ನವದೆಹಲಿ: ಇಡೀ ಭಾರತ ಮಾತ್ರವಲ್ಲದೇ ಕೆಲವು ವಿದೇಶಗಳ ಕಣ್ಣು ಆಗಸ್ಟ್ 5ರ ಐತಿಹಾಸಿಕ ಘಟನೆಯತ್ತ ನೆಟ್ಟಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಯ ಶುಭದಿನವಿದು.
ಅಂದ ಹಾಗೆ, 29 ವರ್ಷಗಳ ಹಿಂದೆ ಅಂದರೆ 1991ರಲ್ಲಿ ನರೇಂದ್ರ ಮೋದಿಯವರು ಛಾಯಾಚಿತ್ರಕಾರನಿಗೆ ಮಾಡಿದ್ದ ಪ್ರತಿಜ್ಞೆ ಕೂಡ ಆಗಸ್ಟ್ 5ರಂದು ಈಡೇರಲಿದೆ ಎನ್ನುವ ಅಚ್ಚರಿ ವಿಷಯ ಇದೀಗ ಬಹಿರಂಗೊಂಡಿದೆ.
ಹೌದು. 1991ರಲ್ಲಿ ರಾಮ ಮಂದಿರದ ಆಂದೋಲನ ನಡೆಯುತ್ತಿತ್ತು. ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ಮೋದಿಯವರು ಛಾಯಾಚಿತ್ರಕಾರ ಮಹೇಂದ್ರ ತ್ರಿಪಾಠಿ ಜತೆ ಮಾತನಾಡುತ್ತಾ, ‘ಈ ರಾಮ ಮಂದಿರ ನಿರ್ಮಾಣ ಕಾರ್ಯ ಯಾವಾಗ ಆರಂಭವಾಗುತ್ತದೆಯೋ, ಅಂದು ನಾನು ಮತ್ತೆ ಬರುತ್ತೇನೆ’ ಎಂದಿದ್ದರಂತೆ.
ಈ ವಿಷಯವನ್ನು ಮೆಲುಕು ಹಾಕಿರುವ ತ್ರಿಪಾಠಿಯವರು, ‘ ಆ ಸಮಯದಲ್ಲಿ ರಾಮಜನ್ಮ ಭೂಮಿ ಬಳಿ ನಾನು ಫೋಟೋ ಸ್ಟುಡಿಯೋ ಹೊಂದಿದ್ದೆ. ಆಗ ರಾಮಮಂದಿರದ ಆಂದೋಲನ ನಡೆಯುತ್ತಿದ್ದ ವೇಳೆ. ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿಯವರ ಜತೆ ನರೇಂದ್ರ ಮೋದಿಯವರೂ ಬಂದಿದ್ದರು. ಅಂದು ತಾನು ಅಯೋಧ್ಯೆಯಲ್ಲಿದ್ದ ಏಕೈಕ ಫೋಟೋಗ್ರಫರ್ ಆಗಿದ್ದು, ವಿಎಚ್‌ಪಿ ಜತೆ ನನಗೆ ಸಂಪರ್ಕವಿತ್ತು.
ಫೋಟೋ ತೆಗೆಯಲೆಂದು ಹೋಗಿದ್ದ ವೇಳೆ ಜೋಶಿಯವರು ಮೋದಿಯವರನ್ನು ನನಗೆ ಪರಿಚಯಿಸುತ್ತಾ ಇವರು ಗುಜರಾತ್ ರಾಜಕಾರಣಿ ಎಂದು ಅಲ್ಲಿ ಬಂದಿದ್ದ ಮಾಧ್ಯಮದವರಿಗೆ ಪರಿಚಯ ಮಾಡಿಸಿದ್ದರು. ಜೋಶಿ ಹಾಗೂ ಮೋದಿಯವರು ಇರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಆ ಫೋಟೋ ತೆರೆದದ್ದು ನಾನೇ ಎಂದು ತ್ರಿಪಾಠಿ ಹೇಳಿದ್ದಾರೆ.
ಅಂದು ಹೀಗೇ ಮಾತನಾಡುತ್ತಿದ್ದ ವೇಳೆ, ಮೋದಿಯವರಿಗೆ ಪತ್ರಕರ್ತರು ಮತ್ತೆ ಯಾವಾಗ ಇಲ್ಲಿಗೆ ಬರುತ್ತೀರೆಂದು ಪ್ರಶ್ನಿಸಿದ್ದರು. ನಾನು ಕೂಡ ಸಹಜವಾಗಿಯೇ ಈ ಪ್ರಶ್ನೆ ಅವರ ಮುಂದೆ ಇಟ್ಟಿದ್ದೆ. ಆ ಪ್ರಶ್ನೆಗೆ ಮೋದಿಯವರು, ‘ಯಾವ ದಿನ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತದೋ ಅಂದು ಮರಳಿ ಬಂದೇ ಬರುತ್ತೇನೆ’ ಎಂದಿದ್ದರು. ಆದರೆ ರಾಮ ಮಂದಿರಕ್ಕಿದ್ದ ಎಲ್ಲಾ ಕಾನೂನು ತೊಡಕುಗಳನ್ನು ಸುಗಮಗೊಳಿಸಿ ದೇಶದ ಪ್ರಧಾನಿಯಾಗಿ ಬರುತ್ತಿದ್ದುದು ನಿಜಕ್ಕೂ ಅಚ್ಚರಿಯೇ ಸರಿ ಎಂದಿದ್ದಾರೆ. (ಏಜೆನ್ಸೀಸ್)