ನ್ಯೂಸ್

ಪ್ರತಿಭಟನೆಯಿಂದ ಮರಳುತ್ತಿದ್ದ ರೈತರ ಟ್ರ್ಯಾಕ್ಟರ್​ ಅಪಘಾತ- ಇಬ್ಬರ ಸಾವು, ಹಲವರಿಗೆ ಗಾಯ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ತವರು ಪಂಜಾಬ್​ಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ರೈತರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಇಂದು ಬೆಳಗ್ಗೆ ಹರಿಯಾಣದಲ್ಲಿನ ಕರ್ನಲ್ ಎಂಬಲ್ಲಿ ದೆಹಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಘಟನೆ ನಡೆದಿದೆ. ಟ್ರ್ಯಾಕ್ಟರ್​ನಲ್ಲಿ ರೈತರು ಬರುತ್ತಿದ್ದರು. ಆ ಸಮಯದಲ್ಲಿ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ವಾಹನವೊಂದು ಟ್ರ್ಯಾಕ್ಟರ್​ಗೆ ಗುದ್ದಿದೆ. ಈ ಘಟನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಪಟಿಯಾಲ ಜಿಲ್ಲೆಯ ಸಫೇರಾ ಗ್ರಾಮದ ಗುರ್​ಪ್ರೀತ್ ಸಿಂಗ್ (24) ಹಾಗೂ ಲಾಭ್ ಸಿಂಗ್ (65) ಎಂದು ಗುರುತಿಸಲಾಗಿದೆ. ಗುರ್​ಪ್ರೀತ್ ಸಿಂಗ್ ಸ್ಥಳದಲ್ಲೇ ಮೃತಪಟ್ಟರೆ, ಲಾಭ್ ಸಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ.

ಇದೇ ಗ್ರಾಮದ ಇನ್ನಿತರ ಮೂವರು ರೈತರಿಗೆ ಗಂಭೀರ ಗಾಯಗಳಾಗಿದ್ದು, ಇನ್ನೂ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ.

ಗುರ್​ಪ್ರೀತ್​ ಅವರು ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದು ಅವರೇ ಕುಟುಂಬಕ್ಕೆ ಆಧಾರವಾಗಿದ್ದರು ಎಂದು ಅಪಘಾತದಲ್ಲಿ ಗಾಯಗೊಂಡಿರುವ ರೈತ ನರೇಂದ್ರ ಸಿಂಗ್ ಹೇಳಿದ್ದಾರೆ. ಗಾಯಗೊಂಡಿರುವ ರೈತರಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ಅಪಘಾತ ಮಾಡಿದ ವಾಹನ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.