ನ್ಯೂಸ್

‘ಸಚಿವ ರಾಣೆ ತಲೆ ಕಡಿದರೆ 51 ಲಕ್ಷ ರೂ. ಬಹುಮಾನ- ಸತ್ತ ನಂತರ ಕಾಶಿಯಲ್ಲಿ ಚಿತಾಭಸ್ಮ ಬಿಡಲು ನೀಡಲ್ಲ’

ವಾರಾಣಸಿ (ಉತ್ತರ ಪ್ರದೇಶ): ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಹಾರಾಷ್ಡ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಣೆ ಅವರು, ನಾನಾಗಿದ್ದರೆ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ರಾಣೆ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಆದರೆ ಇದರ ಬೆನ್ನಲ್ಲೇ, ಇದೀಗ ರಾಣೆ ವಿರುದ್ಧ ವಿಶ್ವ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ಅರುಣ್‌ ಪಾಠಕ್‌ ನೀಡಿರುವ ಹೇಳಿಕೆಯೊಂದು ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅದೇನೆಂದರೆ ಸಚಿವ ನಾರಾಯಣ್‌ ರಾಣೆ ಅವರ ತಲೆಯನ್ನು ಕಡಿದರೆ 51 ಲಕ್ಷ ರೂ. ಬಹುಮಾನ ಕೊಡುವುದಾಗಿ ಪಾಠಕ್‌ ಘೋಷಿಸಿದ್ದಾರೆ.

ನಿಮಗೆ ಭರವಸೆ ನೀಡುತ್ತೇನೆ ನಾರಾಯಣ್ ರಾಣೆ, ನಿಮ್ಮ ಮರಣದ ನಂತರ ಚಿತಾಭಸ್ಮವನ್ನು ಕಾಶಿಯಲ್ಲಿ ಬಿಡಲು ಅವಕಾಶ ನೀಡುವುದಿಲ್ಲ. ನಿಮ್ಮ ಆತ್ಮವು ಶತಮಾನಗಳ ಕಾಲ ಅಲೆದಾಡುತ್ತಲೇ ಇರಬೇಕು ಎಂದು ಪಾಠಕ್ ಟ್ವೀಟ್ ಮಾಡಿದ್ದಾರೆ.

ಬಾಳಾಸಾಹೇಬ್​ ಅವರು ಶಿವ ಸೇನಾವನ್ನು ಕಟ್ಟಿದ್ದು, ಅವರ ಪುತ್ರ ಉದ್ಧವ್‌ ಠಾಕ್ರೆ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಅಗ್ಗದ ಜನಪ್ರಿಯತೆಗಾಗಿ ಪಿಕ್ ಪಾಕೆಟ್ ಹಾಗೂ ಟಿಕೆಟ್
ಮಾರಾಟಗಾರನು ಬಾಳಾಸಾಹೇಬರ ಪುತ್ರನ ಬಗ್ಗೆ ಮಾತನಾಡುತ್ತಿದ್ದಾರೆ. ತನ್ನ ಮಿತಿಗಳನ್ನು ದಾಟಿದ್ದಾರೆ. ಇವರ ತಲೆ ಕಡಿದರೆ 51 ಲಕ್ಷ ರೂ. ನೀಡುವೆ ಎಂದಿದ್ದಾರೆ.

ಈ ಹಿಂದೆಯೂ ಅರುಣ್‌ ಪಾಠಕ್‌ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.