ನ್ಯೂಸ್

ಆರ್ಮಿ ಮೇಜರ್‌ ಜತೆ ನ್ಯಾಯಾಧೀಶೆ ಮದುವೆ: ಜಾಲತಾಣದ ತುಂಬ ಇದರದ್ದೇ ಚರ್ಚೆ- ಯಾಕೆ ಗೊತ್ತಾ?

ಭೋಪಾಲ್: ಈ ಫೋಟೋದಲ್ಲಿ ಪರಸ್ಪರ ಹಾರ ಬದಲಿಸಿಕೊಳ್ಳುತ್ತಿರುವ ಜೋಡಿಯ ಹೆಸರು ಶಿವಾಂಗಿ ಜೋಶಿ ಮತ್ತು ಅನಿಕೇತ್ ಚತುರ್ವೇದಿ. ಶಿವಾಂಗಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನ್ಯಾಯಾಧೀಶೆಯಾಗಿದ್ದರೆ, ಅನಿಕೇತ್‌ ಆರ್ಮಿ ಮೇಜರ್‌.

ಇವರ ಮದುವೆಯ ವಿಷಯ ಇದೀಗ ಜಾಲತಾಣದಲ್ಲಿ ಭಾರಿ ಪ್ರಚಾರ ಗಳಿಸಿದೆ. ಇವರ ಮದುವೆಯ ಬಗ್ಗೆ ಓದಿದವರು ಭೇಷ್‌ ಭೇಷ್‌ ಎನ್ನುತ್ತಿದ್ದಾರೆ. ಎಲ್ಲರಿಗೂ ಇವರು ಮಾದರಿ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ? ಇವರು ಮದುವೆಗಾಗಿ ಖರ್ಚು ಮಾಡಿದ್ದು ಕೇವಲ 500 ರೂಪಾಯಿ!

ಭೋಪಾಲ್ ನಿವಾಸಿಗಳಾಗಿರುವ ಇವರು, ಯಾವುದೇ ಆಡಂಬರವಿಲ್ಲದೇ ಮದುವೆಯಾಗುವ ಮೂಲಕ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದಲೇ ಕುಟುಂಬಸ್ಥರ ಅನುಮತಿ ಪಡೆದು ಜಡ್ಜ್ ಮುಂದೆಯೇ ಕೆಲವು ಮಂದಿ ಕುಟುಂಬಸ್ಥರ ಸಮ್ಮುಖದಲ್ಲಿ ಕೋರ್ಟ್‍ನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಮದುವೆಯಲ್ಲಿ ಅತಿಯಾದ ಖರ್ಚು ಮಾಡುವುದರಿಂದ ಹುಡುಗಿಯ ಕುಟುಂಬಕ್ಕೆ ಹೊರೆಯಾಗುವುದಲ್ಲದೆ, ಹಣದ ದುರುಪಯೋಗಕ್ಕೂ ಕಾರಣವಾಗುತ್ತದೆ. ಹೀಗಾಗಿ ಸರಳವಾಗಿ ಮದುವೆಯಾಗುವ ಮೂಲಕವಾಗಿ ಸಮಾಜಕ್ಕೆ ಸಂದೇಶವನ್ನು ಕೊಡಲು ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ. ಅನಿಕೇತ್ ಅವರು ಲಡಾಖ್‍ನಲ್ಲಿ ಭಾರತೀಯ ಸೇನೆಯಲ್ಲಿದ್ದಾರೆ. ಶಿವಾಂಗಿ ಸಿಟಿ ಮೆಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಎರಡು ವರ್ಷಗಳ ಹಿಂದೆಯೇ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದರು. ಆದರೆ ಕರೊನಾದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಇವರು ಸರಳವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ.