ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾಯ್ದೆ ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸುತ್ತಿದ್ದಂತೆಯೇ ಇದಕ್ಕೆ ಭಾರಿ ಪ್ರಮಾಣದಲ್ಲಿ ಪರ-ವಿರೋಧ ನಿಲುವು ವ್ಯಕ್ತವಾಗತೊಡಗಿದೆ. ಪ್ರಧಾನಿಯವರು ಘೋಷಣೆ ಮಾಡಿದರೂ ಸಂಸತ್ತಿನಲ್ಲಿ ಅದು ಅಂಗೀಕಾರ ಆಗುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ.
ಅದೇ ವೇಳೆ ಮೃತಪಟ್ಟ ಪ್ರತಿಭಟನಾಕಾರರ ಕುಟುಂಬಕ್ಕೆ ಪರಿಹಾರ ನೀಡುವಂತೆ ಪಟ್ಟು ಕೂಡ ಹಿಡಿದಿವೆ. ಮೂರು ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆಯಲ್ಲಿ ಮೃತ ಪಟ್ಟ ರಾಜ್ಯದ ರೈತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಎಂಎಸ್ಪಿ ಬೇಡಿಕೆ ಕೂಡ ರೈತರಿಗೆ ಪ್ರಮುಖವಾದುದು. ಈ ಬಗ್ಗೆ ಸರ್ಕಾರದಿಂದ ಖಚಿತ ನಿರ್ಧಾರ ಆಗಬೇಕಿದೆ. ಜತೆಗೆ ಪ್ರತಿಭಟನಾ ಸಮಯದಲ್ಲಿ ಮರಣಿಸಿದ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಆಸರೆ ನೀಡುವುದು ಸರ್ಕಾರದ ಕರ್ತವ್ಯ. ಜತೆಗೆ ವಿವಾದಾತ್ಮಕವಾದ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೈಬಿಡಬೇಕು ಎನ್ನುವುದು ಅವರ ಆಗ್ರಹ.
ಒಂದು ವೇಳೆ ಸಂಸತ್ತಿನಲ್ಲಿ ಕಾಯ್ದೆ ರದ್ದತಿ ಅಂಗೀಕಾರವಾದರೆ ಹಾಗೂ ಪ್ರತಿಭಟನಾಕಾರರ ಮನವಿ ಎಲ್ಲವೂ ಈಡೇರಿದರೆ, ಸದ್ಯ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡಲೇಬೇಕಾಗುತ್ತದೆ. ಇದೀಗ ಅದರ ಬೆನ್ನಲ್ಲೇ ಇಲ್ಲಿಯವರೆಗೆ ಮೌನವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಾಪಸು ಪಡೆಯಬೇಕು ಎಂದು ಪ್ರತಿಭಟನೆ ಶುರು ಮಾಡಲು ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ನಾನು ತೀರ್ಮಾನಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದಿದ್ದಾರೆ ಜಮಾಯಿತ್ ಉಲೇಮಾ-ಇ ಹಿಂದ್ ಅಧ್ಯಕ್ಷ ಮೌಲಾನಾ ಅರ್ಷಾದ್ ಮದನಿ.
ಇದರ ಜತೆಗೆ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಮರುಜಾರಿ ಮಾಡಬೇಕು ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಿಂದಕ್ಕೆ ಪಡೆಯುವ ಬಗ್ಗೆ ಹೋರಾಟ ಮಾಡುವುದಾಗಿ ಮುಸ್ಲಿಂ ಮುಖಂಡರು ಹೇಳಿಕೆ ನೀಡಿದ್ದಾರೆ.
ಭಾರತದ ನೆರೆಯ ರಾಷ್ಟ್ರಗಳಿಂದ ಅಂದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ (ಸಕ್ರಮವಾಗಿ ಅಥವಾ ಅಕ್ರಮವಾಗಿ) 6 ಧಾರ್ಮಿಕ ಅಲ್ಪಸಂಖ್ಯಾತ (ಹಿಂದು, ಕ್ರೈಸ್ತ, ಸಿಖ್, ಪಾರ್ಸಿ, ಜೈನ ಮತ್ತು ಬೌದ್ಧ) ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಮಸೂದೆಯೇ ಪೌರತ್ವ ತಿದ್ದುಪಡಿ ಮಸೂದೆ-2019. ಹಳೆಯ ಕಾಯ್ದೆಯಲ್ಲಿ ವಿದೇಶಿಗರು ಕಾನೂನುಬದ್ಧವಾಗಿ ಭಾರತಕ್ಕೆ ವಲಸೆ ಬಂದು ಇಲ್ಲಿ 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ನೆಲೆಸಿದ್ದರೆ ಪೌರತ್ವ ಪಡೆಯಲು ಅರ್ಹರಾಗಿದ್ದರು.
ಆದರೆ ಹೊಸ ತಿದ್ದುಪಡಿ ಕಾಯ್ದೆಯಲ್ಲಿ ಭಾರತಕ್ಕೆ ಮೇಲಿನ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿದ್ದರೂ ಇಲ್ಲಿ 6 ವರ್ಷ ವಾಸವಿದ್ದರೆ ಆರು ಧರ್ಮೀಯರು ಭಾರತದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ತಿದ್ದುಪಡಿಯನುಸಾರ 2014ರ ಡಿಸೆಂಬರ್ 31ರ ಒಳಗೆ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರು ಭಾರತದ ಪೌರತ್ವ ಪಡೆಯಲು ಅರ್ಹರು. ಯಾವುದೇ ಸೂಕ್ತ ದಾಖಲೆ ಇಲ್ಲದಿದ್ದರೂ ಅವರು ಅರ್ಜಿ ಸಲ್ಲಿಸಬಹುದು. ಆದರೆ ಈ ರಾಷ್ಟ್ರಗಳಿಂದ ವಲಸೆ ಬಂದ ಮುಸ್ಲಿಮರಿಗೆ ಈ ಕಾಯ್ದೆಯು ಪೌರತ್ವ ನೀಡುವುದಿಲ್ಲ. ಇದರ ವಿರುದ್ಧ ಎರಡು ವರ್ಷಗಳ ಹಿಂದೆ ಭಾರಿ ಹೋರಾಟ ನಡೆದಿತ್ತು. ನಂತರ ರೈತರ ಪ್ರತಿಭಟನೆ, ಕರೊನಾದಿಂದಾಗಿ ಅದು ತಣ್ಣಗಾಗಿತ್ತು. ಈಗ ಈ ಪ್ರತಿಭಟನೆ ಮುಗಿಯುವ ಹಂತದಲ್ಲಿ ಇರುವ ಕಾರಣ, ಅದನ್ನು ಶುರು ಮಾಡಲು ಚರ್ಚೆ ಶುರುವಾಗಿದೆ.
ನವೆಂಬರ್ 29ರಂದು ಚಳಿಗಾಲದ ಅಧಿವೇಶನ ಶುರುವಾಗಲಿದೆ. ಈ ಸಂದರ್ಭದಲ್ಲಿ ಕೂಡ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಪರೆನ್ಸ್ ಮತ್ತು ಪಿಡಿಪಿಗಳು 370ನೇ ವಿಧಿ ಮರುಜಾರಿಗೆ ಒತ್ತಾಯಿಸಿದರೆ, ಕಾಂಗ್ರೆಸ್, ಟಿಎಂಸಿ ಇನ್ನಿತರ ಪಕ್ಷಗಳು ಸಿಎಎ ರದ್ದತಿಗೆ ಆಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.