More

    ಇದು ಒದ್ದರೆ ಕತ್ತೆಯೂ ನಾಚಬೇಕು… ತೂಕ ಮಾಡಿದರೆ ಆನೆಯೇ ತಲೆತಗ್ಗಿಸಬೇಕು..!

    ‘ಭಾರವಾದ ಪ್ರಾಣಿಗಳು’_ ಎಂದ ತಕ್ಷಣ ಸಾಮಾನ್ಯವಾಗಿ ಆನೆ ನೆನಪಾಗುತ್ತದೆ! ಆದರೆ ಜಿರಾಫೆಯು ಕೂಡ ಭಾರಕ್ಕೆ ಏನೂ ಕಡಿಮೆಯಿಲ್ಲ! ಚೆನ್ನಾಗಿ ಬೆಳೆದ ವಯಸ್ಕರ ಜಿರಾಫೆ ಏನಿಲ್ಲವೆಂದರೂ 1,900 ಕೆಜಿ ತೂಗುತ್ತದೆ! ಆದರೆ ಅವುಗಳ ಉದ್ದನೆಯ ದೇಹವನ್ನು ನೋಡಿದಾಗ ನಮಗೆ ಹಾಗೆ ಅನ್ನಿಸುವುದೇ ಇಲ್ಲ ಅಲ್ಲವೇ?!

    ಪ್ರಾಣಿ ಪ್ರಪಂಚದಲ್ಲಿ ಜಿರಾಫೆಗಳು ಅನೇಕ ದಾಖಲೆಗಳನ್ನು ನಿರ್ಮಿಸಿವೆ! ಈ ದಾಖಲೆಗಳು ಜಿರಾಫೆಗಳಿಗೆ ಬೇಕಿಲ್ಲವಾದರೂ, ಮನುಷ್ಯರಾದ ನಮಗೆ ಬೇಕಲ್ಲವೇ?! ‘ಜಿರಾಫೆ’ ಎಂದ ತಕ್ಷಣ ನಮಗೆ ಮೊದಲು ನೆನಪಾಗುವುದು ಅದರ ‘ಕಿಲೋಮೀಟರ್’ ಚಾಚುವ ಉದ್ದನೆಯ ಕುತ್ತಿಗೆ! ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲೇ ಅತ್ಯಂತ ಉದ್ದವಾದ ಕುತ್ತಿಗೆಯನ್ನು ಹೊಂದಿರುವ ಏಕೈಕ ಪ್ರಾಣಿ ಎಂದರೆ ಈ ಜಿರಾಫೆಗಳು!! ಆದರೆ ಅತ್ಯಂತ ಮುಖ್ಯವಾದ ಸಂಗತಿಯೆಂದರೆ; ಜಿರಾಫೆಯ ಕುತ್ತಿಗೆಯೊಳಗೆ ಎಷ್ಟು ಕುತ್ತಿಗೆ ಮೂಳೆಗಳು ಇವೆಯೋ, ಮನುಷ್ಯನ ಕುತ್ತಿಗೆಯ ಒಳಗೂ ಕೂಡ ಅಷ್ಟೇ- ಎಂದರೆ ಕೇವಲ ಏಳೇ ಏಳು ಕುತ್ತಿಗೆ ಮೂಳೆಗಳಿವೆ!! ಆದರೆ ದೊಡ್ಡ ವ್ಯತ್ಯಾಸವೇನೆಂದರೆ, ಮನುಷ್ಯನ ಕುತ್ತಿಗೆಯ ಪ್ರತಿ ಮೂಳೆಯು ಕೇವಲ ಅರ್ಧ ಇಂಚು ಉದ್ದವಿದ್ದರೆ, ಜಿರಾಫೆಯ ಕುತ್ತಿಗೆಯಲ್ಲಿರುವ ಈ ಪ್ರತಿ ಮೂಳೆಯ ಉದ್ದ ಬರೋಬ್ಬರಿ ಹತ್ತು ಇಂಚುಗಳು!! ಜೊತೆಗೆ ನಮ್ಮ ಕುತ್ತಿಗೆ ಹೆಚ್ಚೆಂದರೆ ನಾಲ್ಕಿಂಚು, ಐದಿಂಚು ಆರಿಂಚಿದ್ದರೆ, ಜಿರಾಫೆಯ ಹೆಬ್ಬಾವಿನ ಹಾಗೆ ಕಾಣುವ ಕುತ್ತಿಗೆಯು -ನಮ್ಮ ಎದೆ ಧಸಕ್ಕೆನ್ನುವಂತೆ- ಆರಡಿ; ಅಂದರೆ ಒಬ್ಬ ಉದ್ದನೆಯ ಮನುಷ್ಯನಷ್ಟು ಉದ್ದವಿದೆ! ಅಚ್ಚರಿಗೆ ಬೀಳುತ್ತೀರಿ!, ಬರಿಯ ಕುತ್ತಿಗೆಯ ಭಾರವೇ ಸುಮಾರು ಇನ್ನೂರಾ ಎಪ್ಪತ್ತು ಕೆಜಿಗಳು!! ಜಿರಾಫೆ ಚಿತ್ರವನ್ನು ಅಥವಾ ಅವುಗಳ ವಿಡಿಯೋಗಳನ್ನು ನೋಡುವಾಗ ಉದ್ದನೆಯ ಕುತ್ತಿಗೆಯನ್ನು ಹೊತ್ತುಕೊಂಡು ಬಹಳ ಕಷ್ಟಪಟ್ಟು ಓಡಾಡುತ್ತವೆಯೇನೋ ಎಂದು ನಮಗೆ ಅನಿಸುತ್ತದೆ. ಆದರೆ ಅವುಗಳಿಗೆ ಹಾಗಿಲ್ಲ. ಬದಲಿಗೆ ಜಿರಾಫೆಗಳಿಗೆ ಅವುಗಳ ಕುತ್ತಿಗೆ ರಕ್ಷಣಾದಾಯಕವಾಗಿರುತ್ತದೆ! ಈ ಉದ್ದನೆಯ ಕುತ್ತಿಗೆಯಿಂದಾಗಿ, ಈ ಎತ್ತರದ ಪ್ರಾಣಿ ಇನ್ನಷ್ಟು ಎತ್ತರವಾಗಿ, ಬಹಳ ದೂರದಿಂದಲೇ ತನ್ನನ್ನು ಬೇಟೆಯಾಡಲು ಬರುವ ಶತ್ರುವನ್ನು ಬಹುಬೇಗ ಗುರುತಿಸಲು ಸಹಾಯ ಮಾಡುತ್ತದೆ!! ಜೊತೆಗೆ ನೆಲದ ಮೇಲೆ ವಾಸಿಸುವ ಅತ್ಯಂತ ಎತ್ತರದ ಪ್ರಾಣಿ ಎಂಬ ಕೀರ್ತಿಗೂ ಇದು ಪಾತ್ರವಾಗುವಂತೆ ಮಾಡಿದೆ!

    ಇದು ಒದ್ದರೆ ಕತ್ತೆಯೂ ನಾಚಬೇಕು... ತೂಕ ಮಾಡಿದರೆ ಆನೆಯೇ ತಲೆತಗ್ಗಿಸಬೇಕು..!

    ಜಿರಾಫೆಗಳ ದೇಹದ ಎತ್ತರವೇ ಮತ್ತೊಂದು ಅಚ್ಚರಿಯ ಸಂಗತಿಯಾಗಿದೆ! ಒಂದು ಸಾಮಾನ್ಯ ಜಿರಾಫೆಯ ಎತ್ತರ ಕನಿಷ್ಠ ನಾಲ್ಕರಿಂದ ಐದುಮೀಟರ್; ಎಂದರೆ ಸುಮಾರು ಮೂರು ಮನುಷ್ಯರಷ್ಟು ಎತ್ತರ!! ಪ್ರಪಂಚದಲ್ಲಿ ಇದುವರೆಗೆ ದಾಖಲಾದ ಅತ್ಯಂತ ಎತ್ತರದ ಜಿರಾಫೆಯ ಎತ್ತರ 5.9 ಮೀಟರ್‌ಗಳು, ಉದಾಹರಣೆ ನೀಡುವುದಾದರೆ ಹತ್ತಿರತ್ತಿರ ಡಬಲ್ ಡೆಕ್ಕರ್ ಬಸ್ಸಿನ ಟಾಪ್ ಮೇಲೆ ಆರಾಮವಾಗಿ ತನ್ನ ಮುಖ ಇಡುವಷ್ಟು ಎತ್ತರ!! ಇಷ್ಟು ಎತ್ತರ ತಲುಪಲು ಜಿರಾಫೆಯ ಕಾಲುಗಳು ಕೂಡ ಬಹಳ ಮುಖ್ಯ. ಅದರ ಕುತ್ತಿಗೆಯ ಹಾಗೆ ಜಿರಾಫೆಯ ಒಂದೊಂದು ಕಾಲುಗಳು ಕೂಡ ಒಬ್ಬೊಬ್ಬ ಮನುಷ್ಯನಷ್ಟು ಎತ್ತರವಿದೆ!

    ‘ಜಿರಾಫೆ’ ಎಂದ ತಕ್ಷಣ ಪ್ರಾಣಿ ಪ್ರಪಂಚದಲ್ಲಿ ಅತ್ಯಂತ ವಿಶೇಷವಾದ ನಡಿಗೆಯನ್ನು ಹೊಂದಿರುವ ಅವುಗಳ ‘ನಡಿಗೆಯ ಶೈಲಿ’ ನೆನಪಾಗುತ್ತದೆ! ಯಾವುದಾದರೂ ನಾಲ್ಕು ಕಾಲಿನ ಪ್ರಾಣಿ ನಡೆಯುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಉದಾಹರಣೆಗೆ ಹಸು ನಡೆಯುವಾಗ ತನ್ನ ಮುಂದಿನ ಬಲಗಾಲನ್ನು ಎತ್ತಿ ಮುಂದೆ ಹೆಜ್ಜೆ ಇಡುವಾಗ, ಅದರ ಎಡಭಾಗದ ಹಿಂದಿನ ಕಾಲು ಕೂಡ ಎತ್ತಿರುತ್ತದೆ. ಅದೇ ರೀತಿ ಅದರ ಮುಂದಿನ ಎಡಗಾಲು ಎತ್ತಿ ನಂತರದ ಹೆಜ್ಜೆ ಇಡುವಾಗ ಬಲಭಾಗದ ಹಿಂದಿನ ಕಾಲು ಇರುತ್ತದೆ. ಇದು ಬಹುತೇಕ ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಯಿಂದು ಹಿಡಿದು ಹುಲಿ ಚಿರತೆ ಸಿಂಹಗಳಂತಹಾ ಎಲ್ಲಾ ಕಾಡು ಪ್ರಾಣಿಗಳಲ್ಲೂ ಸಾಮಾನ್ಯ.‌ಆದರೆ ಜಿರಾಫೆಗಳು ಇದಕ್ಕೆ ತದ್ವಿರುದ್ಧ!! ಅವುಗಳ ಮುಂದಿನ ಬಲಗಾಲು ಎತ್ತಿ ಹೆಜ್ಜೆ ಇಡುವಾಗ, ಜೊತೆಜೊತೆಗೆ ಹಿಂದಿನ ಬಲಗಾಲು ಕೂಡ ಎತ್ತಿ ಹೆಜ್ಜೆ ಇಡುತ್ತಿರುತ್ತವೆ! ಅದೇ ರೀತಿ ಎಡಗಾಲುಗಳೂ ಕೂಡಾ!! ಎಂದರೆ ಜಿರಾಫೆಯೊಂದು ನಡೆಯುವಾಗ ಏಕಕಾಲದಲ್ಲಿ ತನ್ನ ಒಂದು ಬದಿಯ ಎರಡೂ ಕಾಲುಗಳನ್ನು ಎತ್ತಿ ಮುಂದಿನ ಹೆಜ್ಜೆ ಇಡುತ್ತದೆ!! ಇದು ಬಹಳ ವಿಶೇಷ! ಈ ರೀತಿ ನಡೆಯುವ ಮತ್ತೊಂದು ಪ್ರಾಣಿಯೆಂದರೆ ಸದ್ಯಕ್ಕೆ ನೆನಪಾಗುವುದು ಮರುಭೂಮಿಯ ಒಂಟೆ!

    ಇದು ಒದ್ದರೆ ಕತ್ತೆಯೂ ನಾಚಬೇಕು... ತೂಕ ಮಾಡಿದರೆ ಆನೆಯೇ ತಲೆತಗ್ಗಿಸಬೇಕು..!

    ಇನ್ನೊಂದು ವಿಶೇಷ ಸಂಗತಿ; ದೂರದಿಂದ ನೋಡುವಾಗ ಎತ್ತರದ ಜಿರಾಫೆಯ ದೇಹವನ್ನು ಹೊತ್ತ ಕಡ್ಡಿಯಂತಹ ಅದರ ಕಾಲುಗಳು ತೀರಾ ಬಲಹೀನವಾಗಿ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ಹಾಗಿಲ್ಲವೇ ಇಲ್ಲ!! ಅವುಗಳ ಕಾಲುಗಳು ಎಷ್ಟು ಶಕ್ತಿಯುತವಾಗಿವೆಂದರೆ, ಅದು ಶತ್ರುಗಳು ಅಟ್ಟಿಸಿಕೊಂಡು ಬರುವಾಗ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಗಂಟೆಗೆ ಐವತ್ತಾರು ಕಿಲೋಮೀಟರ್ ವೇಗದಲ್ಲಿ ಓಡಬಲ್ಲದು!! ಈ ವೇಗ ಎಷ್ಟೆಂದು ಅರ್ಥವಾಗಬೇಕಾದರೆ, ಪ್ರಪಂಚದಲ್ಲಿ ಇದುವರೆಗೆ ಅತ್ಯಂತ ವೇಗವಾಗಿ ಓಡಿರುವ ಓಟಗಾರ ಉಸೇನ್ ಬೋಲ್ಟ್ ಗರಿಷ್ಠ ವೇಗವೇ ಗಂಟೆಗೆ 44.72 ಕಿಲೋಮೀಟರ್‌ಗಳು!! ಜಿರಾಫೆಗಳ ವೇಗ ಮನುಷ್ಯನಿಗಿಂತ ಎಷ್ಟು ಹೆಚ್ಚು ಎಂಬುದನ್ನು ನೀವೇ ಯೋಚಿಸಿ!! ಆದರೊಂದು ಮಾತು ಜಿರಾಫೆಗಳು ಈ ಐವತ್ತಾರು ಕಿಲೋಮೀಟರ್ ವೇಗದಲ್ಲಿ ಒಂದೇ ಸಮನೆ ಹೆಚ್ಚು ದೂರ ಓಡಲಾರವು! ಆದಾಗ್ಯೂ ಬಹಳ ದೂರಕ್ಕೆ ಓಡುವಾಗ ಅವುಗಳು ಗಂಟೆಗೆ ಹತ್ತು ಮೈಲಿ ಎಂದರೆ ಹದಿನಾರು ಕಿಲೋಮೀಟರ್ ವೇಗಕ್ಕೆ ಕಡಿಮೆ ಇಲ್ಲದಂತೆ ಓಡುತ್ತವೆ!

    ಇನ್ನೊಂದು ಕುತೂಹಲದ ಸಂಗತಿ ಎಂದರೆ, ಬಹಳ ಕೃಷಕಾಯವಾಗಿ, ‘ಮುಟ್ಟಿದರೆ ತುಂಡಾಗುತ್ತದೆಯೇನೋ’ ಎಂಬಂತೆ ಕಾಣುವ ಜಿರಾಫೆಯ ಕಾಲುಗಳಲ್ಲಿ ಎಷ್ಟು ಶಕ್ತಿಯಿದೆಯೆಂದರೆ, ತನ್ನ ಪ್ರಾಣ ಅಪಾಯದಲ್ಲಿ ಇದೆ ಎಂದು ತಿಳಿದಾಗ, ಮಾರುಗಟ್ಟಲೆ ದೂರಕ್ಕೆ ತನ್ನ ಹಿಂದಿನ ಕಾಲುಗಳಿಂದ ಝಾಡಿಸಿ ಒದೆಯುತ್ತದೆ! ಈ ಒದೆತದ ಶಕ್ತಿ ಅಂತಿಂಥದ್ದಲ್ಲ!! ಸರಿಯಾಗಿ ಸಿಕ್ಕಿದರೆ ಒಂದೇ ತುಳಿತಕ್ಕೆ ಮೊರದಗಲ ಮುಖದ ಬಲಿಷ್ಠ ಸಿಂಹದ ಪಕ್ಕೆಲುಬುಗಳು ಕೂಡ ಪುಡಿಪುಡಿಯಾಗಿ ಸಿಂಹದ ಹೆಣ ಹೊರಬೇಕಾದ ಪರಿಸ್ಥಿತಿ ಬಂದೀತು..!! ಯಾಕೆಂದರೆ ನೀವು ನಂಬಲಾರಿರಿ!, ಹತ್ತಿರ ಹತ್ತಿರ ಎರಡು ಟನ್ ತೂಗುವ ಜಿರಾಫೆಯ ಭಾರವನ್ನು ಹೊರುವ ಅದರ ಕಾಲಿನ ಗೊರಸುಗಳ ಅಗಲವೆಷ್ಟು ಗೊತ್ತೇ?! ಬರಿಯ ವ್ಯಾಸವೇ ಪೂರ್ತಿ ಮೂವತ್ತು ಸೆಂಟಿಮೀಟರ್‌ಗಳು, ಎಂದರೆ ನಾವು ಊಟ ಮಾಡುವ ಬಟ್ಟಲಿನಷ್ಟು ಆಗಲ!! ಇಷ್ಟು ಅಗಲದ ಗೊರಸಿನಲ್ಲಿ ತನ್ನ ಶಕ್ತಿಯನ್ನೆಲ್ಲ ಹಾಕಿ ಝಾಡಿಸಿ ಒದ್ದರೆ, ಸಿಂಹವೇನು ಲೋಹದ ಚರ್ಮದ ಖಡ್ಗಮೃಗವೇ ಹೊಗೆ ಹಾಕಿಸಿಕೊಂಡರೂ ಅಚ್ಚರಿ ಇಲ್ಲ!!

    ಮೊನ್ನೆಯ ‘ನೀಲಿ ತಿಮಿಂಗಿಲ‌ದ ಲೇಖನದಲ್ಲಿ ಅವುಗಳ ಬೃಹತ್ ಗಾತ್ರದ ಹೃದಯದ ಬಗ್ಗೆ ಬರೆದಿದ್ದೆ. ಹೃದಯದ ವಿಚಾರಕ್ಕೆ ಬಂದಾಗ ಜಿರಾಫೆಯು ಕೂಡಾ ಏನೂ ಕಡಿಮೆಯಿಲ್ಲ! ಜಿರಾಫೆಯ ಹೃದಯದ ಭಾರ ಸರಾಸರಿ ಹನ್ನೊಂದು ಕೆಜಿ!! ಅದರ ಉದ್ದವೇ ಎರಡು ಫೀಟ್!! ಸುಮಾರು ಮನುಷ್ಯರ ಐವತ್ತು ಹೃದಯಗಳ ಒಟ್ಟು ಗಾತ್ರ!! ಜಿರಾಫೆಯ ಈ ಬೃಹತ್ ಗಾತ್ರದ ಹೃದಯವು ಪ್ರತಿ ನಿಮಿಷಕ್ಕೆ ಅರುವತ್ತು ಲೀಟರ್ ರಕ್ತವನ್ನು- ಮನುಷ್ಯನ ದೇಹದ ರಕ್ತದೊತ್ತಡದ ಎರಡು ಪಟ್ಟಿನಷ್ಟು ಒತ್ತಡದಲ್ಲಿ- ದೇಹದುದ್ದಕ್ಕೂ ಸರಬರಾಜು ಮಾಡುತ್ತಿರುತ್ತದೆ!! ದೈತ್ಯ ಗಾತ್ರ ಹಾಗೂ ಎತ್ತರದ ಕಾರಣದಿಂದಾಗಿ, ರಕ್ತವು ಹಿಮ್ಮುಖವಾಗಿ ಹೃದಯದ ಕಡೆಗೆ ಚಲಿಸದಂತೆ ಜಿರಾಫೆಯ ಹೃದಯದಲ್ಲಿ ವಿಶೇಷವಾದ ಹಾಗೂ ಗಡುಸಾದ ಕಪಾಟುಗಳಿವೆ! ಈ ಕಪಾಟುಗಳು ಇಲ್ಲದೇ ಇರುತ್ತಿದ್ದರೆ, ಆರಡಿ ಉದ್ದದ ತುದಿಯಲ್ಲಿರುವ ತನ್ನ ತಲೆಯನ್ನು ಆಕಾಶದೆತ್ತರಕ್ಕೆ ಎತ್ತಿದಾಗ, ತಲೆಯ ಕಡೆಯಿಂದ ರಕ್ತ ಬಳಬಳನೆ ಹೃದಯದ ಕಡೆಗೆ ವಾಪಸ್ಸು ಇಇದು ಬಂದು, ಕ್ಷಣಮಾತ್ರದಲ್ಲಿ ಜಿರಾಫೆ ಸತ್ತೇ ಹೋಗುತ್ತಿತ್ತು!! ಹೃದಯದ ಜೊತೆಗೆ ಜಿರಾಫೆಯ ರಕ್ತನಾಳಗಳು ಬಹಳ ವಿಶೇಷವಾದ ಹಿಗ್ಗುವ ಶಕ್ತಿಯನ್ನು ಹೊಂದಿದ್ದು, ಅನಿವಾರ್ಯ ಹಾಗೂ ಆಪತ್ತಿನ ಸಮಯದಲ್ಲಿ ಹೆಚ್ಚು ರಕ್ತ ಹರಿಯಬೇಕಾದಾಗ, ಈ ರಕ್ತನಾಳಗಳು ಜಿರಾಫೆಗೆ ಅಕ್ಷರಶಃ ವರದಾನವಾಗುತ್ತದೆ! ಈ ರಕ್ತನಾಳಗಳು ವಿಜ್ಞಾನಿಗಳನ್ನೂ ಎಷ್ಟು ಪ್ರಭಾವಿಸಿದೆಯೆಂದರೆ, ನಾಸಾದ ವಿಜ್ಞಾನಿಗಳು ಅಂತರಿಕ್ಷದಲ್ಲಿ ಧರಿಸುವ ‘ಸ್ಪೇಸ್-ಸೂಟ್’ ಅಭಿವೃದ್ಧಿಪಡಿಸಲು ಜಿರಾಫೆಯ ಕಾಲಿನ ರಕ್ತನಾಳಗಳನ್ನು ಅತ್ಯಂತ ಗಹನವಾಗಿ ಅಧ್ಯಯನ ಮಾಡುತ್ತಿದ್ದಾರೆ!!

    ಜಿರಾಫೆಗಳು ವಾಸಿಸುವುದು ಆಫ್ರಿಕಾದ ಸವನ್ನಾ ಹುಲ್ಲುಗಾವಲಿನ ಸುತ್ತಮುತ್ತ. ಹೀಗಾಗಿ ಆಫ್ರಿಕಾದ ಉರಿ ಬಿಸಿಲಿಗೆ ಅಲ್ಲಿ ಏನೂ ಬರಗಾಲವಿಲ್ಲ! ಅಂದರೆ; ಅಲ್ಲಿಗೆ ಜಿರಾಫೆಯಂತಹಾ ದೊಡ್ಡ ಗಾತ್ರದ ಪ್ರಾಣಿಗಳು ಬಿಸಿಲಿನ ತಾಪಕ್ಕೆ ಬಾಯಾರಿ, ಸದಾ ನೀರು ಕುಡಿಯುತ್ತಲೇ ಇರಬೇಕು ಎಂದಾಯಿತು! ಆದರೆ ವಾಸ್ತವದಲ್ಲಿ ಹಾಗೆ ಇಲ್ಲವೇ ಇಲ್ಲ!! ಇರುವುದು ಅದರ ತದ್ವಿರುದ್ಧ! ಜಿರಾಫೆಯನ್ನು ನೋಡಿದಾಗ ಅದಕ್ಕೆ ತನ್ನ ಉದ್ದನೆಯ ಕುತ್ತಿಗೆಯನ್ನು ಭಾಗಿಸಿ, ಕಾಲ ಬುಡದಲ್ಲಿರುವ ನೀರನ್ನು ಕುಡಿಯುವುದು ಬಹಳ ಸುಲಭ ಎಂದು ನಮಗೆ ಅನಿಸಬಹುದು! ಆದರೆ ನೀರು ಕುಡಿಯುವಾಗ ಜಿರಾಫೆ ಪಡುವ ಪಾಡು ಮಾತ್ರ ಅದರ ಶತ್ರುವಿಗೂ ಬೇಡ!! ಜಿರಾಫೆ ಕುತ್ತಿಗೆಯೇನೋ ಉದ್ದವಿದೆ ನಿಜ. ಆದರೆ ಅದಕ್ಕೆ ಸರಿಯಾಗಿ ಅವುಗಳ ಕಾಲುಗಳೂ ಎತ್ತರವಾಗಿವೆ! ಹೀಗಾಗಿ ನೀರನ್ನು ಕುಡಿಯುವಾಗ ಎತ್ತರವಾಗಿರುವ ಅದರ ಮುಂದಿನ ಕಾಲುಗಳನ್ನು ಮೀಟರುಗಟ್ಟಲೆ ಅಗಲವಾಗಿ ಪಕ್ಕಕ್ಕೆ ಸರಿಸಿ, ಇಡೀ ದೇಹವನ್ನು ಕುಬ್ಜವಾಗಿಸಿ ಬಾಗಿ ನೀರಿನತ್ತ ತಲೆ ಕೊಡಬೇಕು! ನೀರು ಕುಡಿಯುವ ಈ ಅವಸ್ಥೆ ಜಿರಾಫೆಗೆ ಎಷ್ಟು ಶ್ರಮದಾಯಕವೆಂದರೆ, ಸಾಮಾನ್ಯವಾಗಿ ಬಡಪೆಟ್ಟಿಗೆ ಶತ್ರುವಿಗೆ ತುತ್ತಾಗದ ಜಿರಾಫೆ, ನೀರು ಕುಡಿಯುವಾಗ ಮಾತ್ರ ಸುಲಭವಾಗಿ, ಅಸಹಾಯಕವಾಗಿ ಸಿಕ್ಕಿಬೀಳುತ್ತದೆ! ಹೀಗಾಗಿ ಪ್ರಕೃತಿಯ ಅದ್ಭುತವಾದ ಹೊಂದಾಣಿಕೆ ಹೇಗಿದೆ ನೋಡಿ! ಬಿಸಿಲಿನ ನೆಲದಲ್ಲಿದ್ದರೂ, ದೈತ್ಯಾಕಾರದ ದೇಹವನ್ನು ಹೊಂದಿದ್ದರು ಕೂಡಾ ಜಿರಾಫೆ ಎರಡು ದಿನಗಳಿಗೊಮ್ಮೆ ನೀರು ಕುಡಿದು ಆರಾಮವಾಗಿ ಬದುಕಬಲ್ಲದು!! ಜೊತೆಗೆ ಅದರ ದೇಹಕ್ಕೆ ಬೇಕಾದ ಬಹುತೇಕ ನೀರು- ಅದು ಸೇವಿಸುವ ಎಲೆ ಮತ್ತು ಸೊಪ್ಪುಗಳಿಂದಲೇ ಸಿಗುತ್ತದೆ ಎಂಬುದು ಮತ್ತೊಂದು ವಿಸ್ಮಯ! ಹೀಗಾಗಿ ಅತ್ಯಂತ ಅನಿವಾರ್ಯವೆನಿಸಿದರೆ -ಅದೂ ಬಹಳ ವಿರಳವಾಗಿ- ಮಾತ್ರ ಜಿರಾಫೆಗಳು ತನ್ನನ್ನು ಅಸಹಾಯಕನಾಗಿ ಮಾಡಿ, ಬಲಿ ಹಾಕಬಲ್ಲ ನೀರಿನ ಹೊಂಡದ ಕಡೆ ಕಾಲು ಹಾಕುತ್ತವೆ!!

    ಜಿರಾಫೆಗಳ ಆಹಾರ ಕ್ರಮ ಬಹಳ ವಿಶೇಷವಾಗಿದೆ. ಇವು ಬಹುತೇಕ ಅತ್ಯಂತ ಎತ್ತರದ, ಮುಳ್ಳುಗಳಿಂದ ಕೂಡಿದ ಅಕೇಶಿಯಾ ಮರಗಳ ಎಲೆಗಳನ್ನು ತಿಂದು ಬದುಕುತ್ತವೆ! ಭೂಮಿಯ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತ್ಯಂತ ಎತ್ತರವಾಗಿರುವುದರಿಂದ ಜಿರಾಫೆಗಳು ಬೇರೆ ಯಾವ ಪ್ರಾಣಿಯೂ ತಲುಪಲಾರದಷ್ಟು ಎತ್ತರದ ಮರದಿಂದ ಸುಲಭವಾಗಿ ಆಹಾರವನ್ನು ದಕ್ಕಿಸಿಕೊಳ್ಳುತ್ತವೆ. ಹೀಗಾಗಿ ಭೂಮಿಯ ಮೇಲೆ ನಿಂತು ಅತ್ಯಂತ ಎತ್ತರದ ಮರಗಳಿಂದ ಆಹಾರವನ್ನು ದಕ್ಕಿಸಿಕೊಳ್ಳಬಲ್ಲ ಏಕೈಕ ಪ್ರಾಣಿ ಜಿರಾಫೆ ಎಂಬ ಹೆಗ್ಗಳಿಕೆಯೂ ಈ ಪ್ರಾಣಿಗಿದೆ! ಎತ್ತರದ ಮರಗಳ ಎಲೆ ಮತ್ತು ಸೊಪ್ಪುಗಳಿಗೆ ಹೆಚ್ಚಾಗಿ ಪ್ರತಿಸ್ಪರ್ಧಿಗಳು ಕಡಿಮೆಯಿರುವ ಕಾರಣ, ಸಾಮಾನ್ಯವಾಗಿ ಬರಗಾಲ ಬಂದ ತಕ್ಷಣ ನೆಲದ ಮೇಲೆ ಆಹಾರದ ಕೊರತೆ ಕಂಡುಬಂದರೂ, ಜಿರಾಫೆಗಳಿಗೆ ಈ ಅಭಾವ ತಟ್ಟುವುದೇ ಇಲ್ಲ!!

    “ಜಿರಾಫೆ ಮಾಂಸಾಹಾರಿಯೋ?! ಸಸ್ಯಾಹಾರಿಯೋ?!” ಎಂದು ನಾನು ಪ್ರಶ್ನೆಯೊಂದನ್ನು ಕೇಳಿದರೆ, ನೀವು ಖಂಡಿತಕ್ಕೂ ನಕ್ಕು ಬಿಡುತ್ತೀರಿ! ಎಳೆಯ ಮಗುವಿಗೆ ಕೂಡಾ ಗೊತ್ತು, ಜಿರಾಫೆ ಸಸ್ಯಹಾರಿ ಎಂದು! ಆದರೆ ಇಲ್ಲಿಯೇ ಒಂದು ಗುಟ್ಟು ಅಡಗಿರುವುದು!! ಜಿರಾಫೆಯ ದೇಹಕ್ಕೆ ಅಪಾರವಾದ ಕ್ಯಾಲ್ಸಿಯಂನ ಅಗತ್ಯವಿದೆ. ದಿನಕ್ಕೆ ಸುಮಾರು ನಲವತ್ತು ಕೆಜಿಯಷ್ಟು ಎಲೆ-ಸೊಪ್ಪನ್ನು ತಿಂದರೂ ಕೂಡಾ, ಸೊಪ್ಪಿನಲ್ಲಿ ಸಿಗುವ ಕ್ಯಾಲ್ಸಿಯಂ ಅದಕ್ಕೆ ಸಾಕಾಗಲಾರದು. ಹೀಗಾಗಿ ತನ್ನ ದೇಹದ ಅಪಾರವಾದ ಕ್ಯಾಲ್ಸಿಯಂ ಅವಶ್ಯಕತೆಗೆ ಬೇಕಾಗಿ ಜಿರಾಫೆ ಮಾಂಸಾಹಾರಿ ಅಲ್ಲದಿದ್ದರೂ, ಸತ್ತ ಪ್ರಾಣಿಗಳ ದೇಹದ ಮೂಳೆಗಳನ್ನು ಆಗಾಗ ಜಗಿಯುತ್ತಿರುತ್ತವೆ!! ಈ ರೀತಿಯ ಪ್ರಾಣಿಗಳ ವರ್ತನೆಗೆ ‘ಆಸ್ಟಿಯೋಪ್ಯಾಜಿ’ ಎನ್ನುತ್ತಾರೆ! ಈಗ “ಜಿರಾಫೆಯು ಸಸ್ಯಹಾರಿಯೋ?! ಮಾಂಸಹಾರಿಯೋ?!” ಎಂಬ ನನ್ನ ಪ್ರಶ್ನೆಗೆ ನೀವು ಥಟ್ಟನೆ ನಗಲಾರಿರಿ ಅಂದುಕೊಂಡಿದ್ದೇನೆ!!

    ಇದು ಒದ್ದರೆ ಕತ್ತೆಯೂ ನಾಚಬೇಕು... ತೂಕ ಮಾಡಿದರೆ ಆನೆಯೇ ತಲೆತಗ್ಗಿಸಬೇಕು..!

    ಜಿರಾಫೆಯ ತಲೆಯಲ್ಲಿ ಎರಡು ಸಣ್ಣ ಕೊಂಬುಗಳು ಬೆಳೆಯುತ್ತವೆ. ಈ ಕೊಂಬುಗಳ ವಿಶೇಷವೇನೆಂದರೆ, ಜಿಂಕೆ, ಹಸು, ಎತ್ತು, ಕೋಣಗಳಂತೆ ಜಿರಾಫೆಯ ಕೊಂಬುಗಳು ತಲೆಬುರುಡೆಗೆ ಹೊಂದಿಕೊಂಡಿರುವುದಿಲ್ಲ! ಗಂಡು ಮತ್ತು ಹೆಣ್ಣು ಎರಡೂ ಜಿರಾಫೆಗಳಿಗೂ ಕೊಂಬುಗಳು ಮೂಡುತ್ತದೆ. ಆದರೆ ಗಂಡುಗಳು ಮಾತ್ರ ತಮ್ಮ ಹೊಡೆದಾಟದ ಸಮಯದಲ್ಲಿ ಇದನ್ನು ಬಳಸುತ್ತದೆ! ಜಿರಾಫೆಯ ಹೊಡೆದಾಟಗಳು ಬಹಳ ತಮಾಷೆಯಾಗಿರುತ್ತದೆ!! ಅತ್ಯಂತ ಎತ್ತರದ ಪ್ರಾಣಿಗಳು ತಮ್ಮ ಉದ್ದನೆಯ ಕುತ್ತಿಗೆಯ ಮೂಲಕ ಒಂದನ್ನೊಂದು ಬಡಿದುಕೊಳ್ಳುತ್ತವೆ! ಜೊತೆಗೆ ಪರಸ್ಪರ ದೂಡಿಕೊಳ್ಳುತ್ತವೆ! ಇದೇ ಅವುಗಳ ಹೋರಾಟ!! ದೂರದಿಂದ ನಮಗೆ ತಮಾಷೆಯಾಗಿ ಕಾಣಿಸಿದರು ಕೂಡಾ, ವಾಸ್ತವದಲ್ಲಿ ಈ ಹೋರಾಟ ಕೆಲವೊಮ್ಮೆ ಸಾವಿನಲ್ಲಿ ಕೂಡ ಅಂತ್ಯವಾಗುವುದೂ ಉಂಟು!!

    ಲೇಖನದ ಆರಂಭದಲ್ಲಿ ಹೇಳಿದ ಹಾಗೆ ಜಿರಾಫೆಗಳು ಅನೇಕ ದಾಖಲೆಗಳನ್ನು ನಿರ್ಮಿಸಿವೆ. ಅವುಗಳ ಎತ್ತರವೇ ಒಂದು ದಾಖಲೆ. ಕಾಲು, ಕುತ್ತಿಗೆ, ಹೃದಯ, ಗೊರಸು, ನಿದ್ದೆ ಮಾಡದ ವಿಲಕ್ಷಣ ಸ್ಥಿತಿ, ದಿನದ ಎಲ್ಲಾ ಕಾಲದಲ್ಲೂ ಆಹಾಯ ಮೇಯುತ್ತಲೇ ಇರುವ ಸ್ವಭಾವ, ಒಂದರ ಹಾಗೆ ಒಂದು ಇಲ್ಲದ ಮನುಷ್ಯನ ಬೆರಳಚ್ಚಿನಂತೆ ಇರುವ ಅವುಗಳ ಮೈ ಮೇಲಿನ ಪಟ್ಟೆಗಳು- ಹೀಗೆ ಎಲ್ಲವೂ ಒಂದೊಂದು ತೆರನಾ ವಿಶೇಷವಾದ ದಾಖಲೆಗಳು!! ಈ ದಾಖಲೆಗೆ ಇನ್ನೊಂದು ದೊಡ್ಡ ಸೇರ್ಪಡೆ- ಅವುಗಳ ನಾಲಿಗೆ!! ಜಿರಾಫೆಯ ನಾಲಿಗೆಯ ಉದ್ದ ಕೇಳಿದರೆ ಖಂಡಿತವಾಗಿಯೂ ತಲೆಸುತ್ತಿ ಬೀಳುತ್ತೀರಿ!! ನಮಗೆ ಹೆಚ್ಚೆಂದರೆ ಮೂರೂವರೆ ಇಂಚು ನಾಲಿಗೆ ಇದೆ. ಅದೇ ಜಿರಾಫೆಗಳ ನಾಲಗೆಯ ಉದ್ದ ಇಪ್ಪತ್ತು ಇಂಚು!! ಎಂದರೆ ಆಸುಪಾಸು ಎರಡು ಫೀಟ್ ಉದ್ದ! ಇಷ್ಟು ಉದ್ದದ ನಾಲಿಗೆ ಇರುವುದರಿಂದಲೇ ಹಾವಿನ ಹಾಗೆ ಬಳುಕುತ್ತಾ ಅಕೇಶಿಯಾದಂತಹ ಮುಳ್ಳಿನ ರೆಂಬೆ-ಕೊಂಬೆಗಳ ಒಳಗೆಲ್ಲಾ ಸುತ್ತಾಡಿ ನಡುವೆ ಇರುವ ಎಲೆಯನ್ನೂ ಸರಾಗವಾಗಿ ಕಿತ್ತು ತಿನ್ನಬಲ್ಲವು!! ಮೂರೂವರೆ ಇಂಚಿನ ನಾಲಿಗೆ ಇಟ್ಟುಕೊಂಡೇ ಮನುಷ್ಯನನ್ನು ತಡೆಯಲು ಆಗುತ್ತಿಲ್ಲ!! ಒಂದೊಮ್ಮೆ ಪ್ರಕೃತಿ ನಮಗೆ ಜಿರಾಫೆಯಂತೆ ಇಪ್ಪತ್ತಿಂಚಿನ ನಾಲಿಗೆ ನೀಡಿದ್ದರೆ ಏನು ಕಥೆ?! ಆದರೆ ಇನ್ನೊಂದು ವಿಲಕ್ಷಣ ನೋಡಿ!, ಅಷ್ಟು ಉದ್ದದ ನಾಲಿಗೆಯಿದ್ದರು ಕೂಡಾ ಜಿರಾಫೆಗಳು ಬಹುತೇಕ ಮೌನಿ! ತೀರ ಇತ್ತೀಚಿನವರೆಗೂ ಜಿರಾಫೆಗಳು ಬಾಯಿಯಿಂದ ಸದ್ದನ್ನೇ ಮಾಡುವುದಿಲ್ಲ ಎಂದು ಅಂದುಕೊಂಡಿದ್ದರು! ಆದರೆ ಇತ್ತೀಚಿನ ಸಂಶೋಧನೆಗಳು ರಾತ್ರಿಯ ಹೊತ್ತಿನಲ್ಲಿ ಆಗಾಗ ಗೊರಕೆಯಂತಹ ಸದ್ದನ್ನು ಮಾಡುವುದನ್ನು ತೋರಿಸಿವೆ. ಜೊತೆಗೆ ಮನುಷ್ಯನ ಕಿವಿಗಳು ಹೇಳಲಾರದಷ್ಟು ಕೆಳಗಿನ ಶ್ರುತಿಯ ಧ್ವನಿಗಳನ್ನೂ ಮಾಡುತ್ತವೆ ಎಂಬುದೂ ಗೊತ್ತಾಗಿದೆ! ಏನೇ ಆದರೂ, ಇಪ್ಪತ್ತಿಂಚಿನ ನಾಲಿಗೆಯಿದ್ದರೂ ಮೌನವಾಗಿರುವ ಜಿರಾಫೆಗಳಿಂದ ನಾವು ಬಹಳಷ್ಟು ಕಲಿಯುವುದಿದೆ!!

    ಲೇಖನದ ಕೊನೆಯಲ್ಲಿ ಜಿರಾಫೆಯ ಮರಿಗಳ ಬಗ್ಗೆ ಬರೆಯದಿದ್ದರೆ ಲೇಖನ ಅಪೂರ್ಣವಾದೀತು! ಹೆಂಗಸರ ಉಸಿರೇ ನಿಂತು ಹೋದೀತು! ಗರ್ಭಿಣಿ ಜಿರಾಫೆಗಳು ನಿಂತುಕೊಂಡೇ ಮರಿಯನ್ನು ಹೆರುತ್ತವೆ!! ಹೀಗಾಗಿ ಮರಿ ಸುಮಾರು ಐದು ಅಡಿಗೂ ಹೆಚ್ಚು ಎತ್ತರದಿಂದ ನೆಲಕ್ಕೆ ಬಿದ್ದು, ಈ ಭೂಮಿಯ ಭವ್ಯ ಸ್ವಾಗತವನ್ನು ಪಡೆಯುತ್ತವೆ!! ಇಷ್ಟು ಎತ್ತರದಿಂದ ಬಿದ್ದರೂ ಕೂಡ ಮರಿಗಳಿಗೆ ಏನೂ ಆಗುವುದಿಲ್ಲ!! ಬದಲಿಗೆ ಹುಟ್ಟಿದ ಅರ್ಧಗಂಟೆಯೊಳಗೆ ಮರಿ ಎದ್ದು ನಿಲ್ಲುತ್ತದೆ!! ಕೇವಲ ಒಂದು ಗಂಟೆಯೊಳಗೆ ತಾಯಿಯೊಂದಿಗೆ ತಪ್ಪು ಹೆಜ್ಜೆ ಹಾಕುತ್ತಾ ಓಡುವುದಕ್ಕೂ ಕಲಿಯುತ್ತದೆ!! ಜಿರಾಫೆಯ ಮರಿಗಳು ತಾಯಿಯ ಗರ್ಭದಲ್ಲಿ ಪೂರ್ಣ ಹದಿನೈದು ತಿಂಗಳು ವಾಸಮಾಡುತ್ತವೆ! ಪ್ರಾಣಿಪ್ರಪಂಚದಲ್ಲಿ ಇದೊಂದು ದೀರ್ಘ ಸಮಯದ ಗರ್ಭಿಣಿ ಕಾಲವೂ ಹೌದು?! ಹುಟ್ಟಿದ ಗಂಟೆಯೊಳಗೆ ಮರಿಗಳು ಓಡಾಡುವುದನ್ನು ಕಲಿಯುತ್ತವಾದರೂ, ಹುಟ್ಟಿದ ಮರಿಗಳಲ್ಲಿ ನೂರಕ್ಕೆ ಐವತ್ತರಷ್ಟು ಸಿಂಹ, ಚಿರತೆ, ಹೈನಾ, ಕಾಡುನಾಯಿಗಳಿಗೆ ಆಹಾರಗುತ್ತವೆ! “ಬಲಾಶ್ಚ ಪೃಥ್ವಿ” ಪ್ರಕೃತಿಯ ನಿಯಮ!!

    ಹಿಂದಿನ ಲೇಖನವೊಂದಲ್ಲಿ ಹೇಳಿದ್ದೆ, ಮನುಷ್ಯ ಹಕ್ಕಿಯಿಂದ ಹಾರುವುದನ್ನು ಕಲಿತ, ಮೀನಿನಿಂದ ಈಜುವುದನ್ನು ಕಲಿತ. ಹೀಗೆ ಒಂದಲ್ಲ ಒಂದು ಜೀವಿಯಿಂದ ಏನನ್ನಾದರೂ ಕಲಿತಿದ್ದಾನೆ. ಹಾಗಾದರೆ ಜಿರಾಫೆಯಿಂದ ಏನನ್ನು ಕಲಿತಿದ್ದಾನೆ? ಎಂಬ ಪ್ರಶ್ನೆ ಬರುತ್ತದೆ! ಜಿರಾಫೆಯಿಂದ ಯಾರು ಏನನ್ನು ಕಲಿತರೋ ಬಿಟ್ಟರೋ ಗೊತ್ತಿಲ್ಲ ಆದರೆ ಮ್ಯಾನ್‌ಮಾರ್ ದೇಶದ ‘ಕಯಾನ್’ ಎಂಬ ಬರ್ಮೋ-ಟಿಬೇಟಿಯನ್ ಜನಸಮುದಾಯದಲ್ಲು ಹೆಣ್ಣು ಮಕ್ಕಳು ತಮ್ಮ ಐದನೇ ವರ್ಷದ ಪ್ರಾಯದಿಂದಲೇ ವರ್ಷವರ್ಷ ತಮ್ಮ ಕುತ್ತಿಗೆಯ ಸುತ್ತ ಹಿತ್ತಾಳೆಯ ಒಂದೊಂದೇ ಉಂಗುರಗಳನ್ನು ಪೇರಿಸುತ್ತಾ ಹೋಗುತ್ತಾರೆ. ಕೊನೆಗೆ ಜಿರಾಫೆಯಷ್ಟು ಉದ್ದವಲ್ಲದಿದ್ದರೂ,ನೋಡಿದ ತಕ್ಷಣ ಕುತ್ತಿಗೆ ಮಾತ್ರ ಕಾಣುವಷ್ಟು ಉದ್ದವಾದ ಕುತ್ತಿಗೆಯಿಂದ ಮನುಷ್ಯ ಜಗತ್ತಿನಲ್ಲಿ ವಿಶೇಷವಾಗಿ ಕಾಣಿಸುತ್ತಾರೆ! ಅವರು ಈ ಹಿತ್ತಾಳೆ ಉಂಗುರಗಳನ್ನು ಧರಿಸುವುದಕ್ಕೂ ಜಿರಾಫೆಯ ಕುತ್ತಿಗೆಗೂ ಯಾವುದೇ ನೇರ ಸಂಬಂಧವಿಲ್ಲ, ಅವರು ಕುತ್ತಿಗೆಯುಂಗುರಗಳನ್ನು ಧರಿಸುವ ಹಿನ್ನಲೆ ಬೇರೆಯೇ ಇದೆ, ಅದು ಬೇರೊಂದು ಲೇಖನದ ಸಾಮಗ್ರಿಯಾದೀತು! ವಾಸ್ತವದಲ್ಲಿ ಅವರ ಕುತ್ತಿಗೆಯೇನೂ ಉದ್ದವಾಗಿರುವುದಿಲ್ಲ; ಬದಲಿಗೆ ಪೋಣಿಸಿದ ಹಿತ್ತಾಳೆಯ ಉಂಗುರಗಳು ಅವರ ಕಾಲರ್ ಮೂಳೆಯನ್ನು ಕೆಳಗೆ ಜಗ್ಗುತ್ತಲೇ ಇರುವುದರಿಂದ ಅವರ ಕುತ್ತಿಗೆ ಉದ್ದವಾಗಿರುವಂತೆ ಕಾಣುತ್ತದೆ, ಅಷ್ಟೆ!! ಕಾರ್ಯಕಾರಣ ಸಂಬಂಧಗಳು ಏನೇ ಇದ್ದರೂ, ಮನುಷ್ಯ ಪ್ರಪಂಚದ ಒಂದು ಜನಾಂಗ ಜಿರಾಫೆಯ ಕುತ್ತಿಗೆಯಂತೆ ಕಾಣಿಸುವುದಂತೂ ಸತ್ಯ! ಜಿರಾಫೆಗಳು ಅಷ್ಟು ವಿಶೇಷ ಪ್ರಾಣಿಗಳಾಗಿರುವುದರಿಂದ ಅವುಗಳನ್ನು ಅನುಕರಿಸುವುದರಲ್ಲಿ ತಪ್ಪೇನೂ ಇಲ್ಲ ಬಿಡಿ! ಜಿರಾಫೆಗಳು ಮಾತ್ರವಲ್ಲ ನಮ್ಮ ಸುತ್ತಲಿನ ಜೀವ ಜಗತ್ತನ್ನು ಸ್ವಲ್ಪ ಆಸ್ಥೆಯಿಂದ ಗಮನಿಸಿದರೆ, ಪ್ರತಿ ಜೀವಿಯಲ್ಲೂ ಒಂದಲ್ಲ ಒಂದು ವಿಶೇಷತೆ ಕಂಡುಬಂದೇ ಬರುತ್ತದೆ. ಕಾಣುವ ಕಣ್ಣು ನಮಗೆ ಇರಬೇಕು ಅಷ್ಟೇ! ಎಂದರೆ ‘ನೋಟ ಕಾಣ್ಕೆಯಾಗಬೇಕು’! ಆ ಕಾಣ್ಕೆಯ ನೋಟ ನಮ್ಮದಾಗಲಿ!! ನಮ್ಮ ಬದುಕಿನ ಹೋರಾಟದೊಂದಿಗೆ ಜಗದ ಎಲ್ಲಾ ಜೀವಗಳೂ ಬದುಕುವಂತಾಗಲಿ!!

    ಅಂದು ಅವನೆಲ್ಲಿ ತಪ್ಪಿದ..? ಇಂದು ನಾವೆಲ್ಲಿ ತಪ್ಪುತ್ತಿದ್ದೇವೆ..?

    ಶಾಂತಸಾಗರದ ತಳದ ಕೊಳಕು ಸ್ವಚ್ಛ ಮಾಡುವ ಮಹಾನ್ ಏಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts