ನ್ಯೂಸ್

ಹಾವು ಬಂತು ಹಾವು... 10 ಸಾವಿರ ಮನೆಗಳ ವಿದ್ಯುತ್​ ಸ್ಥಗಿತ! ಕರೆಂಟ್​ ಇಲ್ಲದೇ ಜನರ ಪರದಾಟ

ಟೋಕಿಯೋ (ಜಪಾನ್​): ಒಂದು ಹಾವು ಸುಮಾರು 10 ಸಾವಿರ ಮನೆಗಳ ಕರೆಂಟ್​ ಸ್ಥಗಿತಗೊಳಿಸಿರುವ ಘಟನೆ ಟೋಕಿಯೋದಲ್ಲಿ ನಡೆದಿದೆ. ವಿದ್ಯುತ್‌ ಸಂಪರ್ಕ ಕಡಿತದಿಂದ ಸುಮಾರು 10 ಸಾವಿರ ಕುಟುಂಬಸ್ಥರು ಪರದಾಟ ನಡೆಸಿದ್ದಾರೆ.

ಆಗಿದ್ದೇನೆಂದರೆ, ಜಪಾನ್‌ನ ಫುಕುಶಿಮಾ ಪ್ರಿಫೆಕ್ಚರ್‌ನಲ್ಲಿರುವ ಕೊರಿಯಾಮಾ ತೊಹೊಕು ಎಲೆಕ್ಟ್ರಿಕ್ ಘಟಕದಿಂದ ಹಲವಾರು ಮನೆಗಳಿಗೆ ವಿದ್ಯುತ್​ ಪೂರೈಕೆ ಆಗುತ್ತದೆ. ಇದ್ದಕ್ಕಿದ್ದಂತೆಯೇ ಎಲ್ಲರ ಮನೆಯ ಪವರ್​ ಕಟ್​ ಆಗಿದೆ. ಸಿಬ್ಬಂದಿ ಎಷ್ಟೇ ಹುಡುಕಾಟ ನಡೆಸಿದರೂ, ಏನೂ ಕಾರಣ ತಿಳಿಯದೇ ಸುಸ್ತಾದರು.

ಕೊನೆಗೂ ಅಧಿಕಾರಿಗಳು ವಿದ್ಯುತ್‌ ಸ್ಥಗಿತಕ್ಕೆ ಕಾರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ವಿದ್ಯುತ್‌ ಸ್ಟೇಷನ್‌ಗೆ ಹೋದಾಗ ಅಲ್ಲಿನ ಯಂತ್ರೋಪಕರಣ ಪರಿಶೀಲನೆ ಮಾಡಿದಾಗ ಹಾವಿನ ಸುಟ್ಟ ಅವಶೇಷಗಳು ಪತ್ತೆಯಾಗಿವೆ. ಸ್ಟೇಷನ್​ ಒಳಗೆ ಹಾವು ನುಗ್ಗಿದ್ದರಿಂದ ಇಷ್ಟೆಲ್ಲಾ ಆವಾಂತರ ಆಗಿರುವುದು ತಿಳಿದಿದೆ.

ವಿದ್ಯುತ್‌ ತಂತಿ ತಗುಲಿ ಹಾವು ಸುಟ್ಟುಹೋಗಿದೆ. ಪರಿಣಾಮವಾಗಿ ಸ್ಟೇಷನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇದರಿಂದಾಗಿ ಸುಮಾರು 10 ಸಾವಿರ ಮನೆಗಳ ನಿವಾಸಿಗಳು ವಿದ್ಯುತ್‌ ಕಡಿತದಿಂದ ಸಮಸ್ಯೆ ಎದುರಿಸಬೇಕಾಯಿತು. ಒಂದು ಗಂಟೆಗೂ ಹೆಚ್ಚು ಕಾಲದ ಕಾರ್ಯಾಚರಣೆ ನಂತರ ಎಲ್ಲರೂ ಮರಳಿ ವಿದ್ಯುತ್​ ಪಡೆದರು.