ನ್ಯೂಸ್

ಸೋನಿಯಾ ಗಾಂಧಿಗೆ ಮಾತೃವಿಯೋಗ: ಕುಟುಂಬ ಸಹಿತ ವಿದೇಶ ಪ್ರವಾಸದಲ್ಲಿರುವಾಗಲೇ ಬಂದ ಸಾವಿನ ಸುದ್ದಿ

ನವದೆಹಲಿ: ಸೋನಿಯಾ ಗಾಂಧಿ ಅವರ ತಾಯಿ ಪಾವ್ಲಾ ​ಮೈನೋ ಇಟಲಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇದೇ 27ರಂದು ಅವರು ನಿಧನರಾಗಿದ್ದು, ನಿನ್ನೆ (ಮಂಗಳವಾರ) ಅಂತಿಮ ವಿಧಿವಿಧಾನ ಮುಗಿದಿರುವುದಾಗಿ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಸದ್ಯ ಸೋನಿಯಾಗಾಂಧಿ ಅವರು ತಮ್ಮ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್​ ಜತೆ ವಿದೇಶದಲ್ಲಿದ್ದಾರೆ. ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳುತ್ತಿರುವುದಾಗಿ ಪಕ್ಷದ ಮೂಲಗಳು ಹೇಳಿದ್ದವು. ಆದರೆ ಅವರು ಯಾವ ದೇಶದಲ್ಲಿ ಇದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲಿಲ್ಲ.

ಇದೇ ವೇಳೆ ಸೋನಿಯಾ ಅವರಿಗೆ ಮಾತೃವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಸೋನಿಯಾ ಅವರು, ಆಗಸ್ಟ್​ 23ರಂದು ಭೇಟಿಯಾಗಿ ಹೋಗಿದ್ದರು ಎನ್ನಲಾಗಿದೆ.

ಆಗಸ್ಟ್​ 28ರಂದು ನಡೆದ ಕಾಂಗ್ರೆಸ್​​ ಕಾರ್ಯಕಾರಣಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ವಿದೇಶದಿಂದಲೇ ಆನ್​ಲೈನ್​ ಮೂಲಕ ಸೋನಿಯಾ, ರಾಹುಲ್​ ಹಾಗೂ ಪ್ರಿಯಾಂಕಾ ಭಾಗವಹಿಸಿದ್ದರು. ಅಂದಿನ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಚುನಾವಣಾ ದಿನಾಂಕಕ್ಕೆ ಅನುಮೋದನೆ ನೀಡಲಾಗಿತ್ತು. ಸೆಪ್ಟೆಂಬರ್​ 4ರಂದು ದೆಹಲಿಯಲ್ಲಿ ಕಾಂಗ್ರೆಸ್​ ಸಮಾವೇಶ ಆಯೋಜಿಸಲಾಗಿದ್ದು, ಅಷ್ಟರ ಒಳಗೆ ಸೋನಿಯಾ ಕುಟುಂಬ ದೆಹಲಿಗೆ ವಾಪಸ್​ ಆಗಬಹುದು ಎನ್ನಲಾಗಿದೆ. (ಏಜೆನ್ಸೀಸ್​)