ನ್ಯೂಸ್

ಆಂಧ್ರದ ಟಿಡಿಪಿ ನಾಯಕನ ಭೀಕರ ಹತ್ಯೆ: ಗಂಟಲು ಸೀಳಿ ಕೊಲೆ

suchetana

ಗುಂಟೂರು: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಟಿಡಿಪಿ ನಾಯಕನ ಭೀಕರ ಹತ್ಯೆಯಾಗಿರುವ ಘಟನೆ ನಿನ್ನೆ ಭಾನುವಾರ ರಾತ್ರಿ ನಡೆದಿದೆ.

ಗುಂಟೂರು ಜಿಲ್ಲೆಯ ಪಲ್ನಾಡಿಯಲ್ಲಿ ತೆಲುಗುದೇಶಂ ಪಕ್ಷದ ಮುಖಂಡ ಹಾಗೂ ದಾಚೆಪಲ್ಲಿ ಮಂಡಲದ ಮಾಜಿ ಸರ್ಪಂಚ್ ಪುರನ್‌ಸೆಟ್ಟಿ ಅಂಕುಲು ಕೊಲೆಯಾದವರು. ಇವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ.

ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಈ ಹತ್ಯೆ ಹಿಂದೆ ರಾಜಕೀಯ ವೈಷಮ್ಯ ಇದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಸಬ್‌ ಇನ್ಸ್‌ಪೆಕ್ಟರ್‌ ನಾಜಿರೆಡ್ಡಿಯವರು, ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ದಾಚೆಪಲ್ಲಿ ಅವರನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದಕ್ಕೆ ಎಳೆದೊಯ್ದಿರುವ ದುಷ್ಕರ್ಮಿಗಳು ಅವರ ಗಂಟಲನ್ನು ಸೀಳಿ ಕೊಲೆ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಈ ಕೊಲೆಯೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಇವರನ್ನು ವೈಎಸ್‌ಆರ್‌ಸಿಪಿ ಪಕ್ಷದ ನಾಯಕರೇ ಕೊಲೆ ಮಾಡಿದ್ದಾರೆ ಎಂದು ಟಿಡಿಪಿ ಮುಖಂಡರು ಆರೋಪಿಸುತ್ತಿದ್ದಾರೆ.