ಮುಂಬೈ: ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ನಂತರ ಸ್ವಲ್ಪ ಕುಗ್ಗಿದ್ದ ನಟ ಶಾರುಖ್ ಖಾನ್, ಈಗ ಮತ್ತೆ ಪ್ರಚಾರಕ್ಕೆ ಬಂದಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ ಪುನಃ ಕಾಣಿಸಿಕೊಳ್ಳುತ್ತಿರುವ "ಬಾದ್ಶಾಹ್' ಈಗ ಒಟಿಟಿ ಜಗತ್ತಿಗೆ ಕಾಲಿರಿಸಿದ್ದಾರೆ.
ಈ ಹಿಂದೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನ ಜಾಹಿರಾತುಗಳಲ್ಲಿ ಶಾರುಖ್ ಕಾಣಿಸಿಕೊಂಡಿದ್ದರು. ಆಗ ಇವರು ಒಟಿಟಿಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರ ಬಳಿಕ ಕೆಲವು ಕಾರಣಗಳಿಂದ ಆ ಯೋಜನೆ ಕೈಬಿಡಲಾಯಿತು. ಈಗ ಸ್ವಂತವಾಗಿ ಒಟಿಟಿ ತೆರೆಯಲು ಹೊರಟಿದ್ದು, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಶಾರುಖ್ ಅವರು ಇದಾಗಲೇ ರೆಡ್ ಚಿಲ್ಲೀಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಸಿನಿಮಾ, ವೆಬ್ ಸರಣಿ, ಟಿವಿ ಷೋಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಇದೇ ಸಂಸ್ಥೆಯ ಅಡಿಯಲ್ಲಿ ಈಗ ಒಟಿಟಿ ಸಹ ಸ್ಥಾಪಿಸಲು ಹೊರಟಿದ್ದಾರೆ.
'ಎಸ್‌ಆರ್‌ಕೆ ಪ್ಲಸ್' ಶೀಘ್ರದಲ್ಲಿ ಬರಲಿದೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶಾರುಖ್ ಪ್ರಕಟಿಸಿದ್ದಾರೆ. ‘ಒಟಿಟಿ ಜಗತ್ತಿನಲ್ಲಿ ಒಂದು ಅದ್ಭುತ ಶೀಘ್ರದಲ್ಲಿಯೇ ನಡೆಯಲಿದೆ’ ಎಂಬ ಕ್ಯಾಪ್ಷನ್ ಜತೆಗೆ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಈಗಾಗಲೇ ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಅಮೆಜಾನ್ ಪ್ರೈಂ, ಸೋನಿ ಲಿವ್, ಜೀ5, ಆಹಾ, ಅಲ್ಟ್ ಬಾಲಾಜಿ ಸೇರಿದಂತೆ ಹಲವಾರು ಒಟಿಟಿ ಫ್ಲಾಟ್ಫಾರ್ಮ್ಗಳಿದ್ದು, ಅವುಗಳ ಜತೆಗೆ 'ಎಸ್‌ಆರ್‌ಕೆ ಪ್ಲಸ್' ಹೇಗೆ ಸ್ಪರ್ಧೆ ಒಡ್ಡಲಿದೆ ಎನ್ನುವುದನ್ನು ನೋಡಬೇಕಿದೆ.