ಭೋಪಾಲ್: ಇಬ್ಬರನ್ನು ಮದುವೆಯಾದ ಭೂಪನೊಬ್ಬ 3ನೇಯವಳ ಜತೆ ಸಂಸಾರ ಮಾಡಿ, ಇದೀಗ ಭಾರಿ ಪೇಚಿಗೆ ಸಿಲುಕಿದ್ದಾರೆ. ಪೇಚಿಗೆ ಸಿಲುಕಲು ಕಾರಣ, ಮದುವೆಯಲ್ಲ, ಬದಲಿಗೆ ಮೂವರೂ ಚುನಾವಣೆಯಲ್ಲಿ ನಿಂತಿದ್ದು, ವೋಟು ಯಾರಿಗೆ ಹಾಕಬೇಕು ಎಂಬ ಬಗ್ಗೆ ತಲೆ ಕೆಡಿಸಿಕೊಂಡಿದ್ದಾನೆ. ಈ ಚುನಾವಣೆಯಿಂದಾಗಿಯೇ ಈತ ಮೂರು ಮದುವೆಯಾಗಿರುವುದು ಬೆಳಕಿಗೆ ಬಂದಿದ್ದು ಕೂಡ ಇನ್ನೊಂದು ಶಾಕ್ ನೀಡಿದೆ.
ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಪಂಚಾಯತ್ ಕಾರ್ಯದರ್ಶಿ ಸುಖರಾಮ್ ಸಿಂಗ್ ಇಂಥದ್ದೊಂದು ಪೇಚಿಗೆ ಸಿಲುಕಿದ್ದಾರೆ. ಇವರ ಮೂವರೂ ಪತ್ನಿಯರು ಬೇರೆ ಬೇರೆ ಕಡೆಗಳಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಕುಸುಮ್ ಕಾಳಿ ಮತ್ತು ಗೀತಾ ಸಿಂಗ್ ಎಂಬುವವರನ್ನು ಮದುವೆಯಾಗಿರುವ ಸಿಂಗ್, ಊರ್ಮಿಳಾ ಜತೆ ಸದ್ಯ ಲಿವ್ ಇನ್ ರಿಲೇಷನ್ನಲ್ಲಿ ಇದ್ದಾರೆ.
ಈ ಪೈಕಿ ಇವರ ಇಬ್ಬರೂ ಪತ್ನಿಯರು ದೇವಸರ್ ಜನಪದ ಪಿಪರ್‌ಖಾಡ್ ಗ್ರಾಮದ ಸರಪಂಚ್ ಹುದ್ದೆಗಾಗಿ ಕಣಕ್ಕಿಳಿದಿದ್ದರೆ, ಮತ್ತೊಂದು ಗ್ರಾಮವಾದ ಪೆದ್ರಾದಿಂದ ಜನಪದ ಪಂಚಾಯತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಊರ್ಮಿಳಾ. ಸದ್ಯ ಸುಖರಾಮ್ ಅವರ ಸಮಸ್ಯೆ ಇರುವುದು ಇಬ್ಬರ ಪತ್ನಿಯರ ನಡುವೆ. ಏಕೆಂದರೆ ಇವರ ವೋಟು ಇರುವುದು ಈಕ್ಷೇತ್ರದಲ್ಲಿ. ಲಿವ್ ಇನ್ನಲ್ಲಿ ಇರುವ ಮಹಿಳೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾರಣ, ಇವರಿಗೆ ಆ ಸಮಸ್ಯೆ ಇಲ್ಲ. ಇಬ್ಬರು ಪತ್ನಿಯರಿಗಾಗಿ ಈ ಗೋಳಾಟ ಶುರುವಾಗಿದೆ.
ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ. ಇವರ ಪತ್ನಿಯರೆಲ್ಲರೂ ಕಣಕ್ಕಿಳಿದಿರುವ ಕಾರಣದಿಂದ ಒಬ್ಬನೇ ಹಿಂದೂ ಮೂರು ಮದ್ವೆಯಾಗಿರುವ ಅಂಶವೂ ಬೆಳಕಿಗೆ ಬಂದಿದ್ದು, ಈ ಕಾರ್ಯದರ್ಶಿ ಪೇಚಿಗೆ ಸಿಲುಕಿದ್ದಾರೆ. ಮದುವೆಯ ಬಗ್ಗೆ ಮರೆಮಾಚಿದ್ದಕ್ಕೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸದ್ಯ ಸಿಂಗ್ರೌಲಿ ಜಿಲ್ಲೆಯಲ್ಲಿ ಪಂಚಾಯತ್ ಕಾರ್ಯದರ್ಶಿ ಸ್ಥಾನದಿಂದ ಅಮಾನತುಗೊಂಡಿದ್ದಾರೆ.
ತಮ್ಮ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸುಖರಾಮ್, ಇದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದಿದ್ದಾರೆ. ನಮ್ಮದು ಬುಡಕಟ್ಟು ಜನಾಂಗ. ಎರಡು ಮದುವೆಯಾಗಲು ಅವಕಾಶವಿದೆ. ಅಷ್ಟೇ ಇಲ್ಲದೇ ನನಗೀಗ 55 ವರ್ಷ. ನನ್ನ ಮೊದಲ ಮದುವೆಯಾದಾಗ ನನಗಿನ್ನೂ 6 ವರ್ಷ. ಕುಸುಮ್ ಕಾಳಿಯನ್ನು ಮನೆಯವರು ಮದುವೆ ಮಾಡಿದರು, 12ನೇ ವಯಸ್ಸಿಗೆ ಎರಡನೆಯ ಮದುವೆಯೂ ಆಯಿತು. ಆದ್ದರಿಂದ ಎರಡೂ ಮದುವೆ ಬಾಲ್ಯವಿವಾಹ. ನಾನು ವಯಸ್ಸಿಗೆ ಬಂದ ಮೇಲೆ ನನ್ನ ಇಚ್ಛೆಯಂತೆ ಊರ್ಮಿಳಾ ಜತೆ ಲಿವ್ ಇನ್ ರಿಲೇಷನ್ನಲ್ಲಿ ಇದ್ದೇನೆ. ನಮ್ಮ ಮದುವೆಯಾಗಲಿಲ್ಲ ಎಂದಿದ್ದಾರೆ.
ನಮ್ಮ ಪದ್ಧತಿಯಂತೆ ಎರಡು ಮದುವೆಗೆ ಅವಕಾಶವಿದೆ. ಆದ್ದರಿಂದ ಈ ಬಗ್ಗೆ ನಾನು ಕಾರ್ಯದರ್ಶಿಯಾಗುವ ಮೊದಲೇ ತಿಳಿಸಿದ್ದೆ. ಇನ್ನು ಊರ್ಮಿಳಾ ಜತೆ ನನ್ನ ಮದುವೆಯಾಗಿಲ್ಲ, ಆಕೆ ನನ್ನ ಹೆಂಡತಿಯಲ್ಲ. ಆದ್ದರಿಂದ ನಾನು ಆ ಬಗ್ಗೆ ತಿಳಿಸಲಿಲ್ಲ. ಸುಖಾಸುಮ್ಮನೆ ನನ್ನನ್ನು ಅಮಾನತು ಮಾಡಲಾಗಿದೆ ಎಂದು ದುಃಖ ತೋಡಿಕೊಂಡಿದ್ದಾರೆ ಸಿಂಗ್. ನನ್ನ ತಪ್ಪು ಇಲ್ಲ ಎಂದು ಪರಿಗಣಿಸಿ ವಾಪಸ್ ಕಾರ್ಯದರ್ಶಿ ಸ್ಥಾನಕ್ಕೆ ನನ್ನನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆದರೆ ಸದ್ಯ ಇಬ್ಬರು ಪತ್ನಿಯರಲ್ಲಿ ಯಾರಿಗೆ ಮತ ಚಲಾಯಿಸಬೇಕು ಎಂಬ ಗೊಂದಲದಿಂದ ಮಾತ್ರ ನಾನಿನ್ನೂ ಹೊರಕ್ಕೆ ಬಂದಿಲ್ಲ ಎಂದಿದ್ದಾರೆ. ಅವರ ಮೊದಲ ಪತ್ನಿಯ ಮಗ ಮುನೇಶ್ವರ್ ಸಿಂಗ್ ಕೂಡ ಪೇಚಿಗೆ ಸಿಲುಕಿದ್ದು, ಇಬ್ಬರೂ ನನ್ನ ಅಮ್ಮಂದಿರೇ. ಯಾರಿಗೆ ಮತ ಚಲಾಯಿಸಬೇಕೋ ತಿಳಿಯುತ್ತಿಲ್ಲ ಎಂದಿದ್ದಾರೆ.