ಚೆನ್ನೈ: ಅಕ್ರಮ ಆಸ್ತಿ ಗಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿ ನಂತರ ಬಿಡುಗಡೆ ಹೊಂದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ವಿ.ಕೆ ಶಶಿಕಲಾ ಅಚ್ಚರಿ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರುತ್ತಾರೆ ಎಂಬ ಅನಿಸಿಕೆಯನ್ನು ಸುಳ್ಳುಮಾಡಿದ್ದ ಅವರು, ರಾಜಕೀಯದಿಂದ ದೂರವೇ ಉಳಿಯುವುದಾಗಿ ಹೇಳಿದ್ದರು.
ಆದರೆ ಇದೀಗ ಶಶಿಕಲಾ ಅವರು ತಮ್ಮ ಬೆಂಬಲಿಗ ಜತೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಅದರಲ್ಲಿ ರಾಜಕೀಯಕ್ಕೆ ತಾವು ಎಂಟ್ರಿ ಕೊಡುವುದಾಗಿ ಹೇಳಿದ್ದಾರೆ. 'ಚಿಂತೆ ಮಾಡಬೇಡಿ. ಎಐಎಡಿಎಂಕೆಯನ್ನು ಸರಿದಾರಿಗೆ ತರಲು ನಾನು ಶೀಘ್ರದಲ್ಲೇ ರಾಜಕೀಯಕ್ಕೆ ಬರುತ್ತೇನೆ. ಕೋವಿಡ್ ಸಾಂಕ್ರಾಮಿಕ ಅಂತ್ಯವಾಗುತ್ತಲೇ ನಾನು ಬರುತ್ತೇನೆ,' ಎಂದು ಶಶಿಕಲಾ ಅವರು ಬೆಂಬಲಿಗ ಲಾರೆನ್ಸ್‌ಗೆ ಹೇಳಿರುವುದು ಆಡಿಯೊದಿಂದ ತಿಳಿದುಬಂದಿದೆ.
ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ನಡುವಿನ ಕಿತ್ತಾಟದಲ್ಲಿ ಎಐಎಡಿಎಂಕೆ ನಾಶವಾಗುತ್ತಿದೆ. ಅವರ ಕಿತ್ತಾಟದಿಂದ ಅಸಮಾಧಾನಗೊಂಡಿದ್ದೇನೆ. ಪಕ್ಷವನ್ನು ಸರಿದಾರಿಗೆ ತರಲು ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧರಿಸಿ ರಾಜಕೀಯ ಪ್ರವೇಶ ಮಾಡುತ್ತೇನೆ. ಕರೊನಾ ಗಲಾಟೆ ತಣ್ಣಗಾಗುತ್ತಿರುವಂತೆಯೇ ಪ್ರವೇಶಿಸುತ್ತೇನೆ ಎಂದಿದ್ದಾರೆ. ಆದರೆ ಈಗ ಬಹಿರಂಗಗೊಂಡಿರುವ ಆಡಿಯೋ ಶಶಿಕಲಾ ಅವರದ್ದು ಹೌದೋ ಅಲ್ಲವೋ ಎಂಬ ಬಗ್ಗೆ ಇನ್ನೊಂದೆಡೆ ಚರ್ಚೆ ಶುರುವಾಗಿದೆ. ಕೆಲವರು ಇದು ಅವರ ಮಾತು ಅಲ್ಲ ಎನ್ನುತ್ತಿದ್ದು, ಇನ್ನಷ್ಟೇ ಸತ್ಯಾಂಶ ತಿಳಿಯಬೇಕಿದೆ.
ಆದರೆ ಈ ಆಡಿಯೋ ಅಸಲಿಯದ್ದು ಎಂದಿದೆ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂನ (ಎಎಂಎಂಕೆ) ಮೂಲಗಳು, 'ಆಡಿಯೊ ಅಸಲಿಯದ್ದು. ಎಐಎಡಿಎಂಕೆಯ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ಶಶಿಕಲಾ ಒಂದೆರಡು ತಿಂಗಳ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪಕ್ಷ ಹೇಳಿದೆ.