ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸಂಬಂಧ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಯಲಯದ (ಇ.ಡಿ) ಮುಂದೆ ಕೊನೆಗೂ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಜರು ಆಗಲಿದ್ದಾರೆ. ಇಡಿ ಕಚೇರಿಯತ್ತ ಸೋನಿಯಾ ಹೊರಟಿದ್ದು, ಮಗಳು ಪ್ರಿಯಾಂಕಾ ವಾಧ್ರಾ ತಾಯಿಯ ಜತೆಯಲ್ಲಿ ಬಂದಿದ್ದಾರೆ.
ಈ ಹಿಂದೆ, ಇ.ಡಿ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ ತಕ್ಷಣವೇ ಸೋನಿಯಾ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ವಿಚಾರಣೆಗೆ ಬರುವಂತೆ ಮತ್ತೊಮ್ಮೆ ಇಡಿ ನಿರ್ದೇಶಿಸಿದ ನಂತರ ಕೋವಿಡ್ ತೀವ್ರ ಸ್ವರೂಪ ಪಡೆದು ಸೋನಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ನಂತರ ಶ್ವಾಸನಾಳ ಸೋಂಕು ಉಂಟಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕಿದೆ ಎಂದು ವೈದ್ಯರು ತಿಳಿಸಿದ್ದರು. ಕೊನೆಗೂ ಜೂನ್ ಮಧ್ಯ ಭಾಗದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಸೋನಿಯಾ ಅವರು, ವಿಚಾರಣೆಗೆ ಹಾಜರಾಗಲು ಇನ್ನಷ್ಟು ಕಾಲಾವಕಾಶ ಕೇಳಿದ್ದರು.
ಜುಲೈ 21ರ ಮುಹೂರ್ತವನ್ನು ಇ.ಡಿ. ಫಿಕ್ಸ್ ಮಾಡಿತ್ತು. ಇದಾಗಲೇ ಸಂಸದ ರಾಹುಲ್ ಗಾಂಧಿಯವರು ಇ.ಡಿಯಿಂದ ಹಲವು ಬಾರಿ ವಿಚಾರಣೆ ಎದುರಿಸಿದ್ದು, ಇದೇ ಮೊದಲ ಬಾರಿಗೆ ಸೋನಿಯಾ ಇ.ಡಿ. ಕಚೇರಿ ತಲುಪಿದ್ದಾರೆ. ಇ.ಡಿ. ನೋಟಿಸ್ ಜಾರಿ ಮಾಡಿದ ದಿನದಿಂದಲೂ ಇದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಕೂಡ ಅದು ಮುಂದುವರೆದಿದೆ. ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಕೈ ಕಾರ್ಯಕ್ರರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ನಡುವೆಯೇ ಸೋನಿಯಾ ಗಾಂಧಿಯವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಇ.ಡಿ ನೋಟಿಸ್ ಜಾರಿ ಮಾಡಿದ ದಿನದಿಂದಲೂ ಹಾಜರಾತಿಯನ್ನು ಮುಂದೂಡುತ್ತಾ ಬಂದಿರುವ ಸೋನಿಯಾ ಗಾಂಧಿ ಅವರಿಗೆ ಟಾಂಗ್ ನೀಡಲು ಎಂಬಂತೆ ಈ ವಿಡಿಯೋ ಅನ್ನು ಕೆಲವರು ವೈರಲ್ ಮಾಡಿದ್ದಾರೆ. ನಾನು ಇಂದಿರಾ ಗಾಂಧಿಯವರ ಸೊಸೆ, ಯಾವುದಕ್ಕೂ ಹೆದರುವವಳಲ್ಲ ಎಂದು ಕೋಪದಿಂದ ಸೋನಿಯಾ ಅವರು, ಹೇಳಿ ಸರ್ರನೆ ಹೋಗಿರುವ ವಿಡಿಯೋ ಇದಾಗಿದೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?
ಜವಾಹರಲಾಲ್ ನೆಹರು ಮತ್ತು ಇತರ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು ಇದರ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.
2010ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಯಂಗ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದ್ದರು. ಈ ಕಂಪೆನಿಯು ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್), ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಷೇರುಗಳನ್ನು ಖರೀದಿ ಮಾಡುವಲ್ಲಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದೆ. ಇದರಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ನೀಡಿದ್ದರು.
ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2 ಸಾವಿರ ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವು ರಾಹುಲ್ ಮತ್ತು ಸೋನಿಯಾ ಅವರಿಗೆ ನೋಟಿಸ್ ಜಾರಿ ಮಾಡಿ ಖುದ್ದು ಹಾಜರಿಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರಿಗೆ ಕರೊನಾ ಕಾಣಿಸಿಕೊಂಡಿದೆ. (ಏಜೆನ್ಸೀಸ್)