ನ್ಯೂಸ್

ಬ್ಯೂಟಿ ಕಿಂಗ್‌, ಮದ್ಯಪ್ರಿಯ, ಪ್ರಶಸ್ತಿಗಳ ಸರದಾರ 21 ಕೋಟಿ ರೂ. ಬೆಲೆಯ ಸುಲ್ತಾನ್‌ ಹೃದಯಾಘಾತದಿಂದ ಸಾವು

ಚಂಡೀಗಢ: ಇತ್ತೀಚೆಗೆ ಸುಲ್ತಾನ್‌ ಹೆಸರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಚಾರ ಗಳಿಸಿತ್ತು. ಕಪ್ಪು ಬಣ್ಣದ ಮಿರಿಮಿರಿ ಮಿಂಚುವ, ಅಜಾನುಬಾಹು ಸುಲ್ತಾನ್‌ನನ್ನು ನೋಡಿ ವಾವ್‌ ಎಂದು ಉದ್ಗರಿಸಿದವರೇ ಎಲ್ಲಾ. ಆದರೆ ಈ ಸುಲ್ತಾನ್‌ ಈಗ ಇಹಲೋಕ ತ್ಯಜಿಸಿದೆ!

ಅಂದಹಾಗೆ ಸುಲ್ತಾನ್‌ ಜೋಟೆ ಕೋಣದ ಹೆಸರು. ಹರಿಯಾಣದ ಈ ಸುಲ್ತಾನ್‌ ಇಷ್ಟೊಂದು ಪ್ರಸಿದ್ಧಿಗೆ ಬರಲು ಅದರ ಬೆಲೆ ಕಾರಣ. ಬರೋಬ್ಬರಿ 21 ಕೋಟಿ ಮೌಲ್ಯದ ಕೋಣ ಇದಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದೆ. 6 ಅಡಿ ಉದ್ದ ಮತ್ತು ಒಂದು ಟನ್ ತೂಕದ ಈ ಕೋಣದ ಮಾಲೀಕ ಹರಿಯಾಣದ ನರೇಶ್.

ತನ್ನ ಸೌಂದರ್ಯದಿಂದ ಹಲವಾರು ಪ್ರಶಸ್ತಿಗಳನ್ನು ಸುಲ್ತಾನ್‌ ಪಡೆದುಕೊಂಡಿತ್ತು. 2013 ರಲ್ಲಿ ನಡೆದ ಅಖಿಲ ಭಾರತ ಎನಿಮಲ್ ಬ್ಯೂಟಿ ಸ್ಪರ್ಧೆಯಲ್ಲಿ ಹರಿಯಾಣ ಸೂಪರ್ ಬುಲ್, ಜಜ್ಜಾರ್, ಕರ್ನಾಲ್ ಮತ್ತು ಹಿಸಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಇದಕ್ಕೆ ಸಿಕ್ಕಿದ್ದವು.

ಇದಕ್ಕೆ ಪ್ರತಿದಿನ 10 ಲೀಟರ್ ಹಾಲು, 20 ಕೆಜಿ ಕ್ಯಾರೆಟ್, 10 ಕೆಜಿ ಸೊಪ್ಪು ಮತ್ತು 12 ಕೆಜಿ ಒಣಹುಲ್ಲು ಬೇಕಿತ್ತು. ಸಂಜೆಯ ವೇಳೆ ವಿಸ್ಕಿ, ವೈನ್‌ ಕೂಡ ಅಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿತ್ತು. ಇದಕ್ಕೆ 21 ಕೋಟಿ ರೂ. ಕೊಡುವುದಾಗಿ ಪಶು ಮೇಳದಲ್ಲಿ ರಾಜಸ್ಥಾನದ ವ್ಯಾಪಾರಿಯೊಬ್ಬ ಕೇಳಿದ್ದರೂ ನರೇಶ್ ಅದಕ್ಕೆ ಒಪ್ಪಿರಲಿಲ್ಲ. ಇದು ನನ್ನ ಮಗು. ಎಷ್ಟು ಕೋಟಿ ಕೊಟ್ಟರೂ ನಾನು ಅದನ್ನು ಕೊಡುವುದಿಲ್ಲ ಎಂದಿದ್ದರು. ಆದರೆ ಇದೀಗ ಕೋಣ ಮೃತಪಟ್ಟಿದ್ದು, ಮಾಲೀಕ ನರೇಶ್‌ ಕಣ್ಣೀರಿಡುತ್ತಿದ್ದಾರೆ.