮ ಪರವಾಗಿ ಒಲವು ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳೇ ಸುದ್ದಿ ವೆಬ್ಸೈಟ್ಗಳನ್ನು ಸೃಷ್ಟಿಸುತ್ತಿದ್ದುದು ತಿಳಿದುಬಂದಿದೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆದ್ದರಿಂದ ಸುದ್ದಿ ವೆಬ್ಸೈಟ್ಗಳು ಇನ್ನು ಮಾಹಿತಿ ಮತ್ತು ಪ್ರಸಾರಾಂಗ ಮಂತ್ರಾಲಯದಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
ಈ ಆದೇಶ ಮುನ್ನೆಲೆಗೆ ಬರುತ್ತಿರುವ ಡಿಜಿಟಲ್ ಪತ್ರಿಕೋದ್ಯಮವನ್ನು ಅಧಿಕೃತಗೊಳಿಸಿದ ನಡೆಯಾಗಿದೆ. ಅಲ್ಲದೆ ಸುಳ್ಳು ಸುದ್ದಿ ತಡೆಗಟ್ಟಲು ನೆರವಾಗಲಿದೆ. ಒಂದು ವೇಳೆ ನೋಂದಾಯಿತ ಸುದ್ದಿತಾಣ ಸುಳ್ಳು ಸುದ್ದಿ ಪ್ರಕಟಿಸಿದರೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲೂ ಇದರಿಂದ ಅನುಕೂಲ ಆಗಲಿದೆ.