ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಚುನಾವಣಾ ವಿಜಯವನ್ನು ಕಾಂಗ್ರೆಸ್ ಸಭೆ ಪ್ರಮಾಣೀಕರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡ ಎದುರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವಿಗೀಡಾಗಿರುವ ಘಟನೆ ಇಂದು ಬೆಳಗ್ಗೆ ನಡೆಯಿತು.
ಇದಾದ ನಂತರ ಇಡೀ ವಿಶ್ವದ ಜನತೆಯಿಂದ ಟ್ರಂಪ್ ಛೀಮಾರಿ ಹಾಕಿಸಿಕೊಳ್ಳುವ ಘಟನೆಯೂ ನಡೆಯಿತು. ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವು ಸಾಧಿಸಿದ್ದಾರೆಂದು ಯುಎಸ್ ಕಾಂಗ್ರೆಸ್ ಘೋಷಣೆ ಮಾಡಿದೆ. ಇದರಿಂದ ಟ್ರಂಪ್ ಅನಿವಾರ್ಯವಾಗಿ ಸೋಲನ್ನು ಒಪ್ಪಿಕೊಂಡಿದ್ದಾರೆ.
ಸಂಸತ್ತಿನ ಘೋಷಣೆ ಬಳಿಕ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್, 'ಈ ನಿರ್ಧಾರವು ಅಧ್ಯಕ್ಷೀಯ ಇತಿಹಾಸದ ಮಹಾನ್ ಮೊದಲ ಅವಧಿಯನ್ನು ಬಿಂಬಿಸುತ್ತದೆ' ಎಂದಿದ್ದಾರೆ. 'ಚುನಾವಣೆಯ ಫಲಿತಾಂಶವನ್ನು ನಾನು ಸಂಪೂರ್ಣ ಒಪ್ಪದೇ ಹೋದರೂ ಮತ್ತು ವಾಸ್ತವಗಳು ನನ್ನ ವಿರುದ್ಧವಾಗಿದ್ದರೂ ಜನವರಿ 20ರಂದು ಸುವ್ಯವಸ್ಥಿತ ಅಧಿಕಾರ ಹಸ್ತಾಂತರ ನಡೆಯಲಿದೆ' ಎಂದು ಅವರು ತಿಳಿಸಿದ್ದಾರೆ. ಇದರಿಂದ ಬೈಡೆನ್ ಹಾದಿ ಸುಗಮವಾಗಿದೆ.
ಇದನ್ನೂ ಓದಿ: ಬೈಡೆನ್ ಗೆಲುವು ಪ್ರಮಾಣೀಕರಿಸದಂತೆ ಆಗ್ರಹ: ಡೊನಾಲ್ಡ್ ಟ್ರಂಪ್ ಬೆಂಬಲಿಗರ ಹಿಂಸಾಚಾರಕ್ಕೆ ನಾಲ್ವರು ಬಲಿ
ಅಮೆರಿಕ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರ ಹಿಂಸಾಚಾರ ತಣ್ಣಗಾದ ಬಳಿಕ ಬುಧವಾರ ಮಧ್ಯರಾತ್ರಿಯಿಂದ ಜಂಟಿ ಅಧಿವೇಶನವನ್ನ ಮುಂದುವರಿಸಿ ಈ ಘೋಷಣೆ ಮಾಡಲಾಗಿದೆ. ಜನವರಿ 20ರಂದು ಬೈಡೆನ್ ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ಅದೇ ದಿನ ಭಾರತ ಮೂಲದ ಕಮಲ್ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಿಪಬ್ಲಿಕನ್ ಉಪಾಧ್ಯಕ್ಷ ಮೈಕ್ ಪೆನ್ಸ್ ಅವ್ರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಘೋಷಿಸಿದ್ದು, ಎಲೆಕ್ಟೋರಲ್ ಕಾಲೇಜ್ ಮತಗಳ ಪೈಕಿ ಡೆಮಾಕ್ರಟಿಕ್ ಪರವಾಗಿ 306 ಮತಗಳಿದ್ದರೆ, ನಿರ್ಗಮಿತ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ 232 ಮತಗಳಿವೆ.
78ರ ಹರೆಯದ ಜೋ ಬಿಡೆನ್ ಹಾಗೂ 56 ವರ್ಷದ ಕಮಲಾ ಹ್ಯಾರಿಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಕರೊನಾ ಮಾರ್ಗಸೂಚಿಗಳನ್ನ ಗಮನದಲ್ಲಿಟ್ಟುಕೊಂಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಜೋ ಬೈಡನ್ ಅವರ ಗೆಲುವನ್ನು ಪ್ರಮಾಣೀಕರಿಸುವ ಸಲುವಾಗಿ ಬುಧವಾರ ಅಮೆರಿಕ ಸಂಸತ್ತು ಸಭೆ ಸೇರಿತ್ತು. ಆಗ ರಿಪಬ್ಲಿನ್ ಬಾವುಟ ಹೊತ್ತ ಟ್ರಂಪ್ ಬೆಂಬಲಿತ ಸಾವಿರಾರು ಪ್ರತಿಭಟನಾಕಾರರು ಕಟ್ಟಡದ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದರು. ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
'ಕಾನೂನುಬದ್ಧ ಮತಗಳನ್ನು ಮಾತ್ರ ಎಣಿಕೆ ಮಾಡಬೇಕು ಎಂಬುದನ್ನು ಖಾತರಿಪಡಿಸುವ ನನ್ನ ಹೋರಾಟವನ್ನು ಮುಂದುವರಿಸುವುದಾಗಿ ಸದಾ ಹೇಳುತ್ತಿದ್ದೆ. ಇದು ಅಧ್ಯಕ್ಷೀಯ ಇತಿಹಾಸದ ಮಹಾನ್ ಮೊದಲ ಅವಧಿ ಆಡಳಿತವನ್ನು ಪ್ರತಿನಿಧಿಸುತ್ತದೆ. ಇದು ಅಮೆರಿಕವನ್ನು ಮತ್ತೆ ಮಹಾನ್ ದೇಶವನ್ನಾಗಿಸುವ ನಮ್ಮ ಹೋರಾಟದ ಆರಂಭವಷ್ಟೇ' ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.