ಒಂಟಾರಿಯೊ (ಕೆನಡಾ): ಟಿಕ್ಟಾಕ್ ಮೂಲಕ ವಿಶ್ವಖ್ಯಾತಿ ಗಳಿಸಿದ್ದ ತಾರೆ ತಾನ್ಯಾ ಪರ್ದಾಜಿ ಸ್ಕೈಡೈವಿಂಗ್ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆ. ಇವರಿಗೆ 21 ವರ್ಷ ವಯಸ್ಸಾಗಿತ್ತು.
ಕೆನಡಾದ ಒಂಟಾರಿಯೊದಲ್ಲಿ ಸ್ಕೈಡೈವಿಂಗ್ ತರಬೇತಿ ಕೇಂದ್ರದಲ್ಲಿ ಕೆಲ ತಿಂಗಳ ಹಿಂದೆ ಸ್ಕೈಡೈವಿಂಗ್ ತರಬೇತಿ ಪಡೆದಿದ್ದ ತಾನ್ಯಾ, ಇಂದು ಒಬ್ಬರೇ ಸ್ಕೈಡೈವಿಂಗ್ ಮಾಡುತ್ತಿದ್ದರು. ಆಕಾಶದಿಂದ ಕೆಳಕ್ಕೆ ಜಿಗಿಯುವ ಸಂದರ್ಭದಲ್ಲಿ ಅವರ ಪ್ಯಾರಾಚೂಟ್ ಸರಿಯಾದ ವೇಳೆ ತೆರೆದುಕೊಳ್ಳಲಿಲ್ಲ. ಆದ್ದರಿಂದ ಮೇಲಿನಿಂದ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದ ತಾನ್ಯಾ ಪರ್ದಾಜಿ, 2017ರಲ್ಲಿ ನಡೆದ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಸೆಮಿ-ಫೈನಲಿಸ್ಟ್ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರು ಲಕ್ಷಾಂತರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ತಾನ್ಯಾ ಅವರ ನಿಧನಕ್ಕೆ ತರಬೇತಿ ಕೇಂದ್ರ 'ಸ್ಕೈಡೈವ್ ಟೊರೊಂಟೊ ಸೌತ್ ಸಿಮ್ಕೊ' ಸಿಬ್ಬಂದಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. 'ತಾನ್ಯಾ ಪರ್ದಾಜಿ, ಈಚೆಗಷ್ಟೇ ಸ್ಕೈಡೈವಿಂಗ್ ಗುಂಪಿಗೆ ಸೇರಿದ್ದರು. ಅವರನ್ನು ನಾವೆಲ್ಲರೂ ಸ್ವಾಗತದಿಂದ ಬರಮಾಡಿಕೊಂಡಿದ್ದೆವು. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ 50 ವರ್ಷದಿಂದ ತರಬೇತಿ ನೀಡುತ್ತಾ ಬಂದಿದೆ. ಇಲ್ಲಿಯವರೆಗೆ ಯಾವುದೇ ರೀತಿಯ ಅನಾಹುತ ಆಗಿರಲಿಲ್ಲ. ಇದೊಂದು ದೊಡ್ಡ ದುರಂತ' ಎಂದಿದ್ದಾರೆ ಸಿಬ್ಬಂದಿ (ಏಜೆನ್ಸೀಸ್)