ನ್ಯೂಸ್

ಹೇಳಿಬಿಡು ಹುಡುಗಿ... ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ... ಅದು ಒಲವಿನ ಸೂಜಿಯೋ, ಮೊಂಡಾದದ್ದೊ?

ಬೆಂಗಳೂರು: ಅಲ್ಲೊಬ್ಬಳು ನರ್ಸ್‌, ಮತ್ತೊಬ್ಬ ಯುವಕ, ಈ ನರ್ಸ್‌ ಆ ಯುವಕನಿಗೆ ಕರೊನಾ ಲಸಿಕೆ ಹಾಕುತ್ತಿದ್ದಾಳೆ... ಆ ಯುವಕ ನರ್ಸ್‌ನತ್ತ ನೋಟ ಬೀರಿದ್ದಾನೆ...

ಫೋಟೋ ಇಷ್ಟೇ. ಆದರೆ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟು ವೈರಲ್‌ ಆಗಿದೆ ಎಂದರೆ, ಇದನ್ನು ನೋಡಿದವರು ಕವಿಗಳಾಗಿದ್ದಾರೆ, ಸಾಹಿತ್ಯ ಬರೆಯುತ್ತಿದ್ದಾರೆ! ಯುವಕರೆಲ್ಲರೂ ಆ ನರ್ಸ್‌ ನನಗೆ ಸಿಗಬಾರದೇ ಎಂದರೆ, ಯುವತಿಯರು ಆ ನರ್ಸ್‌ ನಾನಾಗಬಾರದಿತ್ತೇ ಎನ್ನುವಷ್ಟರ ಮಟ್ಟಿಗೆ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಚಂದನಾ ಡಿ.ವೈ ಎನ್ನುವ ಹೆಸರಿನ ಪ್ರೊಫೈಲ್‌ನಿಂದ ಈ ಫೋಟೋ ಶೇರ್‌ ಆಗಿದೆ. 

ಒಬ್ಬರು ‘ಹೇಳಿಬಿಡು ಹುಡುಗಿ... ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ’... ಎಂದು ಪ್ರಶ್ನಿಸಿದ್ದರೆ, ಇನ್ನೊಬ್ಬರು ಅದು ಒಲವಿನ ಸೂಜಿಯೋ... ಮೊಂಡಾದದ್ದೊ ಎಂದಿದ್ದಾರೆ. ಇದನ್ನು ನೋಡಿಯೂ ಲಸಿಕೆ ಹಾಕಿಸಿಕೊಳ್ಳಲು ಹೋಗಿಲ್ಲ ಅಂದರೆ ಅವನು ಅರಸಿಕನೇ ಎಂದು ಒಬ್ಬಾತ ಹೇಳಿದ್ದರೆ, ಇನ್ನೊಬ್ಬರು ವಾಕ್ಯಾ‘ಸೀನ್‌’ ಎಂದಿದ್ದಾರೆ. ಮತ್ತೆ ಕೆಲವರು ಈ ನರ್ಸ್‌ ಯಾವ ಹಾಸ್ಪಿಟಲ್‌ನಲ್ಲಿ ಸಿಕ್ತಾರೆ ಎಂದಿದ್ದಾರೆ.

ಇವೆಲ್ಲಾ ಯುವಕರು, ಪುರುಷರು ಬರೆದಿದ್ದರೆ ಹುಡುಗಿಯರೂ ಹಿಂದೆ ಬಿದ್ದಿಲ್ಲ, ಆ ಒಂದೇ ನೋಟ ಸಾಕು, ಇಡೀ ಜನುಮಕೆ ಎಂದು ಯುವತಿಯೊಬ್ಬಳು ಕಮೆಂಟ್‌ನಲ್ಲಿ ಬರೆದುಕೊಂಡಿದ್ದಾಳೆ. ಇನ್ನೂ ಕೆಲವು ಕಮೆಂಟ್‌ಗಳಿವೆ ನೀವೇ ನೋಡಿ ಇಲ್ಲಿ....

ಇದು ಯಾವ ಆಸ್ಪತ್ರೆ, ಅಲ್ಲಿರುವವರು ಯಾರು ಎಂದು ಗೊತ್ತಿಲ್ಲ. ಆದರೆ ಕನ್ನಡಿಗರು ಮಾತ್ರ ಈ ಚಿತ್ರ ನೋಡಿ ಫಿದಾ ಆಗಿದ್ದಾರೆ.