ನೈಜೇರಿಯಾ: ಅತ್ಯಾಚಾರದ ಪ್ರಕರಣಗಳ ವರದಿಯಾದಾಗಲೆಲ್ಲ, ಮಹಿಳಾ ಸಂಘಟನೆಗಳು ಸೇರಿದಂತೆ ಬಹುತೇಕ ಮಂದಿ ಹೇಳುವುದು ಒಂದೇ ಒಂದು ಶಿಕ್ಷೆ, ಅದೇ ಅತ್ಯಾಚಾರ ಮಾಡಿದ ಭಾಗವನ್ನೇ ಕಟ್ ಮಾಡಬೇಕು ಎನ್ನುವುದು.
ಅತ್ಯಾಚಾರದ ವಿರುದ್ಧದ ಆಕ್ರೋಶ, ಅಸಹನೆ, ಸಂತ್ರಸ್ತೆಯ ನರಕದ ಬಾಳು ಎಲ್ಲವನ್ನೂ ನೋಡಿದಾಗ ಅತ್ಯಾಚಾರಿಗೆ ಗಲ್ಲುಶಿಕ್ಷೆಗಿಂತಲೂ ಘೋರವಾದದ್ದು ಈ ಶಿಕ್ಷೆ ಎನ್ನುವ ಮಾತೇ ಎಲ್ಲೆಡೆ ಕೇಳಿಬರುತ್ತದೆ.
ಆದರೆ ಕೆಲವು ಕಾನೂನು ತೊಡಕುಗಳಿಂದಾಗಿ ಇಂಥ ನಿಯಮ ಬಹುಶಃ ಎಲ್ಲಿಯೂ ಜಾರಿಯಾಗಿಲ್ಲ.
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ಕಲ್ಲು ಹೊಡೆದು ಸಾಯಿಸುವುದು, ಜೀವಾವಧಿ ಜೈಲು ಶಿಕ್ಷೆ ಹೀಗೆ ವಿವಿಧ ರೀತಿಯ ಶಿಕ್ಷೆ ಬೇರೆ ಬೇರೆ ದೇಶಗಳಲ್ಲಿ ನೀಡಲಾಗುತ್ತದೆ. ಯಾವ ಶಿಕ್ಷೆಗೂ ಬಗ್ಗದ ಅತ್ಯಾಚಾರಿಗಳು ಗಡಗಡ ಎನ್ನುವಂಥ ಕಾನೂನನ್ನು ನೈಜೇರಿಯಾ ಜಾರಿಗೊಳಿಸಿದೆ. ಅದೇ ಅತ್ಯಾಚಾರಿಯ ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ, ಆತ ಇನ್ನೆಂದೂ ಸೆಕ್ಸ್ ಮಾಡುವ ಸಾಹಸಕ್ಕೆ ಕೈಹಾಕದಂತೆ ಮಾಡಲಾಗುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದ ಅಪರಾಧಿ ಎಂದಿಗೂ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗುವುದಿಲ್ಲ.
ನೈಜೀರಿಯಾದಲ್ಲಿ ಅತ್ಯಾಚಾರದ ವರದಿಗಳಲ್ಲಿ ಭಾರೀ ಹೆಚ್ಚಳಕಂಡುಬಂದ ಹಿನ್ನೆಲೆಯಲ್ಲಿ, ಅದರಲ್ಲಿಯೂ ಕರೊನಾ ವೈರಸ್ನ ಈ ದಿನಗಳಲ್ಲಿಯೂ ಅತ್ಯಾಚಾರ ಹೆಚ್ಚಾಗುತ್ತಿರುವ ಕಾರಣ, ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ನೈಜೀರಿಯಾ ದೇಶದ ಕಾಡುನ ರಾಜ್ಯದ ಗವರ್ನರ್ ನಾಸಿರ್ ಅಹ್ಮದ್ ಎಲ್ ರುಫಾಯಿ ಇಂಥದ್ದೊಂದು ಕಾನೂನು ಜಾರಿಗೆ ತಂದಿದ್ದಾರೆ.
ಅತ್ಯಾಚಾರಿಗಳು ಮತ್ತು ಲೈಂಗಿಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳು ಕರೆ ನೀಡಿರುವ ಹಿನ್ನಲೆಯಲ್ಲಿ ಹೊಸದಾಗಿ ಈ ರೀತಿಯಾಗಿ ಕಾನೂನು ತಿದ್ದುಪಡಿ ಮಾಡಲಾಗಿದೆ.
ಅತ್ಯಾಚಾರ ಆರೋಪ ಸಾಬೀತಾದರೆ ಶಸ್ತ್ರಚಿಕಿತ್ಸೆಯ ಮೂಲಕ ವೃಷಣಕ್ಕೆ ಕತ್ತರಿ ಹಾಕಲಾಗುತ್ತದೆ. ಇದರಿಂದಾಗಿ ಆತ ಇನ್ನೆಂದೂ ಲೈಂಗಿಕ ಕ್ರಿಯೆ ಮಾಡುವ ತಾಕತ್ತು ಹೊಂದುವುದಿಲ್ಲ. ಇದರ ಜತೆಗೆನೇ, 14 ವರ್ಷ ಮೇಲ್ಪಟ್ಟವರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. 14 ವರ್ಷದೊಳಗಿನ ಮಗುವಿನ ಮೇಲೆ ಅತ್ಯಾಚಾರ ಎಸಗಿದವರಿಗೆ ನೈಜೀರಿಯಾದಲ್ಲಿ ಹೊಸ ಕಾನೂನಿನ ಅನ್ವಯ ಮರಣದಂಡನೆ ಶಿಕ್ಷೆ ಯಾಗಲಿದೆ.