ನ್ಯೂಸ್

ಸ್ನೇಹಿತೆಯನ್ನು ಮದುವೆಯಾಗಲು ಲಿಂಗ ಬದಲಿಸಿಕೊಂಡ ವಿದ್ಯಾರ್ಥಿನಿ! ವೈದ್ಯರು ಹೇಳಿದ್ದೇನು?

ಪ್ರಯಾಗ್‌ರಾಜ್ (ಉತ್ತರಪ್ರದೇಶ): ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ (everything is fair in love and war) ಎನ್ನುವ ಮಾತಿದೆ. ಅದೇ ರೀತಿ ಪ್ರೀತಿ ಕುರುಡು, ಅದಕ್ಕೆ ಕಣ್ಣಿಲ್ಲ ಹೀಗೆ ಪ್ರೀತಿ, ಪ್ರೇಮದ ಬಗ್ಗೆ ಸಾಕಷ್ಟು ನಾಣ್ಣುಡಿಗಳೇ ಇವೆ. ಇದಕ್ಕೆ ಸಾಕ್ಷಿಯಂತಿದೆ ಈ ಘಟನೆ!

ಹೆಣ್ಣು-ಹೆಣ್ಣು ಹಾಗೂ ಗಂಡು-ಗಂಡು ಪ್ರೀತಿಯಲ್ಲಿ ಬೀಳುವುದು, ಮದುವೆಯಾಗುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ತಮಗೆ ಪ್ರಕೃತಿ ಇದೇ ರೀತಿ ದೇಹ ರಚನೆ ಮಾಡಿರುವಾಗ ನಾವೇನು ಮಾಡಲು ಸಾಧ್ಯ? ನಮ್ಮನ್ನೇಕೆ ಕೆಟ್ಟದ್ದಾಗಿ ನೋಡುವಿರಿ ಎಂದು ಸಲಿಂಗಕಾಮಿಗಳು ಸಮಾಜವನ್ನು ಪ್ರಶ್ನೆ ಮಾಡುತ್ತಲೇ ಬಂದಿದ್ದಾರೆ. ಅಂಥದ್ದೇ ಒಂದು ಜೋಡಿ ಇದೀಗ ಮದುವೆಯಾಗಲು ನಿರ್ಧರಿಸಿ ಅತಿ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.

ಫಾಫಮೌ ನಿವಾಸಿಯಾಗಿರುವ 20 ವರ್ಷದ ಬಿಎ ಕಲಿಯುತ್ತಿರುವ ವಿದ್ಯಾರ್ಥಿನಿ ಇನ್ನೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರೂ ಪರಸ್ಪರ ಬಿಟ್ಟುಬಿಡದಷ್ಟು ಸ್ನೇಹಿತೆಯರಾಗಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಇವರ ಈ ಸಂಬಂಧ ಮನೆಯವರಿಗೆ ಒಪ್ಪಿಗೆಯಾಗಲಿಲ್ಲ. ಅಷ್ಟೇ ಅಲ್ಲದೇ ತಮ್ಮ ಮಕ್ಕಳು ಈ ರೀತಿ ಮದುವೆಯಾದರೆ ಸಮಾಜದಿಂದ ತಾವು ಎದುರಿಸಬೇಕಾಗಿರುವ ಕೀಳುದೃಷ್ಟಿಯನ್ನು ಇವರ ಅಪ್ಪ-ಅಮ್ಮಂದಿರಿಗೆ ಸಹಿಸಲು ಆಗಲಿಲ್ಲ. ಆದ್ದರಿಂದ ಇಬ್ಬರನ್ನೂ ಬೇರೆ ಮಾಡಲು ನಿರ್ಧರಿಸಿದರು.

ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗದ ಈ ಜೋಡಿಯ ಪೈಕಿ ಬಿಎ ಕಲಿಯುತ್ತಿರುವ ವಿದ್ಯಾರ್ಥಿನಿ ತಾನು ಗಂಡಾಗಲು ನಿರ್ಧರಿಸಿದಳು. ಈ ಹಿನ್ನೆಲೆಯಲ್ಲಿ ಇಲ್ಲಿಯ ಸ್ವರೂಪರಾಣಿ ನೆಹರು ಆಸ್ಪತ್ರೆಯಲ್ಲಿ ಯುವತಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ದೇಹದ ಮೇಲ್ಭಾಗವನ್ನು ಬದಲಾಯಿಸಿಕೊಂಡಿದ್ದಾಳೆ. ಈಕೆಯ ಗರ್ಭಕೋಶ ತೆಗೆಯಲಾಗಿದೆ. ಲೈಂಗಿಕ ಭಾಗವನ್ನು ಹೆಣ್ಣಿನಿಂದ ಗಂಡಿಗೆ ಬದಲಾಯಿಸಲಾಗಿದೆ.

ಸದ್ಯದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ. ಕೆಲವು ತಿಂಗಳ ನಂತರ ಆಕೆಗೆ ಅಂತಿಮ ಶಸ್ತ್ರಚಿಕಿತ್ಸೆ ಮಾಡಲಾಗುವುದು, ಇದಾದ ಮೇಲೆ ಆಕೆ ಒಂದೂವರೆ ವರ್ಷಗಳ ನಂತರ ಸಂಪೂರ್ಣವಾಗಿ ಪುರುಷಳಾಗುತ್ತಾಳೆ ಎಂದು ಶಸ್ತ್ರಚಿಕಿತ್ಸೆ ಮೇಲ್ವಿಚಾರಣೆ ವಹಿಸಿರುವ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ಮೋಹಿತ್ ಜೈನ್ ಹೇಳಿದ್ದಾರೆ.

ಮೊದಲಿಗೆ ನಾವು ವಿದ್ಯಾರ್ಥಿನಿಯನ್ನು ಮನೋವೈದ್ಯರ ಬಳಿಗೆ ಕಳುಹಿಸಿ ಕೌನ್ಸಿಲಿಂಗ್ ಮಾಡಿಸಿದೆವು. ಆಕೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿದ್ದಾಳೆ ಎಂದು ತಿಳಿಯಿತು. ವಯಸ್ಕಳಾದ ಕಾರಣ ವಿದ್ಯಾರ್ಥಿನಿಯಿಂದ ಪ್ರಮಾಣ ಪತ್ರ ಪಡೆದು ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಿದೆವು ಎಂದು ವೈದ್ಯರು ಹೇಳಿದ್ದಾರೆ.

ಹುಡುಗಿ ಪುರುಷನಾಗುವ ಪ್ರಕ್ರಿಯೆಯಲ್ಲಿ ದೈಹಿಕ ಬದಲಾವಣೆಗಳು ಮಾತ್ರವಲ್ಲ, ಹಾವಭಾವವೂ ಬದಲಾಗಲಿದೆ. ಗಡ್ಡ, ಮೀಸೆಯೂ ಬೆಳೆಯುತ್ತದೆ. ಇದಕ್ಕಾಗಿ ಅವರಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಚಿಕಿತ್ಸೆ ನೀಡಲಾಗುವುದು. ಹೀಗೆ ಆಕೆಯೊಳಗೆ ಪುರುಷತ್ವ ಜಾಗೃತಗೊಂಡು ಅವಳಲ್ಲಿ ಸಂಪೂರ್ಣ ಬದಲಾವಣೆ ಬರಲು ಶುರುವಾಗುತ್ತದೆ. ಪ್ರಸ್ತುತ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಉತ್ತರ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ ಇದೇ ರೀತಿ ಮೀರತ್‌ನ ಬಾಲಕಿಯೊಬ್ಬಳು ಲಿಂಗ ಬದಲಾಯಿಸಿಕೊಂಡಿದ್ದಳು.