ನ್ಯೂಸ್

ಪೊಲೀಸ್​ ಠಾಣೆ ಕಾಯಲು ನಾಯಿಯ ಬದಲು ಹಾವುಗಳು! ಕೇರಳದಲ್ಲಿ ಹೀಗೊಂದು ಯಶಸ್ವಿ ಪ್ರಯೋಗ...

ಇಡುಕ್ಕಿ (ಕೇರಳ): ಹೆಚ್ಚಾಗಿ ಕಾವಲು ಕಾಯಲು ನಾಯಿಗಳನ್ನು ಸಾಕುವುದು ರೂಢಿ. ಅದರಲ್ಲಿಯೂ ಪೊಲೀಸ್​ ಇಲಾಖೆಯಲ್ಲಿ ನಾಯಿಗಳಿಗೆ ಭಾರಿ ಡಿಮಾಂಡ್​. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಪೊಲೀಸರು ಹಾಗೂ ಪೊಲೀಸ್​ ಠಾಣೆಯನ್ನು ಕಾಯಲು ನಾಯಿ ಬದಲಿಗೆ ಹಾವುಗಳ ಮೊರೆ ಹೋಗಲಾಗಿದೆ.

ಇಂಥದ್ದೊಂದು ಅಸಾಧ್ಯ ಘಟನೆ ನಡೆದಿರುವುದು ಯಾವುದೋ ದೇಶದಲ್ಲಿ ಅಂದುಕೊಳ್ಳಬೇಡಿ, ಇದು ನಮ್ಮ ದೇಶದಲ್ಲಿಯೇ ನಡೆದಿದ್ದು ಪಕ್ಕದ ರಾಜ್ಯ ಕೇರಳದ ಪೊಲೀಸರು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ರಕ್ಷಣೆಗೆ ಹಾವುಗಳನ್ನು ಪೊಲೀಸ್​ ಠಾಣೆ ಸುತ್ತಲೂ ಇಟ್ಟಿದ್ದಾರೆ!

ಕೇರಳದ ಇಡುಕ್ಕಿ ಸಂಪೂರ್ಣ ಅರಣ್ಯ ಪ್ರದೇಶದಿಂದ ಕೂಡಿದೆ. ಕೇರಳ- ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಇಲ್ಲಿಯ ಕುಂಬುಮೆಟ್ಟು ಪೊಲೀಸ್ ಠಾಣೆಯಲ್ಲಿ ವಿಪರೀತ ಮಂಗಗಳ ಕಾಟ. ಮಂಗಗಳು ಪೊಲೀಸರ ಮೇಲಷ್ಟೇ ಅಲ್ಲದೇ, ಪೊಲೀಸ್​ ಠಾಣೆಯ ಒಳಕ್ಕೂ ನುಗ್ಗಿ ಹಾನಿ ಮಾಡುತ್ತಿವೆ. ನಾಯಿಗಳಿಂದಲೂ ಈ ಕೋತಿಗಳನ್ನು ರಕ್ಷಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ಹಾವಿನ ನೆರವು ಪಡೆದಿದ್ದಾರೆ!

ಹಾಗೆಂದು ಇಲ್ಲಿರುವುದೇನೂ ನೈಜ ಹಾವಲ್ಲ, ಬದಲಿಗೆ ರಬ್ಬರ್​ ಹಾವುಗಳು! ಠಾಣೆಯ ಕಟ್ಟಡದ ಸುತ್ತಮುತ್ತ ರಬ್ಬರ್ ಹಾವುಗಳನ್ನು ಇಟ್ಟು ಕೋತಿಗಳು ಹೆದರಿ ಓಡುವಂತೆ ಮಾಡಲಾಗಿದೆ. ಇದರಿಂದ ಕೋತಿಗಳು ಕೂಡ ಹೆದರಿ ಠಾಣೆಯ ಸಹವಾಸವೇ ಬೇಡ ಎಂದು ಹತ್ತಿರ ಸುಳಿಯುತ್ತಿಲ್ಲ. ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ನೈಜ ಹಾವುಗಳನ್ನು ಹೋಲುವ ಚೀನಾ ನಿರ್ಮಿತ ರಬ್ಬರ್ ಹಾವುಗಳು ಪೊಲೀಸ್ ಠಾಣೆ ಕಟ್ಟಡದ ಗ್ರಿಲ್, ಸಮೀಪದ ಮರಗಳ ಕೊಂಬೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇಡಲಾಗಿದೆ. ಇವುಗಳನ್ನು ನಿಜವಾದ ಹಾವೆಂದೇ ನಂಬಿರುವ ಕೋತಿಗಳು ಠಾಣೆಯ ಬಳಿ ಬರುತ್ತಿಲ್ಲ ಎಂದು ಕುಂಬುಮೆಟ್ಟು ಸಬ್ ಇನ್ಸ್​​​​ಪೆಕ್ಟರ್ ಪಿ.ಕೆ. ಲಾಲಭಾಯ್ ಹೇಳಿದ್ದಾರೆ. (ಏಜೆನ್ಸೀಸ್​)