ನ್ಯೂಸ್

ಅಯ್ಯಯ್ಯೋ ಬಂದೇ ಬಿಟ್ರು ಎನ್ನುತ್ತಲೇ ₹20 ಲಕ್ಷ ಗರಿಗರಿ ನೋಟ್‌ ಸುಟ್ಟು ಭಸ್ಮ ಮಾಡಿದ ತಹಶೀಲ್ದಾರ್‌!

ಜೈಪುರ: ಲಂಚ ಸ್ವೀಕರಿಸುವಂಥ ಹೇಸಿಗೆ ಕೆಲಸ ಮಾಡುವಾಗ ಬಾರದ ಹೆದರಿಕೆ ತನ್ನನ್ನು ಹಿಡಿಯಲು ಪೊಲೀಸರು ಬಂದಾಗ ಉಂಟಾಗಿ ಹಣದ ಕಟ್ಟನ್ನೇ ಗುಳುಂ ಗುಳುಂ ಎಂದು ತಿಂದು ತೇಗುವ ಅನೇಕ ಉದಾಹರಣಗಳು ಇದಾಗಲೇ ನಡೆದಿವೆ. ಆದರೆ ಇಲ್ಲೊಬ್ಬ ತಹಶೀಲ್ದಾರ ದಾಳಿಗೆ ಹೆದರಿ ಸುಮಾರು 20 ಲಕ್ಷ ರೂಪಾಯಿಗಳ ನೋಟುಗಳನ್ನೇ ಸುಟ್ಟು ಹಾಕಿದ್ದಾರೆ!

ಈ ಘಟನೆ ನಡೆದಿರುವುದು ರಾಜಸ್ಥಾನದ ಸಿರೋಹಿಯಲ್ಲಿ. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಗೆ ಇಲ್ಲಿಯ ತಹಶೀಲ್ದಾರ್ ಇಂಥ ಕೃತ್ಯ ಎಸಗಿದ್ದಾರೆ. ಅತ್ತ ಅಧಿಕಾರಿಗಳು ತನ್ನ ಮನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಲೇ ಅಯ್ಯಯ್ಯೋ ಎಂದು ಸತ್ತೆನೋ, ಎದ್ದೆನೋ ಎಂದುಕೊಂಡು ಎಲ್ಲ ನೋಟುಗಳನ್ನು ಸುಟ್ಟುಹಾಕಿದ್ದಾರೆ!

ತಹಶೀಲ್ದಾರ್ ಕಲ್ಪೇಶ್ ಕುಮಾರ್ ಜೈನ್ ಇಂಥದ್ದೊಂದು ಕೃತ್ಯ ಎಸಗಿದವರು. ಭೂಮಿ ದಾಖಲೆ ಬದಲಾವಣೆಗೆ ಒಂದಕ್ಕೆ ಸಂಬಂಧಿಸಿದಂತೆ ಇವರು ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು.

ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು, ಇದೇ ರೀತಿ ಅಕ್ರಮವಾಗಿ ಕೂಡಿಟ್ಟಿದ್ದ 20 ಲಕ್ಷ ರೂಪಾಯಿ ಮನೆಯೊಳಕ್ಕೆ ಇತ್ತು. ಪೊಲೀಸರು ದಾಳಿ ಮಾಡಿದರೆ ತನ್ನ ಸಂಪೂರ್ಣ ಕೃತ್ಯ ಬಯಲಾಗುವುದು ಎನ್ನುವ ಉದ್ದೇಶದಿಂದ ಮನೆಯೊಳಗೆ ಬೀಗ ಹಾಕಿಕೊಂಡು ಸುಮಾರು20 ಲಕ್ಷದ ಹಣದ ನೋಟನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ. ಸದ್ಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.