ಚೆನ್ನೈ: ಸಾಲು ಸಾಲು ಚಿತ್ರದಲ್ಲಿ ಬಿಜಿಯಾಗಿರುವ ಟಾಲಿವುಡ್‌ನ ಖ್ಯಾತ ನಟ ರಾಣಾ ದಗ್ಗುಬಾಟಿ ಅಲಿಯಾಸ್ ರಾಮನಾಯ್ಡು ರಾಣಾ ದಗ್ಗುಬಾಟಿ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದು ಇವರ ಸುತ್ತ ಸುತ್ತಿಕೊಂಡಿದ್ದು, ಕೋರ್ಟ್ ಬಾಗಿಲಿಗೆ ಹೋಗಿದ್ದಾರೆ.
2014ರಲ್ಲಿ ಫಿಲಂ ನಗರದಲ್ಲಿನ ಭೂವಿವಾದ ಇದಾಗಿದ್ದು, ಕೋರ್ಟ್ ನೋಟಿಸ್ ಆಧಾರದ ಮೇಲೆ ಇವರು ಸ್ಥಳೀಯ ಸಿವಿಲ್ ಕೋರ್ಟ್ಗೆ ಹಾಜರಾಗಿದ್ದರು.
ಏನಿದು ವಿವಾದ?
ಫಿಲಂ ನಗರದಲ್ಲಿನ ಜಾಗವನ್ನು 2014ರಲ್ಲಿ ಕಂಪನಿಯೊಂದು ಲೀಸ್ಗೆ ಪಡೆದಿತ್ತು. ಆದರೆ, ಆ ಕಂಪೆನಿಯ ಮಾಲೀಕರ ಮಗ ರಾಣಾ ಹೆಸರಿಗೆ ಜಮೀನು ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ಗೆ ನಟ ಹಾಜರು ಆಗಿದ್ದರು.
ವಿಚಾರಣೆಯನ್ನು ಮುಂದೂಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ನಟ ಕೋರ್ಟ್ ಆವರಣದಿಂದ ತೆರಳಿದ್ದಾರೆ.
ಅಂದಹಾಗೆ ರಾಣಾ ಅವರು, ಟಾಲಿವುಡ್‌ನ ಖ್ಯಾತ ನಿರ್ಮಾಪಕ ಮತ್ತು ಕೈಗಾರಿಕೋದ್ಯಮಿಯ ಮೊಮ್ಮಗ ಹಾಗೂ ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ. 2010ರಲ್ಲಿ ಲೀಡರ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಾಣಾ ಅವರು ಇದಾಗಲೇ ಹಲವಾರು ಚಿತ್ರಗಳಲ್ಲಿ ಮಿಂಚಿದ್ದು, ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ರಾಣಾ ತಮ್ಮದೇ ಆದ ನಿರ್ಮಾಣ ಕಂಪೆನಿ ಸ್ಪಿರಿಟ್ ಮೀಡಿಯಾವನ್ನು ಹೊಂದಿದ್ದಾರೆ, ಅದರ ಮೂಲಕ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಅದರ ನಂತರ ಅವರು 2010 ರಲ್ಲಿ ನಟಿಸಲು ಪ್ರಾರಂಭಿಸಿದರು. ರಾಣಾ ಇದುವರೆಗೆ ಹಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.