ನ್ಯೂಸ್

ಶರ್ಮಿಳಾ ಮಾಂಡ್ರೆಯಿದ್ದ ಕಾರು ಅಪಘಾತದ ಕೇಸ್‌: ಸಲ್ಲಿಕೆಯಾಯ್ತು ಚಾರ್ಜ್‌ಷೀಟ್‌- ಕೆಲವು ಪ್ರಶ್ನೆಗಳು ಗಪ್‌ಚುಪ್‌!

ಬೆಂಗಳೂರು: ಇದೇ ಏಪ್ರಿಲ್‌ 4ರಂದು ಅಂದರೆ ಲಾಕ್‍ಡೌನ್ ಸಮಯದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅವರಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಎದ್ದಿದ್ದವು. ಇಷ್ಟು ತಿಂಗಳಾದರೂ ಇನ್ನೂ ಚಾರ್ಜ್‌ಷೀಟ್‌ ಏಕೆ ಸಲ್ಲಿಕೆಯಾಗಿಲ್ಲ ಎಂಬ ಬಗ್ಗೆ ಪ್ರಶ್ನೆಗಳ ಸುರಿಮಳೆಯೇ ಹರಿದಿತ್ತು.

ಇದಕ್ಕೀಗ ಉತ್ತರ ಎನ್ನುವಂತೆ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಆದರೆ ಕುತೂಹಲದ ಸಂಗತಿಯೆಂದರೆ ಅಪಘಾತ ಪ್ರಕರಣದಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿಯಲ್ಲ ಎಂದು ಉಲ್ಲೇಖಿಸಲಾಗಿದ್ದು, ಈ ಮೂಲಕ ನಟಿಯನ್ನು ಚಾರ್ಜ್‌ಷೀಟ್‌ನಿಂದ ಕೈಬಿಡಲಾಗಿದೆ.

32 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಆದರಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿ ಅಲ್ಲ ಎಂದು ಉಲ್ಲೇಖಿಸಲಾಗಿದೆ. ಚಾಲನೆ ಸರಿಯಾಗಿ ಬರದಿದ್ದರೂ ಓವರ್ ಸ್ಪೀಡ್‍ನಲ್ಲಿ ಕಾರು ಓಡಿಸಿರುವುದು ಅಪಘಾತಕ್ಕೆ ಮುಖ್ಯ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಈ ಕಾರನ್ನು ಶರ್ಮಿಳಾ ಅವರು ಚಲಾಯಿಸುತ್ತಿರುವುದನ್ನು ವರದಿಯಲ್ಲಿ ನಿರಾಕರಿಸಲಾಗಿದೆ. ಕಾರನ್ನು ಡಾನ್ ಥಾಮಸ್ ಓಡಿಸುತ್ತಿದ್ದ ಎಂದು ಚಾರ್ಜ್‌ಷೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಈ ಮೂಲಕ ಕಾರಿನಲ್ಲಿದ್ದ ಶರ್ಮಿಳಾ ಮಾಂಡ್ರೆ ಸೇರಿದಂತೆ ಶಿಫಾ ಜೋಹರ್, ಲೋಕೇಶ್ ಕುಮಾರ್, ನಿಖಿಲ್‌ ಅವರನ್ನು ಕೈಬಿಡಲಾಗಿದೆ.

ಏನಿದು ಪ್ರಕರಣ?

ಏಪ್ರಿಲ್ 4ರಂದು ಬೆಳಗಿನ ಜಾವ ನಟಿ ಶರ್ಮಿಳಾ ಮಾಂಡ್ರೆ ಇದ್ದ ಕಾರು ವಸಂತನಗರ ಫ್ಲೈ ಓವರ್‌ನ ಕಂಬಕ್ಕೆ ಗುದ್ದಿದ್ದ ಪ್ರಕರಣ ಇದಾಗಿದೆ.

ಅಪಘಾತವಾಗುತ್ತಿದ್ದಂತೆಯೇ ಬೆಳಗಿನ ಜಾವ 3:45ಕ್ಕೆ ಪೋರ್ಟಿಸ್ ಆಸ್ಪತ್ರೆಗೆ ತೆರಳಿದ್ದ ಗಾಯಾಳುಗಳು ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಮಧ್ಯಾಹ್ನ 1:30ರ ವೇಳೆಗೆ ಯಶವಂತಪುರದ ಸ್ಪರ್ಶ ಆಸ್ಪತ್ರೆಗೆ ತೆರಳಿದ್ದರು.

ಪೊಲೀಸರಿಗೆ ಈ ವಿಷಯ ತಿಳಿದು ಆಸ್ಪತ್ರೆಗೆ ಬರುವಷ್ಟರಲ್ಲಿ ಶರ್ಮಿಳಾ ಮಾಂಡ್ರೆ ಅಲ್ಲಿಂದ ಪರಾರಿಯಾಗಿದ್ದರು. ರಕ್ತದ ಮಾದರಿಯನ್ನು ನೀಡಿದರೆ ಸತ್ಯಾಂಶ ಹೊರಬರುವುದು ಎಂಬ ಕಾರಣಕ್ಕೆ ಅವರು ರಕ್ತದ ಮಾದರಿಯನ್ನೂ ನೀಡಿರಲಿಲ್ಲ ಎಂಬ ಆರೋಪವಿದೆ. ವೈದ್ಯರ ಮಾತನ್ನೂ ಕೇಳದೇ ಪೊಲೀಸರು ಬರುವ ಮೊದಲೇ ಹೋಗಿದ್ದೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ತರ ಏಪ್ರಿಲ್ 5ರಂದು ಹೆಬ್ಬಾಳದ ಆಸ್ಟ್ರಾ ಆಸ್ಪತ್ರೆಯಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದರು. ಈ ವೇಳೆ ಪೊಲೀಸರು ಹೋದಾಗ ಏನೂ ಮಾಹಿತಿ ನೀಡದಿದ್ದ ಅವರು ಏಪ್ರಿಲ್ 6ರಂದು ತಮ್ಮ ತಪ್ಪಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ.

ಈ ವೇಳೆ ನಾನು ಕಾರು ಚಾಲನೆ ಮಾಡಿಲ್ಲ. ನನ್ನ ಸ್ನೇಹಿತ ಡಾನ್ ಥಾಮಸ್ ಅವರು ಕಾರು ಚಾಲನೆ ಮಾಡುತ್ತಿದ್ದ. ನಾನು ಔಷಧಿ ತರುವ ಸಲುವಾಗಿ ಹೊರಗೆ ಬಂದಿದ್ದೆ ಎಂದು ಹೇಳಿದ್ದರು. ಈ ಮೂಲಕ ಘಟನೆ ನಡೆದ ಮೂರು ದಿನಗಳ ನಂತರ ಮಾಹಿತಿ ನೀಡಿದ್ದು ಏಕೆ ಎನ್ನುವ ಪ್ರಶ್ನೆಯನ್ನು ಹಲವರು ಮಾಡುತ್ತಿದ್ದಾರೆ.

ಏಪ್ರಿಲ್ ಮೊದಲ ವಾರದಲ್ಲಿ ಲಾಕ್‍ಡೌನ್ ನಿಯಮಗಳು ತುಂಬ ಬಿಗಿಯಾಗಿದ್ದಾಗ, ಔಷಧಿ ತರಲು ಸ್ನೇಹಿತರ ಜತೆ ಹೋಗಿದ್ದೇಕೆ? ಪೊಲೀಸರು ಏತಕ್ಕೆ ಅವರನ್ನು ಪ್ರಶ್ನಿಸಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಆಗ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.