ನ್ಯೂಸ್

'ವಾಪಸ್​ ಕರೆಸಿಕೊಳ್ಳಿ' ಎಂದು ಗೋಳಿಡುತ್ತಲೇ ಯೂಕ್ರೇನ್​ನಲ್ಲೂ ಭಾರತದ ವಿರುದ್ಧ ಪ್ರಚಾರ ಶುರು ಮಾಡಿದ! ಈತನ ಹಿಸ್ಟರಿ ಕೇಳಿ...

ಕೀವ್​: ಈ ಚಿತ್ರದಲ್ಲಿ ಕಾಣಿಸುತ್ತಿರುವ ಯುವಕನ ಹೆಸರು ರಶೀದ್ ರಿಜ್ವಾನ್ . ಯೂಕ್ರೇನ್​ನಲ್ಲಿ ಸಿಲುಕಿ ಭಾರತಕ್ಕೆ ವಾಪಸ್​ ಕರೆಸಿಕೊಳ್ಳಿ ಎಂದು ವಿಡಿಯೋ ಮೂಲಕ ಗೋಳಿಡುತ್ತಿರುವ ಈತ, ಅಷ್ಟಕ್ಕೇ ಸುಮ್ಮನಾಗದೇ ಭಾರತದ ವಿರುದ್ಧ ಪ್ರಚಾರದಲ್ಲಿ ತೊಡಗಿರುವುದು ಕಾಣಬಹುದು.

ರಷ್ಯಾದಲ್ಲಿ ಯುದ್ಧದ ಭೀತಿ ಎದುರಾಗಬಹುದು ಎನ್ನುವ ಕಾರಣದಿಂದ ಭಾರತ ಸರ್ಕಾರ ಕೆಲ ದಿನಗಳ ಹಿಂದೆಯೇ ಭಾರತದ ವಿದ್ಯಾರ್ಥಿಗಳ ವಾಪಸಿಗೆ ಸೂಚಿಸಿತ್ತು. ಆದರೆ ಅಲ್ಲಿಯ ಕಾಲೇಜುಗಳು 'ಯುದ್ಧ-ಗಿದ್ಧ ಏನೂ ನಡೆಯಲ್ಲ, ರಷ್ಯಾ ಹೀಗೆ ಹೇಳುತ್ತ 10 ವರ್ಷ ಆಗಿದೆ' ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಶುರು ಮಾಡಿದ್ದವು. ಆದರೆ ಇದೀಗ ಎಲ್ಲಾ ಮಾರ್ಗಗಳು ಬಂದ್​ ಆಗಿರುವ ನಡುವೆಯೇ, ಭಾರತ ಸರ್ಕಾರ ವಿದ್ಯಾರ್ಥಿಗಳನ್ನು ವಾಪಸ್​ ಕರೆಸಿಕೊಳ್ಳುತ್ತಿದೆ. ಯುದ್ಧ ಆರಂಭವಾದ ಮೊದಲ ದಿನದಿಂದಲೇ ‘ಆಪರೇಷನ್ ಗಂಗಾ’ವನ್ನು ಪ್ರಾರಂಭಿಸಿದೆ. ಇದಾಗಲೇ ಸಹಸ್ರಾರು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿದೆ.

ಆದರೆ ರಿಜ್ವಾನ್​ ಮಾಡಿರುವ ಈ ವಿಡಿಯೋದಲ್ಲಿ 'ಯೂಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ಭಾರತ ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಕೆಲವು ವಿದ್ಯಾರ್ಥಿಗಳು 10 ಗಂಟೆಗಳ ಕಾಲ ಗಡಿಯಲ್ಲಿ ಕುಳಿತಿದ್ದರೂ ಯಾವುದೇ ಅಧಿಕಾರಿ ಅವರನ್ನು ನೋಡಲು ಬಂದಿಲ್ಲ. ಯಾರೂ ಸಂಪರ್ಕ ಮಾಡುತ್ತಿಲ್ಲ. ಈ ಸ್ಥಿತಿಯಲ್ಲಿರುವುದಕ್ಕಿಂತ ಕ್ಷಿಪಣಿ ತನ್ನನ್ನು ಹೊಡೆದುರುಳಿಸುವುದು ಉತ್ತಮ' ಎಂದು ಹೇಳಿರುವುದನ್ನು ಕೇಳಬಹುದು. ಅದನ್ನು ಒಂದು ವರ್ಗದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಈ ರಶೀದ್ ರಿಜ್ವಾನ್ ಯಾರು? ಯೂಕ್ರೇನ್​ನಲ್ಲಿಯೂ ಭಾರತದ ವಿರುದ್ಧ ಅಪಪ್ರಚಾರಕ್ಕೆ ತೊಡಗಿ ಇಡೀ ವಿಶ್ವದ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹಾಳು ಮಾಡಲು ಹೊರಟಿರುವ ಈತ ಯಾರು ಎಂದು ನೋಡಲು ಈತ ಇಲ್ಲಿಯವರೆಗೆ ಮಾಡುತ್ತಾ ಬಂದಿರುವ ಟ್ವೀಟ್​ಗಳನ್ನೊಮ್ಮೆ ನೋಡಬೇಕು.

ಭಾರತದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಶುರುವಾದ ದಿನದಿಂದ, ಭಾರತದ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡುತ್ತಾ ಟ್ವೀಟ್​ ಮಾಡುತ್ತಿದ್ದವ ಇದೇ ರಶೀದ್ ರಿಜ್ವಾನ್. ಹಿಂದೂ ವಿರೋಧಿ ದಂಗೆಗಳ ಸಂದರ್ಭದಲ್ಲಿ ರಿಜ್ವಾನ್ ಸಫೂರಾ ಜರ್ಗರ್ ಎಂಬ ಜಿಹಾದಿಯನ್ನ ಬೆಂಬಲಿಸಿದ್ದ. ಜರ್ಗರ್ ಮುಸ್ಲಿಂ ಎಂಬ ಕಾರಣಕ್ಕೆ ತನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದ.

2020 ರಲ್ಲಿ, ತನ್ನ ಅಜ್ಜನ ಶವದ ಮೇಲೆ ಕುಳಿತು ಪಾಕಿಸ್ತಾನಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಮೂರು ವರ್ಷದ ಬಾಲಕಿಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಭಾರತ ಸರ್ಕಾರಕ್ಕೆ ಈತ ಟ್ವಿಟರ್​ ಮೂಲಕ ಶಾಪ ಹಾಕಿದ್ದ. ಭೂಮಿಯ ಮೇಲಿನ ಸ್ವರ್ಗವನ್ನು ಭೂಮಿಯ ಮೇಲಿನ ನರಕವನ್ನಾಗಿ ಮಾಡಲಾಗಿದೆ ಎಂದು ರಶೀದ್ ಈ ಚಿತ್ರದ ಮೂಲಕ ಹೇಳಿದ್ದ.

ಕೃಷಿ ಕಾನೂನುಗಳ ವಿರುದ್ಧ ರೈತರ ಹೆಸರಿನಲ್ಲಿ ನಡೆದ ಹೋರಾಟದ ಸಮಯದಲ್ಲಿ ಭಾರತದ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಟ್ವಿಟರ್​ ಮೂಲಕ ಕಾರಿದ್ದ. ನಂತರ ಕೃಷಿ ಕಾಯ್ದೆ ವಾಪಸ್​ ಪಡೆದಾಗ ಈ ಗೆಲುವು ರೈತರಿಗೆ ಮಾತ್ರವಲ್ಲ, ಶಾಹೀನ್‌ಬಾಗ್‌ನ ಪ್ರತಿಭಟನಾಕಾರರಿಗೂ ದೊಡ್ಡ ಗೆಲುವು ಎಂದು ಹೇಳಿದ್ದ.

ರಶೀದ್ ರಿಜ್ವಾನ್ ಬಿಹಾರದ ಗೋಪಾಲ್ಗಂಜ್ ನಿವಾಸಿಯಾಗಿದ್ದು, ಈತ ಟ್ವಿಟರ್ ಹ್ಯಾಂಡಲ್ @rshdrizwan ಮೂಲಕ ಭಾರತ ವಿರೋಧಿ ಪ್ರಚಾರದಲ್ಲಿ ಇನ್ನೂ ಹಲವು ಬಾರಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

ಯೂಕ್ರೇನ್​ನಿಂದ ಮಾಡಿರುವ ಈ ವಿಡಿಯೋ ನೋಡಿ...