ನ್ಯೂಸ್

ಪ್ರಧಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್​​: ₹54 ಲಕ್ಷ ಪರಿಹಾರಕ್ಕೆ ಆದೇಶಿಸಿದ ಹೈಕೋರ್ಟ್​

ಸಿಂಗಪುರ: ಪ್ರಧಾನಿ ವಿರುದ್ಧ ಅವಹೇಳನಕಾರಿ ಟ್ವೀಟ್​ ಮಾಡಿರುವ ಬ್ಲಾಗರ್​ ಒಬ್ಬರಿಗೆ 1ಲಕ್ಷ ರೂಪಾಯಿ ಸಿಂಗಪುರ ಡಾಲರ್​ (ಅಂದರೆ ಸುಮಾರು 54 ಲಕ್ಷ ರೂಪಾಯಿ) ದಂಡ ವಿಧಿಸಿ ಸಿಂಗಪುರ ಕೋರ್ಟ್​ ಆದೇಶಿಸಿದೆ, ಈ ಹಣವನ್ನು ಪರಿಹಾರದ ರೂಪದಲ್ಲಿ ಪ್ರಧಾನಿಯವರಿಗೆ ನೀಡುವಂತೆ ಕೋರ್ಟ್​ ಹೇಳಿದೆ.

2018ರ ಕೇಸ್​ ಇದಾಗಿದೆ. ಪ್ರಧಾನಿ ಲೀ ಸೀನ್ ಲೂಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ಆರ್ಥಿಕ ಸಲಹೆಗಾರ ಲಿಯಾಂಗ್ ಶೆ ಹಿಯಾನ್ ಅವರಿಗೆ ಈ ಭಾರಿ ದಂಡ ವಿಧಿಸಲಾಗಿದೆ. ಇವರ ವಿರುದ್ಧ ಪ್ರಧಾನಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

ಮಲೇಷ್ಯಾದ ರಾಜ್ಯ ನಿಧಿಯಲ್ಲಿ ನಡೆದ ಹಣಕಾಸಿನ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯನ್ನು ಉಲ್ಲೇಖಿಸಿ ಲಿಯಾಂಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದರ ವಿರುದ್ಧ ಪ್ರಧಾನಿ ಕೇಸ್​ ದಾಖಲು ಮಾಡಿದ್ದರು.

ಈ ಪೋಸ್ಟ್​ನಿಂದ ತಮಗೆ ಎಡವಟ್ಟು ಆಗುತ್ತಿದೆ ಎಂದು ತಿಳಿದ ತಕ್ಷಣ ಮೂರು ದಿನಗಳ ಬಳಿಕ ಲಿಯಾಂಗ್ ಫೇಸ್‌ಬುಕ್ ಪೋಸ್ಟ್ ಅಳಿಸಿ ಹಾಕಿದ್ದರು. ಆದರೆ ಅದರ ಸ್ಕ್ರೀನ್​ಷಾಟ್​ ಇಟ್ಟುಕೊಂಡಿದ್ದ ಪ್ರಧಾನಿ ಕೇಸ್​ ದಾಖಲು ಮಾಡಿದ್ದರು.

ಲಿಯಾಂಗ್ ಹಂಚಿಕೊಂಡ ಸುದ್ದಿ ಪ್ರಧಾನಿ ಅವರು ಗಂಭೀರ ಹಾಗೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸೂಚಿಸುವಂತಿದೆ ಎಂದ ನ್ಯಾಯಮೂರ್ತಿ ಎದಿತ್ ಅಬ್ದುಲ್ಲಾ ಅವರು, ದಂಡ ವಿಧಿಸಿದ್ದಾರೆ. ಲಿಯಾಂಗ್ ಅವರ ಪೋಸ್ಟ್‌ಗೆ ಒಟ್ಟು 45 ಜನರು ಪ್ರತಿಕ್ರಿಯಿಸಿದ್ದರು.