ಕೊಲೊಂಬೊ: ಶ್ರೀಲಂಕಾದಲ್ಲಿ ಇನ್ನು ಜಾನುವಾರುಗಳ ಹತ್ಯೆ ಮಾಡುವುದು ಅಪರಾಧ. ಗೋಹತ್ಯೆ ನಿಷೇಧಿಸುವ ಪ್ರಸ್ತಾವಕ್ಕೆ ಶ್ರೀಲಂಕಾ ಸರ್ಕಾರ ಒಪ್ಪಿಗೆ ನೀಡಿದೆ.
ಬೌದ್ಧ ಧರ್ಮೀಯರೇ ಅಧಿಕವಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಗೋಹತ್ಯೆ ನಿಷೇಧದ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಧಾನಿ ಮಹಿಂದ ರಾಜಪಕ್ಸೆ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಶ್ರೀಲಂಕಾ ಸಂಪುಟದ ವಕ್ತಾರ ಕೆಹೆಲಿಯಾ ರಾಮ್‌ಬುಕ್‌ವೆಲ್ಲಾ ತಿಳಿಸಿದ್ದಾರೆ. ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಕುರಿತು ಪ್ರಧಾನಿ ಹಿಂದೆಯೇ ಪ್ರಸ್ತಾಪಿಸಿದ್ದರು. ಅದನ್ನು ಲಂಕಾದ ಆಡಳಿತಾರೂಢ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ಸಂಸದೀಯ ಸಮಿತಿಯು ಸೆ.8ರಂದು ಅಂಗೀಕರಿಸಿತ್ತು. ಅದಕ್ಕೀಗ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಶೀಘ್ರವೇ ಸಂಪುಟವು ಪ್ರಾಣಿಗಳ ಕಾಯ್ದೆಗೆ ತಿದ್ದುಪಡಿ ತರುವ ಮತ್ತು ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಕೆಲಸವನ್ನು ಮಾಡಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸಚಿವ ಕೆಹೆಲಿಯಾ ರಂಬುಕ್‌ವೆಲ್ಲಾ ತಿಳಿಸಿದ್ದಾರೆ.
ತತ್‌ಕ್ಷಣವೇ ಪ್ರಾಣಿಗಳ ಕಾಯ್ದೆ, ಜಾನುವಾರು ಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕಾನೂನುಗಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.
ಶ್ರೀಲಂಕಾ ಕೃಷಿ ಪ್ರಧಾನ ದೇಶ. ದೇಶದಲ್ಲಿ ಗೋಹತ್ಯೆ ಹೆಚ್ಚಾದ ಬಳಿಕ ಕೃಷಿ ಚಟುವಟಿಕೆಗಳಿಗೆ ಗೋವುಗಳ ಕೊರತೆ ಕಾಣಿಸುತ್ತಿದೆ. ಜತೆಗೆ ಗೋಹತ್ಯೆಯಿಂದಾಗಿ ಜನರ ಇತರೆ ಆದಾಯದ ಮೂಲ ಸ್ಥಗಿತಗೊಂಡಿದೆ. ಹೀಗಾಗಿ ಗೋಹತ್ಯೆಗೆ ನಿಷೇಧ ಹೇರಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಜತೆಗೆ ಕೃಷಿ ಚಟುವಟಿಕೆಗೆ ಬಳಕೆ ಮಾಡಲಾಗದ ವಯಸ್ಸಾದ ಗೋವುಗಳ ನಿರ್ವಹಣೆಗೆ ಸರ್ಕಾರವೇ ವಿಶೇಷ ಯೋಜನೆ ರೂಪಿಸಲಿದೆ.
ಆದರೆ ಗೋಮಾಂಸ ಸೇವನೆ ಮಾಡುವವರ ಅನುಕೂಲಕ್ಕಾಗಿ ಗೋಮಾಂಸವನ್ನು ಆಮದು ಮಾಡಿಕೊಂಡು ರಿಯಾಯಿತಿ ದರದಲ್ಲಿ ಮಾರಾಟ ಮಾಡಲೂ ಸಂಪುಟ ನಿರ್ಧರಿಸಿದೆ. ಶ್ರೀಲಂಕಾದಲ್ಲಿ 2018ರಲ್ಲಿ ಒಂದು ಸಾವಿರ ಟನ್ ಹಾಗೂ 2019ರಲ್ಲಿ 29 ಸಾವಿರ ಟನ್ ದನದ ಮಾಂಸ ಉತ್ಪಾದನೆಯಾಗಿತ್ತು ಎಂದು ವರದಿಗಳು ಹೇಳುತ್ತಿವೆ.
ಆದರೆ, ಲಂಕಾ ಸರ್ಕಾರದ ಈ ನಿರ್ಧಾರಕ್ಕೆ ವಿರೋಧವೂ ವ್ಯಕ್ತವಾಗಿದೆ. ದೇಶದಲ್ಲಿರುವ ಬೌದ್ಧ ಸಮುದಾಯವನ್ನು ತುಷ್ಟೀಕರಿಸುವ ಪ್ರಯತ್ನವಾಗಿದ್ದು ಇದರಿಂದ ಇಲ್ಲಿನ ಹೈನೋದ್ಯಮದಾರರಿಗೆ ಹೊಡೆತ ಬೀಳಲಿದೆ ಎಂಬ ಆಕ್ಷೇಪ ಕೇಳಿಬರುತ್ತಿದೆ.
2012ರ ಜನಗಣತಿ ಪ್ರಕಾರ ಲಂಕಾದ 2 ಕೋಟಿ ಜನಸಂಖ್ಯೆ ಪೈಕಿ ಶೇ.70.10ರಷ್ಟು ಬೌದ್ಧ ಧರ್ಮೀಯರು, ಶೇ.12.58 ಹಿಂದೂಗಳು, ಶೇ.9.66 ಮುಸ್ಲಿಮರು, ಶೇ.7.62ರಷ್ಟುಕ್ರೈಸ್ತರು ಮತ್ತು ಶೇ.0.03ರಷ್ಟುಇತರರು ಇದ್ದಾರೆ.
ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಮಾತ್ರ ಗೋಹತ್ಯೆಗೆ ನಿಷೇಧವಿದೆ. ಕರ್ನಾಟಕ ಇನ್ನೂ ಗೋಹತ್ಯೆ ನಿಷೇಧಕ್ಕೆ ಚಿಂತನೆ ನಡೆಸುತ್ತಿದೆ. (ಏಜೆನ್ಸೀಸ್)