ನ್ಯೂಸ್

ಡಿಜಿಪಿಯ ಆದೇಶವನ್ನೇ ಉಲ್ಲಂಘಿಸಿ ಪಿಎಫ್​ಐ ಮೇಲಿನ 1600 ಕೇಸ್​ ವಾಪಸ್​ ಮಾಡಿದ್ದ ಸಿದ್ದರಾಮಯ್ಯ?

ಬೆಂಗಳೂರು: ಭಾರತವನ್ನು ಭಯೋತ್ಪಾದನಾ ದೇಶವನ್ನಾಗಿ, ಹಲವಾರು ಗಣ್ಯರ ಹತ್ಯೆ ಮಾಡುವುದೂ ಸೇರಿದಂತೆ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿರುವ ಅತ್ಯಂತ ಗಂಭೀರ ಆರೋಪ ಹೊತ್ತ ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್ಐ) ಸೇರಿದಂತೆ ಅದರ 8 ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ಇದಾಗಲೇ ನಿಷೇಧಿಸಿದೆ. ಈ ಸಂಘಟನೆಗಳ ವಿರುದ್ಧ ಭಯಾನಕ ಸಾಕ್ಷ್ಯಾಧಾರಗಳು ತನಿಖಾಧಿಕಾರಿಗಳಿಗೆ ಸಿಗುತ್ತಿರುವ ನಡುವೆಯೇ ಸಚಿವ ಆರ್​. ಅಶೋಕ್​ ಸ್ಫೋಟಕ ಮಾಹಿತಿಯೊಂದನ್ನು ಇಂದು ಹೇಳಿದ್ದಾರೆ.

ಅದೇನೆಂದರೆ, ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಆದೇಶವನ್ನೇ ಉಲ್ಲಂಘಿಸಿ, ಅವರ ಮಾತಿಗೂ ಕಿಮ್ಮತ್ತು ಕೊಡದೇ ಪಿಎಫ್​ಐ ಕಾರ್ಯಕರ್ತರ ಮೇಲಿದ್ದ 1600 ಕೇಸುಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯನವರು ವಾಪಸ್​ ಪಡೆದುಕೊಂಡಿದ್ದರು ಎಂಬ ಅಂಶವನ್ನು ಅಶೋಕ್​ ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಪಿಎಫ್​ಐ ನಿಷೇಧಿಸುವಂತೆ ನಾನೇ ಒತ್ತಾಯಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅಸಲಿಗೆ ಖುದ್ದು ಡಿಜಿಪಿಯವರ ಮಾತನ್ನು ಮೀರಿ ಅವರೇ 1600 ಕೇಸುಗಳನ್ನು ವಾಪಸ್​ ಪಡೆದುಕೊಂಡಿದ್ದರು' ಎಂದು ಆರೋಪಿಸಿದ್ದಾರೆ.

‘ಸಿದ್ದರಾಮಯ್ಯ ಪಿಎಫ್ಐ ಭಾಗ್ಯ’ ಹೆಸರಿನಲ್ಲಿ ಭಿತ್ತಿಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಹಿಂದೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದು ಅದರಲ್ಲಿ 'ಪಿಎಫ್ಐ ಕಾರ್ಯಕರ್ತರು ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ಪಡೆಯಬೇಕು' ಎಂದು ಮನವಿ ಮಾಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದೆಂದು ಅಂದಿನ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸರ್ಕಾರಕ್ಕೆ ಸಲಹೆ ನೀಡಿದ್ದರು. ಕಾನೂನು ಇಲಾಖೆ ಕೂಡಾ ವರದಿ ನೀಡಿತ್ತು. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಅಂದಿನ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಲ್ ಕೂಡ ಹೇಳಿದ್ದರು. ಆದರೆ ಸಿದ್ದರಾಮಯ್ಯ ಎಲ್ಲಾ ಕೇಸ್​ಗಳನ್ನು ಅಂದು ವಾಪಸ್​ ಪಡೆದು ಈಗ ನಾನೇ ನಿಷೇಧಿಸಲು ಹೇಳಿದ್ದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

‘ಕೊಡಗು, ಮೈಸೂರು, ಮಂಗಳೂರಿನಲ್ಲಿ ಪಿಎಫ್ಐನವರಿಗೆ ತರಬೇತಿ ನೀಡಲಾಗಿದೆ. ಕೇಸ್ ಆಗದ ರೀತಿಯಲ್ಲಿ ಹೇಗೆ ಹತ್ಯೆ ಮಾಡಬೇಕು, ಬೈಕ್​ನಲ್ಲಿ ಹೋಗುವಾಗ ಹೇಗೆ ರುಂಡ ಕಡಿಯಬೇಕು ಎಂದು ಇವರು ತರಬೇತಿ ನೀಡಿರುವುದು ಬಹಿರಂಗಗೊಂಡಿದೆ. ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಎಂದೂ ತರಬೇತಿ ನೀಡಲಾಗಿದೆ. ಇಂಥವರ ಕೇಸ್​ಗಳನ್ನು ವಾಪಸ್​ ಪಡೆದು ಈಗ ಸಿದ್ದರಾಮಯ್ಯ ನಿಷೇಧಿಸಲು ನಾವೇ ಹೇಳಿದ್ದು ಎಂದು ಹೇಳಿಕೊಳುತ್ತಾರೆ. ಅವರಿಗೆ ನಾಚಿಕೆಯಾಗಬೇಕು' ಎಂದು ಅಶೋಕ್​ ಹೇಳಿದರು.

ಸಿದ್ದರಾಮಯ್ಯನವರು ಕೇಸ್​ ವಾಪಸ್ ಪಡೆದಿದ್ದರ ಕುರಿತು ಸಿದ್ದರಾಮಯ್ಯಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡ ತಿರುಗೇಟು ನೀಡಿದ್ದಾರೆ. ಆರ್​ಎಸ್​ಎಸ್​ ಬ್ಯಾನ್​ ಮಾಡಿ ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಆದರೆ ಹರಕು ಬಾಯಿಯ ಸಿದ್ದರಾಮಯ್ಯ ಏನೇನೋ ಮಾತಾಡ್ತಾರೆ. ಅವರು ಸಿಎಂ ಆಗಿದ್ದಾಗ ಪಿಎಫ್ಐ ಕಾರ್ಯಕರ್ತರ ಮೇಲಿದ್ದ ಕೇಸ್ ವಾಪಸ್ ಪಡೆದಿದ್ಯಾಕೆ..? ಆರ್​ಎಸ್​ಎಸ್​ ವಿರುದ್ಧ ದಾಖಲೆ ಇದರೆ ರಿಲೀಸ್​ ಮಾಡಲಿ' ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)