ದ್ವಾರಕಾ: ಗುಜರಾತ್‌ನ ದೇವಭೂಮಿ ಎಂದೇ ಪ್ರಖ್ಯಾತವಾಗಿರುವ ದ್ವಾರಕಾ ಜಿಲ್ಲೆಯ ವಿಶ್ವಪ್ರಸಿದ್ಧ ದ್ವಾರಕಾಧೀಶ ದೇವಾಲಯದಲ್ಲೊಂದು ಅಚ್ಚರಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಈ ಭಾಗದ ಸುತ್ತಮುತ್ತಲೂ ಸಿಡಿಲು ಬಡಿದು ಅನೇಕ ಮಂದಿ ಮೃತಪಟ್ಟಿದ್ದಾರೆ. ಆದರೆ ದೇವಾಲಯಕ್ಕೆ ಬಡಿದಿರುವ ಈ ಸಿಡಿಲು ಮಾತ್ರ ಎಲ್ಲರಲ್ಲಿಯೂ ಅಚ್ಚರಿ ಉಂಟು ಮಾಡಿದೆ.
ಇದಕ್ಕೆ ಕಾರಣ, ಗೋಪುರದ ಮೇಲೆ ಭಯಾನಕ ಎನಿಸುವ ಸಿಡಿಲು ಬಡಿದಿದೆ. ಆ ವೇಳೆ ಗೋಪುರದ ತುತ್ತತುದಿಯಲ್ಲಿದ್ದ ಧ್ವಜ ಹರಿದು ಹೋಗಿದೆ. ಆದರೆ ಆ ಸಿಡಿಲಿನ ರೂಪ ಅದೆಷ್ಟು ಭಯಂಕರವಾಗಿತ್ತು ಎಂದರೆ ದೇವಾಲಯವೇ ಬಿರುಕು ಬಿಟ್ಟು ಹೋಯಿತೇನೋ ಎಂದುಕೊಳ್ಳುವಷ್ಟರ ಮಟ್ಟಿಗೆ ಇತ್ತು.
ಆದರೆ ಅಚ್ಚರಿ ನಡೆದೇ ಹೋಗಿದೆ. ದೇವಾಲಯಕ್ಕೆ ಕಿಂಚಿತ್ ಹಾನಿಯೂ ಆಗಿಲ್ಲ, ಮಾತ್ರವಲ್ಲದೇ ಅಲ್ಲಿಯೇ ಇದ್ದ ಅಸಂಖ್ಯ ಭಕ್ತರಿಗೆ ಕೂಡ ಚಿಕ್ಕಪುಟ್ಟ ಅನಾಹುತವೂ ಆಗಿಲ್ಲ. ಅದೇ ಅಕ್ಕಪಕ್ಕದ ಸ್ಥಳಗಳಲ್ಲಿ ಸಿಡಿಲು ಹಲವು ಜೀವಗಳನ್ನು ಬಲಿ ಪಡೆದಿದೆ.
ಗೋಪುರಕ್ಕೆ ಸಿಡಿಲು ಬಡಿದಿರುವ ದೃಶ್ಯ ಇದೀಗ ವೈರಲ್ ಆಗಿದ್ದು, ದೇವಾಲಯಕ್ಕೆ ಹಾಗೂ ಭಕ್ತರಿಗೆ ಯಾವುದೇ ಹಾನಿ ಆಗದೇ ಇರುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇದೇ ವೇಳೆ ಭಕ್ತರು ಭಕ್ತಿ ಇನ್ನಷ್ಟು ಹೆಚ್ಚಾಗಿದೆ.
‘ಕಣ್ಣೆದುರಿನಲ್ಲೇ ದೇವಾಲಯಕ್ಕೆ ಸಿಡಿಲು ಅಪ್ಪಳಿಸಿತ್ತು. ದ್ವಾರಕಾಧೀಶನ ಮಂದಿರದ ಮೇಲಿನ ಧ್ವಜಕ್ಕೆ ನೇರವಾಗಿ ಸಿಡಿಲು ಅಪ್ಪಳ್ಳಿಸಿದೆ. ಆದರೆ ಯಾವಿಬ್ಬ ಭಕ್ತರಿಗೂ ಏನೂ ಹಾನಿಯಾಗಿಲ್ಲ, ಮಂದಿರದ ಯಾವ ಭಾಗವೂ ಹಾನಿಗೊಂಡಿಲ್ಲ ಇದಾಗಿ ಅರ್ಧ ಗಂಟೆಯ ನಂತರ ಮಳೆ ಸಹ ನಿಂತಿತು. ಭಕ್ತರು ಮತ್ತೆ ಧ್ವಜವನ್ನು ದೇವಾಲಯದ ಮೇಲೆ ಏರಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಈ ಘಟನೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ದ್ವಾರಕಾ ಜಿಲ್ಲಾಡಳಿತದೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ.
ನೀವೂ ನೋಡಿ ಈ ವಿಡಿಯೋ: