ನ್ಯೂಸ್

ಸೂಪರ್‌ಮಾರ್ಕೆಟ್‌ಗೆ ನುಗ್ಗಿದ ಬಂದೂಕುಧಾರಿಗಳಿಂದ 10 ಮಂದಿ ಹತ್ಯೆ- ನಡುರಾತ್ರಿ ಭೀಕರ ಕೃತ್ಯ

suchetana

ಕೊಲಾರಾಡೊ (ಅಮೆರಿಕ): ಅಮೆರಿಕದ ಕೊಲಾರಾಡೊ ಪ್ರದೇಶದ ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಬಂದೂಕಿಧಾರಿಗಳು ಕನಿಷ್ಠ 10 ಮಂದಿಯನ್ನು ಹತ್ಯೆ ಮಾಡಿರುವ ಘಟನೆ ನಿನ್ನೆ ನಡುರಾತ್ರಿ ನಡೆದಿದೆ.

ಬೋಲ್ಡರ್‌ನ ಕಿಂಗ್ ಸೂಪರ್‌ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಶಂಕಿತನಿಗೆ ಸಹ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟವರ ಹೆಸರುಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಬೇಕಿದೆ ಎಂದು ಬೌಲ್ಡರ್ ಕೌಂಟಿ ಜಿಲ್ಲಾ ಅಟೊರ್ನಿ ಮೈಕೆಲ್ ಡೌಘರ್ಟಿ ತಿಳಿಸಿದ್ದಾರೆ.

ಘಟನೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಆರೋಪಿಯನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.