ನ್ಯೂಸ್

VIDEO: ಹಾರದ ಬದಲು ಹೆಬ್ಬಾವನ್ನು ಬದಲಿಸಿಕೊಂಡ ವಧು- ವರರು: ಅಬ್ಬಬ್ಬಾ ಎನ್ನೋ ವಿಡಿಯೋ ಇಲ್ಲಿದೆ ನೋಡಿ...

ಬೀಡ್​ (ಮಹಾರಾಷ್ಟ್ರ): ಬಹುತೇಕ ಯುವಕ- ಯುವತಿಯರಿಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗಬೇಕು ಎನ್ನುವ ಕನಸು ಇರುತ್ತದೆ. ಅದಕ್ಕಾಗಿ ಕೆಲವರು ಹಲವು ಸಾಹಸಮಯ ಸನ್ನಿವೇಶ ಸೃಷ್ಟಿಸಿ ಮದುವೆಯಾಗುವುದುಂಟು. ಆಕಾಶದಲ್ಲಿ, ಸಮುದ್ರದ ಒಳಗೆ, ವಿಮಾನದಲ್ಲಿ... ಹೀಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗಿ ಸುದ್ದಿಯಾಗುತ್ತಾರೆ. ಇಲ್ಲೊಬ್ಬ ವಧು-ವರರು ಮಾತ್ರ ಎಲ್ಲರೂ ಬೆಚ್ಚಿಬೀಳುವಂಥ ರೀತಿಯಲ್ಲಿ ಮದ್ವೆಯಾಗಿದ್ದಾರೆ.

ಅದೇನೆಂದರೆ ವಧು-ವರರು ಹಾರದ ಬದಲು ಹಾವು ಅದರಲ್ಲಿಯೂ ಹೆಬ್ಬಾವನ್ನು ಬದಲಿಸಿಕೊಂಡು ಮದುವೆಯಾಗಿದ್ದಾರೆ! ಇಂಥದ್ದೊಂದು ಘಟನೆ ನಡೆದಿರುವುದು ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ. 2019ರಲ್ಲಿ ನಡೆದಿರುವ ಈ ಮದುವೆಯ ಫೋಟೋ ಇದೀಗ ಮತ್ತೆ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೂರು ವರ್ಷಗಳ ಬಳಿಕ ಈ ಭಯಾನಕ ಮದುವೆಯ ವಿಡಿಯೋ ಹರಿಬಿಡಲಾಗಿದ್ದು, ನೋಡುಗರಲ್ಲಿ ಕುತೂಹಲ ಕೆರಳಿಸುತ್ತದೆ.

ಅಷ್ಟಕ್ಕೂ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದವರು ಸಾಮಾನ್ಯ ಜನರಲ್ಲ. ಅವರು ವಧು-ವರ ಇಬ್ಬರೂ ಅರಣ್ಯ ಇಲಾಖೆಯ ಸಿಬ್ಬಂದಿ. ಇವರಿಗೆ ಹಾವುಗಳೆಂದರೆ ಭಯವಿಲ್ಲ. ಆದ್ದರಿಂದ ಯಾವುದೇ ಅಳಕು ಇಲ್ಲದೇ ಹೆಬ್ಬಾವನ್ನು ಹಾರದ ಬದಲು ಕೊರಳಿಗೆ ಹಾಕಿಕೊಂಡಿದ್ದಾರೆ. ನಂತರ ಅದನ್ನು ಕಾಡಿಗೆ ಅದರ ಸ್ಥಾನಕ್ಕೆ ಬಿಡಲಾಗಿದೆ.

ವಾಸವಿ ನಾರಾಯಣನ್​ ಎಂಬುವರು ಟ್ವಿಟ್ಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. ಅದೀಗ ವೈರಲ್​ ಆಗುತ್ತಿದೆ. ನೀವೂ ನೋಡಿ ವಿಡಿಯೋ: